ಸಾರ್ವಜನಿಕ ಭವಿಷ್ಯ ನಿಧಿ (Public Provident Fund), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Saving Certificates) , ಕಿಸಾನ್ ವಿಕಾಸ್ ಪತ್ರ ( Kisan Vikas Patra) ಸೇರಿದಂತೆ ವಿವಿಧ ಯೋಜನೆಗಳ ಮೇಲಿನ ಬಡ್ಡಿ ದರಗಳು (Interest Rate) ಸೆಪ್ಟೆಂಬರ್ 30ರಂದು ಪರಿಷ್ಕರಣೆಯಾಗಲಿದೆ. ಈ ಬಡ್ಡಿ ದರವು 2024ರ ಅಕ್ಟೋಬರ್, ನವೆಂಬರ್, ಡಿಸೆಂಬರ್ ತ್ರೈಮಾಸಿಕಕ್ಕೆ ಅನ್ವಯವಾಗಲಿದೆ.
ಸೆಪ್ಟೆಂಬರ್‌ನಿಂದ ಹಣದುಬ್ಬರವು ಹೆಚ್ಚಾಗುವ ನಿರೀಕ್ಷೆಯಿದ್ದು, ಇದರಿಂದ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿದರಗಳು ಬದಲಾಗದೆ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಇಂಡಿಯಾ ರೇಟಿಂಗ್ಸ್ ಆಂಡ್ ರಿಸರ್ಚ್‌ನ ಹಿರಿಯ ಆರ್ಥಿಕ ವಿಶ್ಲೇಷಕ ಪರಸ್ ಜಸ್ರೈ. ಪ್ರಸ್ತುತ ಭಾರತೀಯ ಅಂಚೆ ಕಚೇರಿಗಳಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು ಶೇ. ನಾಲ್ಕರಿಂದ ಶೇ. 8.2ರ ನಡುವೆ ಇದೆ.
ಯಾವುದು ಸಣ್ಣ ಉಳಿತಾಯ ಯೋಜನೆಗಳು?
ಸಣ್ಣ ಉಳಿತಾಯ ಯೋಜನೆಗಳು ಸಾರ್ವಜನಿಕರಿಗೆ ನಿಯಮಿತವಾಗಿ ಉಳಿತಾಯ ಮಾಡಲು ಪ್ರೋತ್ಸಾಹಿಸುವ ಯೋಜನೆಯಾಗಿದ್ದು, ಸರ್ಕಾರದಿಂದ ನಿರ್ವಹಿಸಲ್ಪಡುತ್ತದೆ. ಇದರಲ್ಲಿ ಮೂರು ವಿಭಾಗಗಳಿವೆ. ಉಳಿತಾಯ ಠೇವಣಿ, ಸಾಮಾಜಿಕ ಭದ್ರತಾ ಯೋಜನೆ ಮತ್ತು ಮಾಸಿಕ ಆದಾಯ ಯೋಜನೆ. ಉಳಿತಾಯ ಠೇವಣಿಗಳಲ್ಲಿ 1ರಿಂದ 3 ವರ್ಷದ ಠೇವಣಿಗಳು ಮತ್ತು 5 ವರ್ಷದ ಠೇವಣಿಗಳು ಸೇರಿವೆ. ಇವುಗಳಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC) ಮತ್ತು ಕಿಸಾನ್ ವಿಕಾಸ್ ಪತ್ರ (KVP) ನಂತಹ ಉಳಿತಾಯ ಪ್ರಮಾಣಪತ್ರಗಳೂ ಸೇರಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಮಾಸಿಕ ಆದಾಯ ಯೋಜನೆಯು ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿದೆ.
ಪಿಪಿಎಫ್, ಅಂಚೆ ಕಚೇರಿ ಉಳಿತಾಯ ಮತ್ತು ಅವಧಿ ಠೇವಣಿಗಳಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು, ಎನ್ ಎಸ್ ಸಿ ಮತ್ತು ಎಸ್ ಎಸ್ ವೈ ಅನ್ನು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಿಂದಿನ ತ್ರೈಮಾಸಿಕದ ಆಧಾರದ ಮೇಲೆ ದರ ಪರಿಶೀಲನೆ ಮಾಡಲಾಗುತ್ತದೆ.
ಪ್ರಸ್ತುತ ಬಡ್ಡಿ ದರಗಳು ಹೇಗಿವೆ?
ಪ್ರಸ್ತುತ ತ್ರೈಮಾಸಿಕ ಜುಲೈ- ಸೆಪ್ಟೆಂಬರ್ 2024ರ ಬಡ್ಡಿ ದರಗಳು ಇಂತಿವೆ.
ಉಳಿತಾಯ ಠೇವಣಿ ಶೇ. 4, ಒಂದು ವರ್ಷದ ಅವಧಿಯ ಠೇವಣಿಗಳು ಶೇ. 6.9, ಎರಡು ವರ್ಷದ ಅವಧಿಯ ಠೇವಣಿಗಳು ಶೇ. 7 , 3 ವರ್ಷದ ಅವಧಿಯ ಠೇವಣಿಗಳು ಶೇ. 7.1, ಐದು ವರ್ಷದ ಅವಧಿಯ ಠೇವಣಿಗಳು ಶೇ. 7.5, ಐದು ವರ್ಷದ ಅನಂತರ ಮುಂದುವರಿಸುವ ಅವಕಾಶ ಹೊಂದಿರುವ ಠೇವಣಿಗಳು ಶೇ. 6.7, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಶೇ. 7.7, ಕಿಸಾನ್ ವಿಕಾಸ್ ಪತ್ರ ಶೇ. 7.5, ಸಾರ್ವಜನಿಕ ಭವಿಷ್ಯ ನಿಧಿ ಶೇ. 7.1, ಸುಕನ್ಯಾ ಸಮೃದ್ಧಿ ಖಾತೆ ಶೇ. 8.2, ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ. 8.2, ಮಾಸಿಕ ಆದಾಯ ಖಾತೆ ಶೇ. 7.4ರಷ್ಟು ಬಡ್ಡಿ ದರವನ್ನು ಹೊಂದಿದೆ.
Money Tips: ಇಪಿಎಫ್ ಕ್ಲೈಮ್ ತಿರಸ್ಕೃತಗೊಳ್ಳಲು ಕಾರಣವೇನು? ಬಗೆ ಹರಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಹಣದುಬ್ಬರದ ಅಪಾಯಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಮಿತಿಯು ಅಕ್ಟೋಬರ್ 7 ಮತ್ತು ಅಕ್ಟೋಬರ್ 9ರ ನಡುವೆ ಬಡ್ಡಿ ದರವನ್ನು ನಿರ್ಧರಿಸಲು ಸಭೆ ನಡೆಸಲಿದೆ. ಹಣದುಬ್ಬರದ ನಡುವೆ ಭಾರತದಲ್ಲಿ ಪ್ರಮುಖ ದರಗಳು ಬದಲಾಗದೆ ಉಳಿಯುವ ನಿರೀಕ್ಷೆಯಿದೆ.