Saturday, 23rd November 2024

Aadhaar- PAN Details : ಆಧಾರ್ ಮಾಹಿತಿ ಪ್ರದರ್ಶಿಸುತ್ತಿದ್ದ ವೆಬ್‌ಸೈಟ್‌ಗಳನ್ನುನಿರ್ಬಂಧಿಸಿದ ಕೇಂದ್ರ ಸರ್ಕಾರ

Aadhaar, PAN Details

ನವದೆಹಲಿ: ಭಾರತೀಯ ನಾಗರಿಕರ ಆಧಾರ್ ಮತ್ತು ಪ್ಯಾನ್ ಕಾರ್ಡ್ (Aadhaar- PAN Details) ವಿವರಗಳು ಸೇರಿದಂತೆ ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದ ಕೆಲವು ವೆಬ್‌ಸೈಟ್‌ಗಳನ್ನು ಸರ್ಕಾರ ನಿರ್ಬಂಧಿಸಿದೆ ಎಂದು ಅಧಿಕೃತ ಹೇಳಿಕೆ ಗುರುವಾರ ತಿಳಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ -ಇನ್) ವೆಬ್‌ಸೈಟ್‌ಗಳಲ್ಲಿ ಭದ್ರತಾ ನ್ಯೂನತೆಗಳನ್ನು ಕಂಡುಕೊಂಡ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

“ಕೆಲವು ವೆಬ್‌ಸೈಟ್‌ಗಳು ಭಾರತೀಯ ನಾಗರಿಕರ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಸೇರಿದಂತೆ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುತ್ತಿವೆ ಎಂಬುದು ಎಂಇಐಟಿವೈ ಗಮನಕ್ಕೆ ಬಂದಿದೆ. ಸುರಕ್ಷಿತ ಸೈಬರ್ ಭದ್ರತಾ ಅಭ್ಯಾಸಗಳು ಮತ್ತು ವೈಯಕ್ತಿಕ ಡೇಟಾದ ರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕೆ ಅನುಗುಣವಾಗಿ, ಈ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Param Rudra Supercomputer : ‘ಪರಮ ರುದ್ರ’ ಸೂಪರ್ ಕಂಪ್ಯೂಟರ್‌ ವ್ಯವಸ್ಥೆ ಉದ್ಘಾಟಿಸಿದ ಪ್ರಧಾನಿ ಮೋದಿ

ಆಧಾರ್ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಲ್ಲಿ ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ, 2016 ರ ಅಡಿಯಲ್ಲಿ ನಿಷೇಧ ಉಲ್ಲಂಘಿಸಿದ್ದಕ್ಕಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದೆ ಎಂದು ಹೇಳಿದೆ.

ಭದ್ರತಾ ನ್ಯೂನತೆ

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್) ಈ ವೆಬ್‌ಸೈಟ್‌ಗಳ ವಿಶ್ಲೇಷಣೆಯು ಕೆಲವು ಭದ್ರತಾ ನ್ಯೂನತೆಗಳನ್ನು ಪತ್ತೆಹಚ್ಚಿವೆ. ದೌರ್ಬಲ್ಯ ಸರಿಪಡಿಸಲು ತಮ್ಮ ಕಡೆಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ವೆಬ್‌ಸೈಟ್‌ ಮಾಲೀಕರಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಜ್ಯಗಳ ಐಟಿ ಕಾರ್ಯದರ್ಶಿಗಳು ಐಟಿ ಕಾಯ್ದೆಯಡಿ ತೀರ್ಪು ನೀಡುವ ಅಧಿಕಾರಿಗಳಾಗಿ ಅಧಿಕಾರ ಹೊಂದಿದ್ದಾರೆ.

ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ, 2023 ಅನ್ನು ಈಗಾಗಲೇ ಜಾರಿಗೆ ತರಲಾಗಿದೆ ಮತ್ತು ಕಾಯ್ದೆಯಡಿ ನಿಯಮಗಳ ರಚನೆಯು ಮುಂದುವರಿದ ಹಂತದಲ್ಲಿವೆ.