Wednesday, 30th October 2024

Health insurance: ಭಾರತದಲ್ಲಿ ಹೆಚ್ಚಾಗುತ್ತಿವೆ ಅಪಾಯಕಾರಿ ರೋಗಗಳು: ವಿಮಾ ಕಂಪನಿಯ ವರದಿಯಲ್ಲಿವೆ ಕಟು ವಾಸ್ತವ ಬಹಿರಂಗ

Health insurance

ಭಾರತದ ಆಸ್ಪತ್ರೆಗಳು ದುಬಾರಿಯಾಗುತ್ತಿರುವ ಜತೆಗೆ (Hospitalisation costs) ಅಪಾಯಕಾರಿ ರೋಗಗಳ ಪ್ರಮಾಣ ಹೆಚ್ಚಾಗುತ್ತಿದೆ. 2023- 24ರಲ್ಲಿ ಅತಿ ಹೆಚ್ಚು ಮಂದಿ ಹೃದ್ರೋಗಕ್ಕಾಗಿ (Heart Disease) ಆರೋಗ್ಯ ವಿಮೆ (Health insurance) ಕ್ಲೈಮ್ ಗಳನ್ನು ಮಾಡಿದ್ದಾರೆ. ಹೃದ್ರೋಗಕ್ಕೆ ಸಂಬಂಧಿಸಿದ ಕ್ಲೈಮ್‌ಗಳು 1 ಕೋಟಿ ರೂ. ಗೂ ಅಧಿಕವಾಗಿದೆ ಎಂದು ಆಕೊ ಇಂಡಿಯಾ ಹೆಲ್ತ್ ವರದಿ (ACKO India Health Report ) ತಿಳಿಸಿದೆ.

ಆಸ್ಪತ್ರೆಯ ವೆಚ್ಚಗಳ ಪ್ರಮಾಣಗಳು ಹೆಚ್ಚಳವಾಗುತ್ತಿದ್ದು, 2023- 24ರಲ್ಲಿ ಸರಾಸರಿ ಕ್ಲೈಮ್ 70,558 ಕೋಟಿ ರೂ. ನಷ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ 62,548 ಕೋಟಿ ರೂ. ಆಗಿದ್ದು ಈ ವರ್ಷದಲ್ಲಿ ಶೇ. 11.35ರಷ್ಟು ಹೆಚ್ಚಳವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಣದುಬ್ಬರವು ಪ್ರಸ್ತುತ ಶೇ. 14ರಷ್ಟಿದೆ. ಜೀವನಶೈಲಿ ಸಂಬಂಧಿತ ರೋಗಗಳು ಹೆಚ್ಚಳವಾಗುತ್ತಿವೆ ಎಂದು ಆಕೊ ವಿಮಾ ಕಂಪನಿಯು ತನ್ನ ವರದಿಯಲ್ಲಿ ತಿಳಿಸಿದೆ. ಲಿಂಗ ಆಧಾರದ ಮೇಲೆ ಪುರುಷರು ಸರಾಸರಿ 77,543 ರೂ. ಕ್ಲೈಮ್ ಮಾಡಿದ್ದರೆ. ಹೆರಿಗೆ ಹೊರತುಪಡಿಸಿ ಮಹಿಳೆಯರು 69,553 ರೂ. ವರೆಗೆ ಕ್ಲೈಮ್ ಮಾಡಿದ್ದಾರೆ.

2023- 24ರ ಅವಧಿಯಲ್ಲಿ ಆಕೊಗೆ 60,000 ಆರೋಗ್ಯ ವಿಮೆ ಕ್ಲೈಮ್‌ಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ ಬಹುತೇಕ ವರದಿಯು ಪ್ರಾಥಮಿಕ ಆರೋಗ್ಯದ ಅಪಾಯಗಳಿಗೆ ಸಂಬಂಧಿಸಿದ್ದು. ಇದು ವ್ಯಕ್ತಿ ಮತ್ತು ಕುಟುಂಬದ ಮೇಲೆ ಉಂಟಾಗುವ ಆರ್ಥಿಕ ಹೊರೆಯ ಬಗ್ಗೆಯೂ ಹೇಳಿದೆ. ಸಾಕಷ್ಟು ಆರೋಗ್ಯ ವಿಮಾ ರಕ್ಷಣೆ ಪಡೆಯುವುದು ಇಂದು ಅತ್ಯವಶ್ಯಕ ಎಂಬುದನ್ನು ವರದಿ ತಿಳಿಸಿದೆ.

Health insurance

ವೆಚ್ಚದಲ್ಲಿ ಹೆಚ್ಚಳ

ಆಂಜಿಯೋಪ್ಲ್ಯಾಸ್ಟಿ (PTCA) ವೆಚ್ಚವು 2018 ರಲ್ಲಿ 1- 1.5 ಲಕ್ಷ ರೂ. ಗಳಿಂದ 2024 ರಲ್ಲಿ 2- 3 ಲಕ್ಷ ರೂ. ಗಳಿಗೆ ಹೆಚ್ಚಳವಾಗಿದೆ. 2030ರ ವೇಳೆಗೆ ಈ ವೆಚ್ಚವು 6- 7 ಲಕ್ಷ ರೂ. ಗಳನ್ನು ತಲುಪಬಹುದು. ಅದೇ ರೀತಿ ಮೂತ್ರಪಿಂಡ ಕಸಿ ವೆಚ್ಚವು 2018ರಲ್ಲಿ 5- 8 ಲಕ್ಷ ರೂ. ನಿಂದ 2024ರಲ್ಲಿ 10- 15 ಲಕ್ಷ ರೂ. ಗೆ ಹೆಚ್ಚಳವಾಗಿದೆ. 2030ರ ವೇಳೆಗೆ ಇದು 20 ಲಕ್ಷ ರೂಪಾಯಿಗಳನ್ನು ಮೀರುವ ಸಾಧ್ಯತೆ ಇದೆ.

ವಯಸ್ಸು ಮತ್ತು ರೋಗ ಲಕ್ಷಣಗಳು

ವಯಸ್ಸು ಮತ್ತು ರೋಗ ಲಕ್ಷಣಗಳು ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿದೆ. 18 ವರ್ಷದೊಳಗಿನ ಮಕ್ಕಳು ಉಸಿರಾಟದ ತೊಂದರೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಇದು ಈ ವಯಸ್ಸಿನಲ್ಲಿ ಶೇ. 11ಕ್ಕಿಂತ ಹೆಚ್ಚಾಗಿರುತ್ತದೆ. 18 ವರ್ಷದ ಅನಂತರ ಇದು ಕಡಿಮೆಯಾಗುತ್ತದೆ. 18ರಿಂದ 30 ವರ್ಷದವರಲ್ಲಿ ಇದು ಕೇವಲ ಶೇ. 2.79 ರಷ್ಟಿದ್ದು, 31 ರಿಂದ 40 ವರ್ಷ ವಯಸ್ಸಿನವರಲ್ಲಿ ಇದು ಶೇ. 2.98ರಷ್ಟಿರುತ್ತದೆ. 40 ವರ್ಷ ವಯಸ್ಸಿನ ಅನಂತರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗುವವವರ ಪ್ರಮಾಣ ಶೇ. 3ರಷ್ಟಾಗಿದೆ.

ಕಿಡ್ನಿ ಸಂಬಂಧಿತ ಕಾಯಿಲೆ ಪ್ರಕರಣ ದೆಹಲಿಯಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಬಳಿಕ ಕೊಚ್ಚಿ, ಸಿಕಂದರಾಬಾದ್ ಮತ್ತು ಬೆಂಗಳೂರು ಕೂಡ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡಿದೆ. ದೆಹಲಿ ಎನ್‌ಸಿಆರ್‌ನಲ್ಲಿ ಒಟ್ಟು ಕ್ಲೈಮ್‌ಗಳಲ್ಲಿ ಶೇ. 35.3 ಮೂತ್ರಪಿಂಡಕ್ಕೆ ಸಂಬಂಧಿಸಿದವು. ಅನಂತರ ಕೊಚ್ಚಿ ಶೇ. 18, ಸಿಕಂದರಾಬಾದ್ ಶೇ. 17.4, ಬೆಂಗಳೂರು ಶೇ. 13.1 ಮತ್ತು ಜೈಪುರ ಶೇ. 12.8. ದೇಶಾದ್ಯಂತ ಮೂತ್ರಪಿಂಡ ಕಾಯಿಲೆ ರೋಗಿಗಳ ಸರಾಸರಿ ವಯಸ್ಸು 47 ಆಗಿದೆ.

Health insurance

ಹೆರಿಗೆ ಸಂಬಂಧಿಸಿದ ಕ್ಲೈಮ್ ಗಳು

ಸಿಜೇರಿಯನ್ ವಿಭಾಗದ ಹೆರಿಗೆಗಾಗಿ ಶೇ. 69 ರಷ್ಟು ಮಂದಿ ಕ್ಲೈಮ್ ಗಳನ್ನೂ ಸಲ್ಲಿಸಿದ್ದಾರೆ. ಸಾಮಾನ್ಯ ಹೆರಿಗೆಯು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 31ರಷ್ಟು ಕ್ಲೈಮ್‌ಗಳನ್ನು ಹೊಂದಿದೆ.

Microplastic: ಮೈಕ್ರೋಪ್ಲಾಸ್ಟಿಕ್ ಸೇವನೆ ತಪ್ಪಿಸಲು ಈ ಏಳು ಅಂಶಗಳನ್ನು ಪಾಲಿಸಿ

ಚಿಲ್ಲರೆ ಆರೋಗ್ಯ ವಿಮೆ

ಚಿಲ್ಲರೆ ಆರೋಗ್ಯ ವಿಮೆ ಹೊಂದಿರುವುದು ಅತ್ಯಗತ್ಯ ಎಂಬುದನ್ನು ಈ ಅಂಕಿ ಅಂಶಗಳು ಬಹಿರಂಗ ಪಡಿಸಿದೆ. ಯಾಕೆಂದರೆ ಕಾರ್ಪೊರೇಟ್ ಪಾಲಿಸಿಗಳು ಕೆಲವು ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. ಕಳೆದ ವರ್ಷದಲ್ಲಿ ಎಸಿಕೆಒನ ಪ್ಲಾಟಿನಂ ಚಿಲ್ಲರೆ ಆರೋಗ್ಯ ಯೋಜನೆಯು ಕ್ಲೈಮ್ ಮಾಡಿದ ಒಟ್ಟು ಆಸ್ಪತ್ರೆ ಬಿಲ್‌ಗಳ ಶೇ. 100ರಷ್ಟನ್ನು ಒಳಗೊಂಡಿದೆ. ಆದರೆ ಕಾರ್ಪೊರೇಟ್ ನಿಯಮಗಳಲ್ಲಿ ಶೇ. 74 ಅನ್ನು ಮಾತ್ರ ಒಳಗೊಂಡಿದೆ. ಈ ಅಂತರವು ಹೆಚ್ಚಾಗಿ ಉದ್ಯೋಗದಾತರು ರೂಪಿಸಿರುವ ನಿಯಮ ಮತ್ತು ಷರತ್ತುಗಳಿಂದಾಗಿರುತ್ತದೆ.