Friday, 27th September 2024

IND vs BAN 2nd Test: ಸಿಕ್ಸರ್‌ ದಾಖಲೆ ಸನಿಹ ರೋಹಿತ್‌, ಜೈಸ್ವಾಲ್‌

IND vs BAN 2nd Test

ಕಾನ್ಪುರ: ಚೆನ್ನೈಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ನಾಯಕ ರೋಹಿತ್‌ ಶರ್ಮ(Rohit Sharma) ಇಂದಿನಿಂದ(ಸೆ.27) ಆರಂಭವಾಗುವ ಕಾನ್ಪುರ ಟೆಸ್ಟ್‌ನಲ್ಲಿ(IND vs BAN 2nd Test) ಸಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಈ ಪಂದ್ಯದಲ್ಲಿ ರೋಹಿತ್‌ಗೆ ಸಿಕ್ಸರ್‌ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ.

ಈಗಾಗಲೇ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡಿರುವ ರೋಹಿತ್​ ಶರ್ಮ, ಬಾಂಗ್ಲಾದೇಶ(IND vs BAN) ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ 7 ಸಿಕ್ಸರ್‌ ಬಾರಿಸಿದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ದಾಖಲೆ ಮಾಜಿ ಡ್ಯಾಶಿಂಗ್​ ಆಟಗಾರ ವಿರೇಂದ್ರ ಸೆಹವಾಗ್​ ಹೆಸರಿನಲ್ಲಿದೆ. ಸೆಹವಾಗ್ 104 ಟೆಸ್ಟ್​ ಪಂದ್ಯ ಆಡಿ 90 ಸಿಕ್ಸರ್​ ಬಾರಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ರೋಹಿತ್‌ 59* ಪಂದ್ಯಗಳಿಂದ 84* ಸಿಕ್ಸರ್‌ ಬಾರಿಸಿದ್ದಾರೆ. ಮಹೇಂದ್ರ ಸಿಂಗ್​ ಧೋನಿ 78 ಸಿಕ್ಸರ್​ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IND vs BAN 2nd Test: ಪಿಚ್‌ ರಿಪೋರ್ಟ್‌, ಆಡುವ ಬಳಗ, ಹವಾಮಾನ ವರದಿ ಹೇಗಿದೆ?

ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್​-5 ಬ್ಯಾಟರ್‌ಗಳು

ಆಟಗಾರಸಿಕ್ಸರ್‌
ವೀರೇಂದ್ರ ಸೆಹವಾಗ್‌90
ರೋಹಿತ್‌ ಶರ್ಮ84
ಮಹೇಂದ್ರ ಸಿಂಗ್‌ ಧೋನಿ78
ಸಚಿನ್‌ ತೆಂಡೂಲ್ಕರ್‌69
ರವೀಂದ್ರ ಜಡೇಜಾ61

ಜೈಸ್ವಾಲ್‌ ಕೇವಲ 8 ಸಿಕ್ಸರ್‌ ಬಾರಿಸಿದರೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್‌ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನ್ಯೂಜಿಲ್ಯಾಂಡ್‌ ತಂಡದ ಮಾಜಿ ಸ್ಫೋಟಕ ಬ್ಯಾಟರ್‌, ಹಾಲಿ ಇಂಗ್ಲೆಂಡ್‌ ಟೆಸ್ಟ್‌ ತಂಡದ ಕೋಚ್‌ ಆಗಿರುವ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿದೆ.

ಮೆಕಲಮ್ 2014 ರಲ್ಲಿ 9 ಟೆಸ್ಟ್‌ ಪಂದ್ಯಗಳಿಂದ 33 ಸಿಕ್ಸರ್‌ ಬಾರಿಸಿದ್ದರು. ಸದ್ಯ ಜೈಸ್ವಾಲ್‌ ಕ್ಯಾಲೆಂಡರ್ ವರ್ಷದಲ್ಲಿ 6 ಟೆಸ್ಟ್‌ ಪಂದ್ಯಗಳನ್ನಾಡಿ 26 ಸಿಕ್ಸರ್‌ ಬಾರಿಸಿದ್ದಾರೆ. 8 ಸಿಕ್ಸರ್‌ ಬಾರಿಸಿದರೆ 10 ವರ್ಷಗಳ ಹಿಂದೆ ಮೆಕಲಮ್‌ ನಿರ್ಮಿಸಿದ್ದ ದಾಖಲೆ ಪತನಗೊಳ್ಳಲಿದೆ. ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜೈಸ್ವಾಲ್‌ ಸದ್ಯ 13ನೇ ಸ್ಥಾನಿಯಾಗಿದ್ದಾರೆ. 29 ಸಿಕ್ಸರ್‌ ಬಾರಿಸಿದ್ದಾರೆ.