Friday, 22nd November 2024

NIA Raid : ಬೆಂಗಳೂರಿನಲ್ಲಿ ಎನ್‌ಐಎ ದಾಳಿ; ಶಂಕಿತ ಭಯೋತ್ಪಾದಕನ ಸೆರೆ

NIA Raid

ಬೆಂಗಳೂರು : ಮಹಾನಗರದ ಹೊರವಲಯದ ಜಿಗಣಿ ಪ್ರದೇಶದಲ್ಲಿ ಎನ್‌ಐಎ ಅಧಿಕಾರಿಗಳು ದಿಢೀರ್‌ ದಾಳಿ ಮಾಡಿ ಶಂಕಿತ ಭಯೋತ್ಪಾದಕನೊಬ್ಬನನ್ನು (NIA Raid) ಬಂಧಿಸಿದ್ದಾರೆ. ಗಿರೀಶ್ ಬೋರಾ ಅಲಿಯಾಸ್ ಗೌತಮ್‌ ಬಂಧಿತ ಆರೋಪಿ. ಅಸ್ಸಾಂನ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳು ಬಂಧಿಸಿದ್ದಾರೆ. ಶಂಕಿತ ವ್ಯಕ್ತಿ ನಿಷೇಧಿತ ಉಲ್ಫಾ (ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ) ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ. ಸುಳ್ಳು ಗುರುತಿನ ಚೀಟಿ ನೀಡಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆತ ತನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ.

ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಎನ್ಐಎ ಅಧಿಕಾರಿಗಳು ಆಗಸ್ಟ್‌ ಗುವಾಹಟಿಯಲ್ಲಿ ಐಇಡಿ ಬಾಂಬ್ ಇರಿಸುವಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಿ ಬೋರಾ ನನ್ನು ವಶಕ್ಕೆ ಪಡೆದಿದ್ದಾರೆ. ಗೌತಮ್ ಎಂಬ ಹೆಸರು ಇಟ್ಟು ಬೆಂಗಳೂರಿನ ಖಾಸಗಿ ಕಂಪನಿಗೆ ಸೇರಿದ್ದ ಬೋರಾ, ಗುವಾಹಟಿಯಲ್ಲಿ ಐದು ಬಾಂಬ್‌ಗಳನ್ನು ಇಟ್ಟಿದ್ದ ತನಿಖೆಯಿಂದ ತಿಳಿದುಬಂದಿದೆ.

ಬಾಂಬ್ ಸ್ಫೋಟದ ನಂತರ ಬೋರಾ ಬೆಂಗಳೂರಿನ ಉಪನಗರವಾದ ಆನೇಕಲ್ ತಾಲೂಕಿನ ಜಿಗಣಿಗೆ ಸ್ಥಳಾಂತರಗೊಂಡಿದ್ದ. ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾಗಲೂ ಅಲ್ಲಿನ ಚಟುವಟಿಕೆಗಳನ್ನು ಮಾಡುತ್ತಿದ್ದ ಎಂದು ಹೇಳಲಾಗಿದೆ. ಅಸ್ಸಾಂ ಎನ್ಐಎ ಅಧಿಕಾರಿಗಳು ಬೋರಾನನ್ನು ಬಂಧಿಸಿ ಮೊಬೈಲ್ ಫೋನ್ ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ತನಿಖೆಗಾಗಿ ಅಸ್ಸಾಂಗೆ ಸಾಗಿಸುವ ಮೊದಲು ಬೆಂಗಳೂರಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ: Tamilnadu Horror: ಕಾರಿನಲ್ಲಿ ಒಂದೇ ಕುಟುಂಬ ಐವರ ಶವ ಪತ್ತೆ

ಹೆಚ್ಚುವರಿ ದಾಳಿಗಳನ್ನು ಯೋಜಿಸುವಾಗ ಅನುಮಾನ ಬಾರದಂತೆ ನೋಡಿಕೊಳ್ಳುವುದಕ್ಕೆ ಸೆಕ್ಯುರಿಟಿ ಗಾರ್ಡ್ ಆಗಿ ಕಂಪನಿಗೆ ಸೇರಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತನ ಬಂಧನ ಸಂಭಾವ್ಯ ಭಯೋತ್ಪಾದಕ ಬೆದರಿಕೆಗಳನ್ನು ತಪ್ಪಿಸಿದೆ.