Sunday, 29th September 2024

Vishweshwar Bhat Column: ಗೊಯೆಂಕಾ ಮಾಡಿದ ಸಾಹಸ

Ramanath Goenka

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ರಾಷ್ಟ್ರೀಯ ವಿಚಾರಧಾರೆಯನ್ನು ಎತ್ತಿ ಹಿಡಿಯುವ ಪತ್ರಿಕೆಗಳು ದಕ್ಷಿಣ ಭಾರತದಲ್ಲಿ ಇಲ್ಲ. ಎಸ್.ಸದಾನಂದ ಸಂಪಾದಕತ್ವದ ‘ದಿ ಫ್ರೀ ಪ್ರೆಸ್ ಜರ್ನಲ್‌’ ಪತ್ರಿಕೆ ಕುಂಟುತ್ತಾ ಸಾಗುತ್ತಿದೆ. ಆ ಪತ್ರಿಕೆಯನ್ನು ನೀವೇಕೆ ಖರೀದಿಸ ಬಾರದು” ಎಂದು ಮಹಾತ್ಮ ಗಾಂಧಿಯವರು ರಾಮನಾಥ ಗೊಯೆಂಕಾ ಅವರಿಗೆ ಹೇಳಿದಾಗ, ಗೊಯೆಂಕಾ ಸಮ್ಮತಿಸಿ‌ ದರು.

ಹಾಗೆ ನೋಡಿದರೆ, ಗೊಯೆಂಕಾಗೆ ಪತ್ರಿಕೆ ವ್ಯವಹಾರ ಹೊಸತು. “ಮಾರವಾಡಿಯಾದವನು ಕಾಗದ ವ್ಯಾಪಾರ ಮಾಡಬಹುದೇ ಹೊರತು, ಪತ್ರಿಕೆ ವ್ಯವಹಾರವನ್ನಲ್ಲ” ಎಂಬುದು ಗೊಯೆಂಕಾ ಅವರ ಮೊದಲ ಪ್ರತಿಕ್ರಿಯೆ
ಆಗಿತ್ತಂತೆ. ಆದರೆ ಗಾಂಧೀಜಿ ಮಾತನ್ನು ಅಷ್ಟು ಸುಲಭಕ್ಕೆ ತಳ್ಳಿ ಹಾಕುವಂತಿರಲಿಲ್ಲ. ನಷ್ಟದಲ್ಲಿದ್ದ ‘ದಿ ಫ್ರೀ ಪ್ರೆಸ್ ಜರ್ನಲ’ ಪತ್ರಿಕೆಯನ್ನು ಗೊಯೆಂಕಾ ಖರೀದಿಸಿದರು. ಆ ದಿನಗಳಲ್ಲಿ ಅವರು ತೊಡಗಿಸಿದ್ದ ಹಣ 3 ಲಕ್ಷ ರುಪಾಯಿ.
ಅಂದರೆ ತಮ್ಮ ಉಳಿತಾಯವನ್ನೆಲ್ಲ ಅವರು ಹೊಸ ಉದ್ಯಮಕ್ಕೆ ಸುರಿದಿದ್ದರು.

“ಮಾರವಾಡಿ ಉದ್ಯಮಿ ಪತ್ರಿಕೆಯನ್ನು ಆರಂಭಿಸಿದ್ದು ದೊಡ್ಡ ಜೋಕು” ಎಂದು ಆ ದಿನಗಳಲ್ಲಿ ಅನೇಕರು ಕುಹಕ ವಾಡಿದ್ದರಂತೆ. ಆಗ ಗೊಯೆಂಕಾರಿಗೆ ಧೈರ್ಯ ತುಂಬಿ, ಬೆಂಬಲಕ್ಕೆ ನಿಂತವರು ಎ.ಎನ್.ಶಿವರಾಮನ್. ಅಂದು
ಪತ್ರಿಕೆಯ ಸಂಪೂರ್ಣ ನೇತೃತ್ವವನ್ನು ಅವರೇ (ಶಿವರಾಮನ್) ವಹಿಸಿಕೊಂಡರು. ಪತ್ರಿಕೆಯನ್ನು ವಿತರಿಸುವ ಹೊಣೆಗಾರಿಕೆ ಗೊಯೆಂಕಾ ಅವರದ್ದಾಯಿತು. ರಾತ್ರಿ 10 ಗಂಟೆಗೆ ಪತ್ರಿಕೆ ಪ್ರಿಂಟ್ ಆದ ಬಳಿಕ ಗೊಯೆಂಕಾ ಸ್ವತಃ
ವಾಹನವನ್ನು ಓಡಿಸಿಕೊಂಡು ಹೋಗುತ್ತಿದ್ದರು, ಪತ್ರಿಕೆಯ ಬಂಡಲ್‌ಗಳನ್ನು ವಾಹನಕ್ಕೆ ಹಾಕುವುದು-ಇಳಿಸುವು ದನ್ನು ಖುದ್ದಾಗಿ ಮಾಡುತ್ತಿದ್ದರು.

1932ರ ಹೊತ್ತಿಗೆ ಗೊಯೆಂಕಾ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯನ್ನು ಆರಂಭಿಸಿದ್ದರು. 1939ರ ಸೆಪ್ಟೆಂಬರ್ 3ರಂದು, ಜರ್ಮನಿಯ ಮೇಲೆ ಬ್ರಿಟನ್ ಯುದ್ಧ ಘೋಷಿಸಿತಷ್ಟೆ. ಆ ಸುದ್ದಿ ಪತ್ರಿಕಾ ಕಚೇರಿಗೆ ಮಧ್ಯಾಹ್ನ 2 ಗಂಟೆ ಹೊತ್ತಿಗೆ ತಲುಪಿತು. ಅದನ್ನು ಬಿಸಿಬಿಸಿಯಾಗಿರುವಾಗಲೇ ನೀಡಬೇಕು ಎಂದು ನಿರ್ಧರಿಸಿದ ಗೊಯೆಂಕಾ, ಸಾಯಂಕಾಲ 5 ಗಂಟೆ ಹೊತ್ತಿಗೆ 4 ಪುಟಗಳ, 2000 ಪ್ರತಿಗಳನ್ನು ಮುದ್ರಿಸಿ ವಿತರಿಸಿದರು. ಅದು ಆ ದಿನಗಳಲ್ಲಿ
ದೊಡ್ಡ ಸುದ್ದಿಯಾಗಿತ್ತು. ಅದೇ ದಿನ ಮದರಾಸಿನಲ್ಲಿ ಸುಭಾಷ್‌ಚಂದ್ರ ಬೋಸ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುವವರಿದ್ದರು.

ಹಸಿಹಸಿಯಾದ ಪ್ರತಿಗಳನ್ನು ಎತ್ತಿಕೊಂಡ ಗೊಯೆಂಕಾ ನೇರವಾಗಿ ಬೋಸ್ ಭಾಷಣ ಮಾಡುತ್ತಿದ್ದ ಜಾಗಕ್ಕೆ ಹೋಗಿ ಪತ್ರಿಕೆಯನ್ನು ವಿತರಿಸಿದರು. ಅದನ್ನು ಗಮನಿಸಿದ ಬೋಸ್, ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ಪತ್ರಿಕೆಯ ಮೇಲೆ ಕಣ್ಣಾಡಿಸಿ, “ಬ್ರಿಟನ್ ಮತ್ತು ಜರ್ಮನಿ ಮಧ್ಯೆ ಯುದ್ಧ ಆರಂಭವಾಗಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವಿಶೇಷ ಆವೃತ್ತಿಯಲ್ಲಿ ವರದಿಯಾಗಿದೆ. 6 ತಿಂಗಳ ಹಿಂದೆ, ಬ್ರಿಟಿಷರು ಭಾರತ ಬಿಟ್ಟು ತೊಲಗುವಂತೆ ಕಡೆಯ ಎಚ್ಚರಿಕೆ ನೀಡಬೇಕು ಎಂದು ನಾನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಒತ್ತಾಯಿಸಿದ್ದೆ.

ನನ್ನ ಸಲಹೆಯನ್ನು ಸಮಿತಿ ಗಂಭೀರವಾಗಿ ಪರಿಗಣಿಸಿ ಕಾರ್ಯತತ್ಪರವಾಗಿದ್ದರೆ, ಇಷ್ಟರೊಳಗೆ ನಮಗೆ ಸ್ವಾತಂತ್ರ್ಯ ಲಭಿಸಿರುತ್ತಿತ್ತು. ಅದೇನೇ ಇರಲಿ, ನಾನು ಗೊಯೆಂಕಾ ಅವರ ಈ ಪ್ರಯತ್ನವನ್ನು ಮೆಚ್ಚುತ್ತೇನೆ. ಅವರ ಪತ್ರಿಕೆಗೆ ಉಜ್ವಲ ಭವಿಷ್ಯವಿದೆ” ಎಂದು ಪತ್ರಿಕೆಯನ್ನು ಪ್ರದರ್ಶಿಸುತ್ತಾ ತಮ್ಮ ಭಾಷಣದಲ್ಲಿ ಹೇಳಿದರು. ಮರುದಿನದ ‘ಇಂಡಿ ಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಬೋಸ್ ಭಾಷಣ ವಿಸ್ತೃತವಾಗಿ ವರದಿಯಾಗಿತ್ತು. ಈಗಿನ ಕಾಲದಲ್ಲೂ ಅಂಥ ಸಾಹಸವನ್ನು ಮಾಡಲು ಪತ್ರಿಕೆಗಳು ಹಿಂಜರಿಯುತ್ತವೆ.

ಆದರೆ ಸುಮಾರು 85 ವರ್ಷಗಳ ಹಿಂದೆಯೇ ಗೊಯೆಂಕಾ ಆ ಸಾಹಸದ ಪ್ರಯೋಗವನ್ನು ಮಾಡಿದ್ದರು. ಆ ದಿನ ಗಳಲ್ಲಿ ಯಾವುದಾದರೂ ಮಹತ್ವದ ಸುದ್ದಿ ಮಧ್ಯಾಹ್ನ 3 ಗಂಟೆಯೊಳಗೆ ಬಂದರೆ, ನಾಲ್ಕು ಪುಟಗಳ ವಿಶೇಷ
ಪುರವಣಿ ತರುವಂತೆ ಗೊಯೆಂಕಾ ಒತ್ತಾಯಿಸುತ್ತಿದ್ದರು. ಅಂಥ ಪ್ರಯೋಗಕ್ಕೆ ಸಂಪಾದಕರು ಒಪ್ಪದಿದ್ದರೆ, “ನಿಮ್ಮಿಂ ದಾಗದಿದ್ದರೆ ಹೇಳಿ, ನಾನು ಮಾಡುತ್ತೇನೆ. ಓದುಗರಿಗೆ ಬಿಸಿ ಸುದ್ದಿಯನ್ನು ನೀಡುವುದು ಪತ್ರಿಕೆಯ ಧರ್ಮ” ಎಂದು ಹೇಳುತ್ತಿದ್ದರು.

ಇದನ್ನೂ ಓದಿ: Vishweshwar Bhat Column: ಬುಖಾರಾದಲ್ಲಿ ಮುಲ್ಲಾ ನಸ್ರುದ್ದೀನ್‌