Thursday, 7th November 2024

Money Tips: ಇಪಿಎಫ್‌ ಕ್ಲೈಮ್‌ ತಿರಸ್ಕೃತಗೊಳ್ಳಲು ಕಾರಣವೇನು? ಸಮಸ್ಯೆ ಬಗೆ ಹರಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌

Money Tips

ಬೆಂಗಳೂರು: ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿರುವ ನೌಕರರ ಭವಿಷ್ಯ ನಿಧಿ (Employees’ Provident Fund)ಯನ್ನು ನಿರ್ವಹಿಸುವ ನೌಕರರ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation)ಯು ನಿವೃತ್ತಿಗೆ ಮುಂಚಿತವಾಗಿ ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಒಂದಷ್ಟು ಮೊತ್ತವನ್ನು ಹಿಂಪಡೆಯಲು ಅನುಮತಿ ನೀಡುತ್ತದೆ. ನೀವು ಇದಕ್ಕಾಗಿ ಕ್ಲೈಮ್‌ ಮಾಡಿದ ಗರಿಷ್ಠ 10 ದಿನಗಳಲ್ಲಿ ಹಣ ಖಾತೆಗೆ ವರ್ಗವಾಗುತ್ತದೆ. ಆದರೆ ಕೆಲವೊಮ್ಮೆ ನಿಮ್ಮ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಇದೆ. ಯಾಕೆ ಇದು ಸಂಭವಿಸುತ್ತದೆ? ಇದನ್ನು ಬಗೆ ಹರಿಸುವುದು ಹೇನಗೆ? ಇಲ್ಲಿದೆ ಸಂಪೂರ್ಣ ವಿವರ (Money Tips).

ಯಾವಾಗೆಲ್ಲ ಕ್ಲೈಮ್‌ ಮಾಡಬಹುದು?

ಇಪಿಎಫ್‌ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದರೂ ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಹಣವನ್ನು ಹಿಂಪಡೆಯಬಹುದು. ವೈದ್ಯಕೀಯ ತುರ್ತು ಪರಿಸ್ಥಿತಿ, ಮದುವೆ, ಶಿಕ್ಷಣ, ನಿರುದ್ಯೋಗ, ಮನೆ ನವೀಕರಣ ಮುಂತಾದ ಸಂದರ್ಭಗಳಲ್ಲಿ ಒಂದಷ್ಟು ಹಣವನ್ನು ಹಿಂಪಡೆಯಬಹುದಾಗಿದೆ.

ಅರ್ಜಿ ತಿರಸ್ಕೃತಗೊಳ್ಳಲು ಕಾರಣ

  • ಅಪೂರ್ಣ ಅಥವಾ ತಪ್ಪಾದ ಕೆವೈಸಿ: ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಆಧಾರ್ ಕಾರ್ಡ್‌ ಜತೆಗೆ ಲಿಂಕ್ ಮಾಡಲಾಗಿದೆ ಮತ್ತು ನಿಮ್ಮ ಮೊಬೈಲ್ ನಂಬರ್‌ ಮತ್ತು ವಿಳಾಸವನ್ನು ನವೀಕರಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದಾಗದಿದ್ದರೆ ನಿಮ್ಮ ಅರ್ಜಿ ಸ್ವೀಕೃತಗೊಳ್ಳುವುದಿಲ್ಲ.
  • ವಿವರಗಳಲ್ಲಿನ ವ್ಯತ್ಯಾಸಗಳು: ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ವೈಯಕ್ತಿಕ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅರ್ಜಿ ತಿರಸ್ಕೃತಗೊಳ್ಳುತ್ತದೆ.
  • ತಪ್ಪಾದ ಬ್ಯಾಂಕ್ ಖಾತೆ ವಿವರಗಳು: ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್‌ಸಿ ಕೋಡ್ ಮತ್ತು ಶಾಖೆಯ ಹೆಸರು ತಪ್ಪಾಗಿದ್ದರೂ ಅರ್ಜಿ ಕ್ಯಾನ್ಸಲ್‌ ಆಗುತ್ತದೆ.
  • ಅಪೂರ್ಣ ದಾಖಲೆಗಳು: ನಿಮ್ಮ ಕ್ಲೈಮ್ ಫಾರ್ಮ್, ಗುರುತಿನ ಪುರಾವೆ, ವಿಳಾಸ ಮತ್ತು ಬ್ಯಾಂಕ್ ಖಾತೆ ವಿವರಗಳಂತಹ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸದಿದ್ದರೆ ಅರ್ಜಿ ತಿರಸ್ಕೃತಗೊಳ್ಳುತ್ತದೆ.
  • ಅನರ್ಹ ಕ್ಲೈಮ್: ಕೆಲವೊಂದು ಸಂದರ್ಭದಲ್ಲಿ ಮಾತ್ರ ನೀವು ಹಣ ಹಿಂಪಡೆಯಬಹುದು. ಇಪಿಎಫ್‌ಒ ಅನುಮತಿಸದ ಕಾರಣಗಳನ್ನು ನೀವು ನಮೂದಿಸಿದ್ದರೆ ಕ್ಲೈಮ್‌ ಸ್ವೀಕೃತವಾಗುವುದಿಲ್ಲ. ವಿತ್‌ಡ್ರಾ ಉದ್ದೇಶವನ್ನು ಸ್ಪಷ್ಟವಾಗಿ ಉಲ್ಲೇಖಿಸದಿರುವುದೂ ಅರ್ಜಿ ತಿರಸ್ಕೃತಗೊಳ್ಳಲು ಮತ್ತೊಂದು ಕಾರಣ.
  • ಬಾಕಿ ಇದ್ದರೆ: ಇಪಿಎಫ್ ಖಾತೆಯಿಂದ ನೀವು ತೆಗೆದುಕೊಂಡಿದ್ದ ಸಾಲ ಅಥವಾ ಮುಂಗಡ ಹಣ ಮರುಪಾವತಿಸದಿದ್ದರೆ ಕ್ಲೈಮ್‌ ಕ್ಯಾನ್ಸಲ್‌ ಆಗುತ್ತದೆ.
  • ಉದ್ಯೋಗದಾತ ಕಂಪನಿಯ ಸಮಸ್ಯೆಗಳು: ಕೆಲವು ಸಂದರ್ಭಗಳಲ್ಲಿ ನಿಮ್ಮ ಉದ್ಯೋಗದಾತರು ಇಪಿಎಫ್ ನಿಯಮಗಳನ್ನು ಅನುಸರಿಸುವಲ್ಲಿ ಎಡವಿದ್ದರೆ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸುವ ಸಾಧ್ಯತೆ ಇದೆ.

ಏನು ಮಾಡಬೇಕು?

ನೀವು ಕೆಲವೊಂದು ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ ಇಂತಹ ತೊಂದರೆಯಿಂದ ಪಾರಾಗಬಹುದು. ಅದಕ್ಕೆ ನೀವೇನು ಮಾಡಬೇಕು ಎನ್ನುವ ವಿವರ ಇಲ್ಲಿದೆ.

  • ನಿಮ್ಮ ಕೆವೈಸಿಯನ್ನು ನವೀಕರಿಸಿ: ಇಪಿಎಫ್ಒ ಪೋರ್ಟಲ್‌ನಲ್ಲಿ ನಿಮ್ಮ ಕೆವೈಸಿ ವಿವರಗಳನ್ನು ನಿಯಮಿತವಾಗಿ ನವೀಕರಿಸಿ.
  • ಮಾಹಿತಿಯನ್ನು ಪರಿಶೀಲಿಸಿ: ನೀವು ಕ್ಲೈಮ್ ಸಲ್ಲಿಸುವ ಮೊದಲು ಒದಗಿಸಿದ ಎಲ್ಲ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿ.
  • ಅಗತ್ಯ ದಾಖಲೆಗಳನ್ನು ಸಲ್ಲಿಸಿ: ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಅರ್ಹತೆಯನ್ನು ಪರಿಶೀಲಿಸಿ: ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ
  • ಬಾಕಿ ಇರುವ ಪಾವತಿ ಉಳಿಸಬೇಡಿ: ನೀವು ಈ ಹಿಂದೆ ಯಾವುದಾದರೂ ಸಾಲ ಪಡೆದುಕೊಂಡಿದ್ದರೆ ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.
  • ಕಂಪನಿ ಜತೆ ಮಾತನಾಡಿ: ನಿಮ್ಮ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ಯಾವುದೇ ಸಮಸ್ಯೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಸಮಸ್ಯೆ ಬಗೆಹರಿಯದಿದ್ದರೆ ಹೀಗೆ ಮಾಡಿ

  • ಇಪಿಎಫ್ಒ ಕುಂದುಕೊರತೆ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿ.
  • ನಿಮ್ಮ ಉದ್ಯೋಗದಾತ ಇಪಿಎಫ್ ಖಾತೆಯನ್ನು ನಿರ್ವಹಿಸುವ ಪ್ರಾದೇಶಿಕ ಇಪಿಎಫ್ ಕಚೇರಿಗೆ ಭೇಟಿ ನೀಡಿ.
  • ನಿಮ್ಮ ಉದ್ಯೋಗದಾತರು ಸಹಕರಿಸದಿದ್ದರೆ ಕಾರ್ಮಿಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿ.

ಇಪಿಎಫ್‌ ಖಾತೆಯ ವೈಶಿಷ್ಟ್ಯ

  • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
  • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
  • ಇದು ಭಾರತದಲ್ಲಿ ಕಡ್ಡಾಯ.
  • ಕೇಂದ್ರ ಸರ್ಕಾರವು ಪ್ರತಿ ವರ್ಷ ನಿರ್ದಿಷ್ಟ ಪ್ರಮಾಣದಲ್ಲಿ ಬಡ್ಡಿ ಒದಗಿಸುತ್ತದೆ. 2023-24ರ ಹಣಕಾಸು ವರ್ಷದಲ್ಲಿ ಶೇ. 8.25ರಷ್ಟು ಬಡ್ಡಿ ವಿಧಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Personal Finance: ನಿಮ್ಮ ಹಣಕಾಸು ಸುರಕ್ಷಿತವಾಗಿರಬೇಕೆ? ಅ.1ರ ಒಳಗೆ ಹೀಗೆ ಮಾಡಿ!