Friday, 22nd November 2024

BJP Protest: ಸಿಎಂ ರಾಜೀನಾಮೆಗೆ ಆಗ್ರಹ; ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ನಾಯಕರು ವಶಕ್ಕೆ

BJP Protest

ಬೆಂಗಳೂರು: ಮುಡಾ ಹಗರಣದಲ್ಲಿ ತನಿಖೆಗೆ ಆದೇಶ ನೀಡಿರುವುದರಿಂದ ಸಿಎಂ ಸಿದ್ದರಾಮಯ್ಯ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ವಿಧಾನಸೌಧದ ಎದುರು ಗುರುವಾರ ಪ್ರತಿಭಟನೆ (BJP Protest) ನಡೆಸಿದರು.

ತನಿಖೆಗೆ ನ್ಯಾಯಾಲಯ ಆದೇಶಿಸಿದರೂ ಮುಡಾ ಹಗರಣದ ರೂವಾರಿ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದೆ ಭಂಡತನ ಮೆರೆಯುತ್ತಿದ್ದಾರೆ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿ ವಿಪಕ್ಷದ ಶಾಸಕರು ಆಕ್ರೋಶ ಹೊರಹಾಕಿದರು. ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ವಿಪಕ್ಷ ನಾಯಕ ಆರ್.ಅಶೋಕ್‌ ಸೇರಿ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿ, ದ್ವಾರಕ್ಕೆ ಬೀಗ ಜಡಿದು ಪ್ರತಿಭಟಿಸಲು ಬಿಜೆಪಿ ನಾಯಕರು ಮುಂದಾಗುತ್ತಿದ್ದಂತೆ ಅವರನ್ನು ತಡೆಯಲು ಪೊಲೀಸರು ಮುಂದಾದರು. ಈ ವೇಳೆ ಮಾತಿನ ಚಕಮಕಿ ನಡೆದಾಗ ನುಸುಳಿಕೊಂಡು ಓಡಿದ ಶಾಸಕ ಅರವಿಂದ ಬೆಲ್ಲದ್, ವಿಧಾನಸೌಧ ದ್ವಾರಕ್ಕೆ ಬೀಗ ಜಡಿಯುವ ಪ್ರಯತ್ನ ನಡೆಸಿದರು. ಆದರೆ ಪೊಲೀಸರು ಗೇಟ್ ಮುಚ್ಚಿ ಶಾಸಕರ ಪ್ರಯತ್ನ ವಿಫಲಗೊಳಿಸಿದರು. ನಂತರ ಪ್ರತಿಭಟನಾನಿರತ ಶಾಸಕರು, ಸಂಸದರು, ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದರು.

ಪ್ರತಿಭಟನೆ ವೇಳೆ ಮಾತನಾಡಿದ ಆರ್. ಅಶೋಕ್ ಅವರು, ಸಿದ್ದರಾಮಯ್ಯಗೆ ಬೇರೆ ಆಯ್ಕೆಯೇ ಇಲ್ಲ, ಕೋರ್ಟ್ ಎಫ್ಐಆರ್ ದಾಖಲಿಸಲು ಸೂಚಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆರೋಪ ಬಂದಾಗ ರಾಜೀನಾಮೆ ನೀಡಿ ಎಂದಿದ್ದಿರಿ. ಈಗ ನೀವು ಅದನ್ನು ಪಾಲಿಸಬೇಕಲ್ಲವೇ? ಈಶ್ವರಪ್ಪ ವಿರುದ್ಧ ಆರೋಪ ಬಂದಾಗ ರಾಜೀನಾಮೆ ಕೊಡುವವರೆಗೂ ವಿಧಾನಸೌಧದಲ್ಲಿ ಕುಸ್ತಿ ಮಾಡಿದಿರಿ. ಈಗ ಯಾಕೆ ಮೌನವಾಗಿದ್ದೀರಿ? ಹಿರಿಯ ವಕೀಲ ಬಿ.ವಿ. ಆಚಾರ್ಯ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಕೂಡ ರಾಜೀನಾಮೆ ಸೂಕ್ತ ಎಂದಿದ್ದಾರೆ. ಈಗ ಸಿಎಂ ಸ್ಥಾನಕ್ಕೆ ಟವಲ್ ಹಾಕಿಕೊಂಡು ಏಳು ಜನ ಕುಳಿತಿದ್ದಾರೆ. ಅವರು ಹೇಳುವ ಮೊದಲೇ ರಾಜೀನಾಮೆ ನೀಡಿ. ಇಲ್ಲದೇ ಇದ್ದರೆ ಅವರೇ ದಂಗೆ ಎದ್ದು ನಿಮ್ಮನ್ನು ಇಳಿಸಲಿದ್ದಾರೆ ಎಂದು ಲೇವಡಿ ಮಾಡಿದರು.

ಈ ಸುದ್ದಿಯನ್ನೂ ಓದಿ | Sanjay Raut: ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತು; ಶಿವಸೇನೆ ಮುಖಂಡ ಸಂಜಯ್‌ ರಾವತ್‌ ಅರೆಸ್ಟ್‌

ಪ್ರತಿಭಟನೆಯಲ್ಲಿ‌ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌, ಅರವಿಂದ್‌ ಬೆಲ್ಲದ್, ಆರಗ ಜ್ಞಾನೇಂದ್ರ, ಹರೀಶ್‌ ಪೂಂಜಾ, ಸಂಸದರಾದ ಗೋವಿಂದ ಕಾರಜೋಳ, ಬ್ರಿಜೇಶ್‌ ಚೌಟ ಮತ್ತಿತರರು ಇದ್ದರು.