Thursday, 14th November 2024

Free Bus Passes: ಗ್ರಾಮೀಣ ಪತ್ರಕರ್ತರಿಗೆ ಗುಡ್‌ ನ್ಯೂಸ್‌; ಉಚಿತ ಬಸ್ ಪಾಸ್ ಜಾರಿಗೆ ಸರ್ಕಾರ ಆದೇಶ

Free Bus Passes

ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಪತ್ರಕರ್ತರ ದಶಕಗಳ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ರೆ ಒತ್ತಿದ್ದಾರೆ. ಗ್ರಾಮೀಣ ಪತ್ರಕರ್ತರ ಉಚಿತ ಪಾಸ್ (Free Bus Passes) ಜಾರಿಗೆ ಅಧಿಕೃತ ಆದೇಶ ಹೊರಡಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.

ಈ ಬಗ್ಗೆ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತ ಅದೇಶ ಹೊರಡಿಸಿದ್ದು, 2024-25ನೇ ಸಾಲಿನ ಆಯವ್ಯಯಲ್ಲಿ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ 2024ರ ಮಾರ್ಚ್‌ 21ರಲ್ಲಿದ್ದಂತೆ ಮಾಧ್ಯಮ ಪಟ್ಟಿಯಲ್ಲಿರುವ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆಯನ್ನಾಧರಿಸಿ, ರಾಜ್ಯಾದ್ಯಂತ ಒಟ್ಟು 5222 ಪತ್ರಕರ್ತರಿಗೆ ಈ ಯೋಜನೆಯನ್ನು ಒದಗಿಸಲು, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ನೀಡಿರುವ ಅಂದಾಜಿನಂತೆ, ಪ್ರತಿ ಪಾಸುದಾರರಿಗೆ ಪ್ರತಿ ತಿಂಗಳಿಗೆ 2500 ರೂ.ಗಳಾಗಬಹುದೆಂದು ವೆಚ್ಚವನ್ನು ಅಂದಾಜಿಸಿಲಾಗಿದೆ.

ಈ ಸುದ್ದಿಯನ್ನೂ ಓದಿ | KEA Exam: ಸೆ.29ಕ್ಕೆ VAO ಕಡ್ಡಾಯ ಕನ್ನಡ ಪರೀಕ್ಷೆ; ಪ್ರವೇಶ ಪತ್ರಕ್ಕಾಗಿ ಅರ್ಜಿ ಸಂಖ್ಯೆ ಪಡೆಯಲು ಲಿಂಕ್‌ ಬಿಡುಗಡೆ

ಈ ಲೆಕ್ಕಚಾರದಂತೆ ಪ್ರತಿ ತಿಂಗಳಿಗೆ 1,30,55,000 ರೂ.ಗಳು ಹಾಗೂ ವಾರ್ಷಿಕ ಅಂದಾಜು ಅನುದಾನ 15,66,60,000 ರೂ.ಗಳ ಅವಶ್ಯಕತೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಯೋಜನೆಯನ್ನು ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಈ ಕೆಳಗಿನ ಮಾರ್ಗಸೂಚಿಗಳು ಹಾಗೂ ಷರತ್ತುಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮಾರ್ಗಸೂಚಿಗಳು

ಗ್ರಾಮೀಣ ಪತ್ರಕರ್ತರು ಬಸ್ ಪಾಸ್ ಪಡೆಯುಲು ಈ ಕೆಳಕಂಡ ಷರತ್ತುಗಳನ್ನು ಪೂರೈಸಿರಬೇಕು

  • ಅರ್ಜಿದಾರರು ಪ್ರತಿನಿಧಿಸುವ ಮಾಧ್ಯಮ ಸಂಸ್ಥೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರಬೇಕು.
  • ಅರ್ಜಿದಾರರು ಪೂರ್ಣಾವಧಿಗೆ ನೇಮಕವಾಗಿದ್ದು ಕನಿಷ್ಠ 4 ವರ್ಷಗಳಾಗಿರಬೇಕು. ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಸೇವಾ ಅನುಭವ ಹೊಂದಿರಬೇಕು.
  • ಪೂರ್ಣಾವಧಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ನೇಮಕಾತಿ ಆದೇಶ, ವೇತನ ರಸೀದಿ/ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ಸೇವಾನುಭವಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು.
  • ಸಾಮಾನ್ಯ ಮನರಂಜನಾ ಹಾಗೂ ಇತರೆ ಪ್ರಕಾರಗಳ ವಾಹಿನಿಗಳ ಪ್ರತಿನಿಧಿಗಳಿಗೆ ಬಸ್ ಪಾಸ್
  • ಗಳನ್ನು ನೀಡಲಾಗುವುದಿಲ್ಲ.
  • ಈ ಯೋಜನೆಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ವ್ಯಾಪ್ತಿಯ (ಎಕ್ಸ್ ಪ್ರೆಸ್ ಸೇರಿದಂತೆ) ಎಲ್ಲಾ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಲು ಸೀಮಿತಗೊಳಿಸಿದೆ.
  • ಆಸಕ್ತ ಪತ್ರಕರ್ತರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಸಂಪಾದಕರ, ಮುಖ್ಯಸ್ಥರ ಶಿಫಾರಸಿನೊಂದಿಗೆ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತಮ್ಮ ಕಾರ್ಯ ವ್ಯಾಪ್ತಿಯ ಜಿಲ್ಲಾ ಮಟ್ಟದ ಉಪ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು/ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
  • ಜಿಲ್ಲಾ ಕೇಂದ್ರಗಳಿಂದ ಈ ಸೌಲಭ್ಯಕ್ಕೆ ಆಯ್ಕೆಯಾದ ಪತ್ರಕರ್ತರ ಪಟ್ಟಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕ್ರೋಡೀಕರಿಸಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ನೀಡಲಾಗುವುದು. ಸದರಿ ಸಂಸ್ಥೆಯು ಮುದ್ರಿಸಿಕೊಡುವ ಬಸ್‌ಪಾಸ್ ಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲಾ ಪತ್ರಿಕಾ ಸಂಪಾದಕರಿಗೆ/ವರದಿಗಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
  • ಈ ಎಲ್ಲಾ ಪ್ರಕ್ರಿಯೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಂಟಿ ನಿರ್ದೇಶಕರು (ಸುಮಪ) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಇವರುಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
  • ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ, ಮಾಧ್ಯಮ ಮಾನ್ಯತಾ ಪತ್ರ ಪಡೆಯದ ಪತ್ರಕರ್ತರು, ಅವರು ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲಿ ಕರ್ನಾಟಕ ಸಾರಿಗೆ ವ್ಯಾಪ್ತಿಯ (ಎಕ್ಸ್ ಪ್ರೆಸ್ ಸೇರಿದಂತೆ ) ಬಸ್ ಗಳಲ್ಲಿ ಸಂಚರಿಸಲು ಬಸ್ ಪಾಸ್ ಅವಕಾಶ ಕಲ್ಪಿಸಿದೆ.
  • ಅರ್ಜಿದಾರರು ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ವನ್ನು ಸಲ್ಲಿಸುವುದು.

ರಾಜ್ಯಮಟ್ಟದ ಪತ್ರಿಕೆಗಳು

ರಾಜ್ಯಮಟ್ಟದ ಪತ್ರಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 15 ಪತ್ರಿಕೆಗಳಿದ್ದು (ಕನ್ನಡ ಮತ್ತು ಆಂಗ್ಲ ಸೇರಿ) ಜಿಲ್ಲೆಗಳಲ್ಲಿ ಸದರಿ ಪತ್ರಿಕೆಗಳ ಸಂಸ್ಥೆಯ ಮುಖ್ಯಸ್ಥರು ಸೂಚಿಸುವ ತಾಲ್ಲೂಕಿಗೆ ಓರ್ವ ವರದಿಗಾರರಂತೆ ಬಸ್ ಪಾಸ್ ನೀಡಲಾಗುವುದು.

ಜಿಲ್ಲಾ ಮಟ್ಟದ ಪತ್ರಿಕೆಗಳು
ಪತ್ರಿಕೆಗಳ ಸಂಪಾದಕರು ಮಾಧ್ಯಮ ಮಾನ್ಯತಾ ಪತ್ರ ಪಡೆದಿರದಿದ್ದರೆ ಸಂಪಾದಕರು ಅಥವಾ ಸಂಪಾದಕರು ಶಿಫಾರಸು ಮಾಡುವ ಜಿಲ್ಲೆಯ ಓರ್ವ ವರದಿಗಾರರು.

ಪ್ರಾದೇಶಿಕ ಪತ್ರಿಕೆಗಳು
ಪ್ರಾದೇಶಿಕ ಪತ್ರಿಕೆಗಳ ವರದಿಗಾರರಿಗೆ, ಪತ್ರಿಕೆಯ ಪುಟಗಳ ಸಂಖ್ಯೆ ಆಧರಿಸಿ ಈ ಕೆಳಗಿನಂತೆ ಬಸ್‌ಪಾಸ್‌ಗಳನ್ನು ನೀಡಲಾಗುವುದು.

  • ಆರು ಪುಟ : ಪತ್ರಿಕೆಯ ಸಂಪಾದಕರು ಶಿಫಾರಸು ಮಾಡುವ ಒಬ್ಬ ವರದಿಗಾರರು ಹಾಗೂ ಒಬ್ಬ ಛಾಯಾಗ್ರಾಹಕರು
  • ಎಂಟು ಅಥವಾ ಹೆಚ್ಚು ಪುಟಗಳಿದ್ದರೆ ಸಂಪಾದಕರು ಶಿಫಾರಸು ಮಾಡುವ ಇಬ್ಬರು ವರದಿಗಾರರು ಹಾಗೂ ಒಬ್ಬ ಛಾಯಾಗ್ರಾಹಕರು (ಒಂದು ವೇಳೆ ಛಾಯಾಗ್ರಾಹಕರು ಕಾರ್ಯ ನಿರ್ವಹಿಸತ್ತಿಲ್ಲವಾದಲ್ಲಿ ಸಂಪಾದಕರು ಶಿಫಾರಸ್ಸು ಮಾಡಿದ ಓರ್ವ ವರದಿಗಾರರಿಗೆ ನೀಡುವುದು)

ನಿಯತಕಾಲಿಕೆಗಳು
ನಿಯತಕಾಲಿಕೆಗಳಿಗೆ ಬಸ್‌ಪಾಸ್ ನೀಡಲು ಅವಕಾಶವಿಲ್ಲ.

ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು
ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಬಸ್‌ಪಾಸ್ ನೀಡಲು ಅವಕಾಶವಿಲ್ಲ.

ವಿದ್ಯುನ್ಮಾನ ಮಾಧ್ಯಮ
ಮಾಧ್ಯಮ ಮಾನ್ಯತಾ ನಿಯಮಾವಳಿಗಳು-2009ರನ್ವಯ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪಗ್ರಹ ವಾಹಿನಿಗಳ ಒಬ್ಬ ವರದಿಗಾರ ಮತ್ತು ಒಬ್ಬ ಕ್ಯಾಮೆರಾಮನ್‌ಗೆ ಮಾಧ್ಯಮ ಮಾನ್ಯತಾ ಪತ್ರ ಹಾಗೂ ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಲು ಬಸ್ ಪಾಸ್(ಸ್ಮಾರ್ಟ್ ಕಾರ್ಡ್) ನೀಡಲಾಗಿದೆ. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರಾಜ್ಯದ ಉಪಗ್ರಹ ವಾಹಿನಿಗಳ ಪೂರ್ಣಾವಧಿ ವರದಿಗಾರರು, ಕ್ಯಾಮೆರಾಮನ್ ಕಾರ್ಯ ನಿರ್ವಹಿಸುತ್ತಿರುವುದಿಲ್ಲ. ಅದಾಗಿಯೂ ತಾಲೂಕು ಕೇಂದ್ರಗಳಲ್ಲಿ ಉಪಗ್ರಹ ವಾಹಿನಿಗಳ ವರದಿಗಾರರು ಮತ್ತು ಕ್ಯಾಮೆರಾಮ್ಯಾನ್ ಸೇವೆ ಸಲ್ಲಿಸುತ್ತಿದ್ದಲ್ಲಿ ಜಿಲ್ಲೆಗೆ ಓರ್ವ ವರದಿಗಾರ ಮತ್ತು ಓರ್ವ ಕ್ಯಾಮೆರಾಮ್ಯಾನ್‌ಗೆ (ವಾಹಿನಿಯ ಸಂಪಾದಕರು ಶಿಫಾರಸಿನ ಅನ್ವಯ) ನೀಡಲಾಗುವುದು.

ಈ ಸುದ್ದಿಯನ್ನೂ ಓದಿ | Money Tips: ಇಪಿಎಫ್‌ ಕ್ಲೈಮ್‌ ತಿರಸ್ಕೃತಗೊಳ್ಳಲು ಕಾರಣವೇನು? ಬಗೆ ಹರಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌

ಷರತ್ತುಗಳು

  • ಬಸ್ ಪಾಸ್‌ನ ಅವಧಿ 2 (ಎರಡು) ವರ್ಷ.
  • ಬಸ್ ಪಾಸ್ ಪಡೆದ ಪತ್ರಕರ್ತರು ಮಾಧ್ಯಮ ಸಂಸ್ಥೆ ತೊರೆದರೆ, ರಾಜೀನಾಮೆ ನೀಡಿದರೆ ಅಥವಾ ಮೃತಪಟ್ಟರೆ ಅವರು ಪಡೆದ ಈ ಬಸ್‌ಪಾಸ್ ಅನ್ನು/ ದಾಖಲೆಗಳನ್ನು ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಕಚೇರಿಗೆ ಹಿಂತಿರುಗಿಸಬೇಕು. ತಪ್ಪಿದಲ್ಲಿ ಅವರ ಬದಲಿಗೆ ಸಂಸ್ಥೆಯ ಬೇರೊಬ್ಬರಿಗೆ ಬಸ್‌ಪಾಸ್‌ ನೀಡಲು ಅವಕಾಶವಿರುವುದಿಲ್ಲ.
  • ಬಸ್‌ಪಾಸ್‌ನ ಅವಧಿ ಪೂರ್ಣಗೊಂಡ ನಂತರ ಸಂಪಾದಕರ ಶಿಫಾರಸಿನೊಂದಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕು. ಈ ಸಂದರ್ಭದಲ್ಲಿ ಬಸ್‌ಪಾಸ್‌ಗೆ ನಿಗದಿಪಡಿಸಿದ ಅರ್ಹತಾ ಷರತ್ತುಗಳನ್ನು ಅರ್ಜಿದಾರರು ಹಾಗೂ ಅವರು ಪ್ರತಿನಿಧಿಸುವ ಮಾಧ್ಯಮ ಸಂಸ್ಥೆಯು ಪೂರ್ಣಗೊಳಿಸಿದ್ದರೆ ಮಾತ್ರ ಅಂತಹವರ ಬಸ್‌ಪಾಸ್‌ನ್ನು ನವೀಕರಿಸಲಾಗುವುದು.
  • ಈಗಾಗಲೇ ಮಾಧ್ಯಮ ಮಾನ್ಯತಾ ಪತ್ರ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಪಾಸ್ ಹೊಂದಿರುವ ಪತ್ರಕರ್ತರು ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ.
  • ಪತ್ರಕರ್ತರ ಮಾಸಾಶನ ಪಡೆಯುವ ಪತ್ರಕರ್ತರು ಬಸ್‌ಪಾಸ್ ಪಡೆಯಲು ಅರ್ಹರಾಗಿರುವುದಿಲ್ಲ.

ಆಯ್ಕೆ ಸಮಿತಿ

ಆಸಕ್ತ ಪತ್ರಕರ್ತರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಸಂಪಾದಕರ/ ಮುಖ್ಯಸ್ಥರ ಶಿಫಾರಸಿನೊಂದಿಗೆ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಮಟ್ಟದ ಉಪ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಜಿಲ್ಲಾ ವಾರ್ತಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಶಿಫಾರಸಿನೊಂದಿಗೆ ನಿಗದಿಪಡಿಸಿದ ನಿಯಮಾನುಸಾರ ಕೇಂದ್ರ ಕಚೇರಿಗೆ ಕಳುಹಿಸಿಕೊಡಬೇಕು.

ಸಮಿತಿಯು ವರ್ಷಕ್ಕೆ ಎರಡು ಸಭೆಗಳನ್ನು ಕರೆದು ಸ್ವೀಕೃತವಾದ ಅರ್ಜಿಗಳನ್ನು ನಿಯಮಾನುಸಾರ
ಇತ್ಯರ್ಥಪಡಿಸಬೇಕು. ಸಮಿತಿಯು ಅನುಮೋದಿಸಿದ ಅರ್ಜಿದಾರರ ಮಾಹಿತಿಯನ್ನು ವಾರ್ತಾ ಇಲಾಖೆಯ ಆಯಾ ಜಿಲ್ಲೆಗಳ ವಾರ್ತಾ ಅಧಿಕಾರಿಗಳು ಇ.ಡಿ.ಸಿಎಸ್ ಸೇವಾ ಸಿಂಧು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ -ಒನ್‌ಗಳ ಮೂಲಕ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.