ಅವಲೋಕನ
ಗಣೇಶ್ ಭಟ್, ವಾರಣಾಸಿ
ಜಗತ್ತಿನ ಕೆಲವು ದೇಶಗಳಲ್ಲಿ ಸಾಕಷ್ಟು ಪ್ರಾಕೃತಿಕ ಸಂಪನ್ಮೂಲಗಳಿದ್ದರೂ ಅವು ಬಡದೇಶಗಳಾಗಿಯೇ ಉಳಿದಿವೆ. ಸೊಮಾಲಿಯಾ, ಯೆಮನ್, ಸೂಡಾನ್, ಸಿರಿಯಾ, ಇರಾಕ್, ಲಿಬಿಯಾ ಮೊದಲಾದ ಅರಬ್ ದೇಶಗಳಲ್ಲಿ ಸಾಕಷ್ಟು ತೈಲ ನಿಕ್ಷೇಪಗಳಿದ್ದರೂ ಅವು ಬಡತನದಲ್ಲೇ ಬಳಲುತ್ತಿರುವುದು ಈ ಮಾತಿಗೆ ಸಾಕ್ಷಿ.
ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ‘ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್’ ಹೆಸರಿನ ದೇಶವಿದೆ. ಅಲ್ಲಿ ಸಾಕಷ್ಟು ಪೆಟ್ರೋ ಲಿಯಂ ಲಭ್ಯವಿದೆ, ಚಿನ್ನ ಹಾಗೂ ವಜ್ರದ ಗಣಿಗಳಿವೆ, ಯುರೇನಿಯಂ, ನಿಕ್ಕೆಲ್, ಕೋಬಾಲ್ಟ್, ತಾಮ್ರ, ಕಬ್ಬಿಣ, ಮ್ಯಾಂಗನೀಸ್ ಮೊದಲಾದ ಲೋಹಗಳ ಅದಿರುಗಳು ಅಲ್ಲಿ ಹೇರಳವಾಗಿವೆ. ಸಾಕಷ್ಟು ಮಳೆಯಾಗುತ್ತದೆ, ನಿತ್ಯ ಹರಿದ್ವರ್ಣದ ಕಾಡು ಮತ್ತು ಕೃಷಿಗೆ ಯೋಗ್ಯವಾದ ಫಲವತ್ತಾದ ಮಣ್ಣು ಅಲ್ಲಿದೆ. ಸುಮಾರು 55 ಲಕ್ಷ ಜನಸಂಖ್ಯೆ ಯಿರುವ ಆ ದೇಶದ ಜನಸಾಂದ್ರತೆ ಬಹಳ ಕಡಿಮೆ.
ಆದರೂ ‘ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್’ ಜಗತ್ತಿನ ಅತಿ ಬಡದೇಶಗಳಲ್ಲಿ ಒಂದಾಗಿ ಉಳಿದಿದೆ. ಈ ದೇಶದ ಶೇ.14 ರಷ್ಟು ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿದೆ. ರಾಜಕೀಯ ಅಸ್ಥಿರತೆ, ಮಿಲಿಟರಿ ದಂಗೆ, ಆಂತರಿಕ ಯುದ್ಧ, ಭ್ರಷ್ಟಾಚಾರ ಮೊದಲಾದ ಕಾರಣಗಳಿಂದಾಗಿ ಅದು ಬಡದೇಶವಾಗಿಯೇ ಉಳಿದಿದೆ. ಆಫ್ರಿಕಾ ಖಂಡದ ಹೆಚ್ಚಿನ ದೇಶಗಳ ಪರಿಸ್ಥಿತಿಯೂ ಇದೇ. ಅದೇ ರೀತಿ, ಸಾಕಷ್ಟು ತೈಲ ನಿಕ್ಷೇಪಗಳನ್ನು ಹೊಂದಿದ್ದರೂ ತಪ್ಪು ಆರ್ಥಿಕ
ನೀತಿ ಯಿಂದಾಗಿ ಬಡದೇಶವಾಗಿ ಉಳಿದಿದೆ ದಕ್ಷಿಣ ಅಮೆರಿಕದ ವೆನಿಜುವೆಲಾ.
ದೇಶವೊಂದರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯು ಒಮ್ಮಿಂದೊಮ್ಮೆಲೇ ಸುಧಾರಿಸುವುದಿಲ್ಲ. 2013ರಲ್ಲಿ ಭಾರತವನ್ನು, ಆರ್ಥಿಕವಾಗಿ ದುರ್ಬಲವಾಗಿರುವ 5 ರಾಷ್ಟ್ರಗಳಲ್ಲಿ ಒಂದು ಎಂದು ಗುರುತಿಸಲಾಗಿತ್ತು. ಮಿತಿ ಮೀರಿದ ಭ್ರಷ್ಟಾಚಾರ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಶೇ.10ರ ಆಸುಪಾಸಿನಲ್ಲಿದ್ದ ಹಣದುಬ್ಬರ, ಆರ್ಥಿಕಾ ಭಿವೃದ್ಧಿಯ ಕುಸಿತ ಮೊದಲಾದ ವಿಚಾರಗಳು ಭಾರತವನ್ನು ‘Fragile Five’ ದೇಶಗಳ ಪಟ್ಟಿಯ ಕೆಳಗೆ ದೂಡಿದ್ದವು. ಆದರೆ ಇಂದು ಭಾರತವು ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯುಳ್ಳ ದೇಶವಾಗಿ ನಿಂತಿದೆ. ಈ ಸಕಾರಾತ್ಮಕ ಬದಲಾವಣೆಯು ಒಂದು ಆಕಸ್ಮಿಕ ಬೆಳವಣಿಗೆಯೇನಲ್ಲ.
ಭಾರತದ ಬದಲಾವಣೆಯಾಗಬೇಕಾದರೆ ಇಲ್ಲಿನ ಮೂಲಭೂತ ಸೌಕರ್ಯಗಳ ಸುಧಾರಣೆಯಾಗಬೇಕಾದುದು
ಅನಿವಾರ್ಯವಾಗಿತ್ತು. ಹತ್ತು ವರ್ಷಗಳ ಹಿಂದೆ ದೇಶದ ಶೇ.40ರಷ್ಟು ಮನೆಗಳಲ್ಲಿ ಮಾತ್ರ ಶೌಚಾಲಯಗಳಿದ್ದವು,
ಶೇ.16ರಷ್ಟು ಮನೆಗಳಿಗೆ ಮಾತ್ರ ಕುಡಿಯುವ ಶುದ್ಧನೀರು, ಶೇ.30ರಷ್ಟು ಮನೆಗಳಿಗೆ ಅಡುಗೆ ಅನಿಲ, ಶೇ.75ರಷ್ಟು
ಮನೆಗಳಿಗೆ ವಿದ್ಯುತ್ ಸಂಪರ್ಕ ಇತ್ತು. ದೇಶದ ಹೆದ್ದಾರಿಗಳ ಅಭಿವೃದ್ಧಿ ಬಹಳ ನಿಧಾನಗತಿಯಲ್ಲಿ ಆಗುತ್ತಿತ್ತು. ಎಕ್ಸ್‌ಪ್ರೆಸ್ ಹೆದ್ದಾರಿಗಳು ಇರಲಿಲ್ಲ. ಯಾವುದೇ ಸುಧಾರಣೆಯಿಲ್ಲದೆ ರೈಲ್ವೆ ವ್ಯವಸ್ಥೆ ನಿಂತ ನೀರಾಗಿತ್ತು. ಕೈಗಾರಿಕೆ ಗಳಿಗೆ ಬೇಕಾಗುವಷ್ಟು ಉತ್ತೇಜನವಾಗಲೀ, ವಿದ್ಯುತ್ ಪೂರೈಕೆಯಾಗಲೀ ಇರಲಿಲ್ಲ. ವಿಪರೀತ ಭ್ರಷ್ಟಾಚಾರದಿಂದಾಗಿ ಅಭಿವೃದ್ಧಿ ನಿಂತುಹೋಗಿತ್ತು.
ದೇಶದ ಸ್ವಚ್ಛತಾ ಮಟ್ಟವನ್ನು ಹಾಗೂ ಜನರ ಆರೋಗ್ಯವನ್ನು ಸುಧಾರಿಸಲು ಎಲ್ಲ ಪ್ರಜೆಗಳಿಗೆ ಶೌಚಾಲಯವನ್ನು
ಒದಗಿಸಬೇಕಾದ್ದು ಅನಿವಾರ್ಯತೆಗಳಲ್ಲಿ ಒಂದಾಗಿತ್ತು. ಹತ್ತು ವರ್ಷಗಳ ಹಿಂದಿನವರೆಗೂ ದೇಶದ ಶೇ.೬೦ರಷ್ಟು ಪ್ರಜೆಗಳು ಬಹಿರ್ದೆಸೆಗೆ ಬಯಲನ್ನೇ ಬಳಸುತ್ತಿದ್ದರು. ಬಯಲುಶೌಚದಿಂದಾಗಿ ದೇಶದ ಮಕ್ಕಳು ಮತ್ತು ಮಹಿಳೆಯರು
ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತ, ವಿವಿಧ ಸಾಂಕ್ರಾಮಿಕ ರೋಗ ಗಳಿಗೆ ಬಲಿಯಾಗುತ್ತಿದ್ದರು. ಆದರೆ ಕಳೆದ 10 ವರ್ಷಗಳಲ್ಲಿ ‘ಸ್ವಚ್ಛ ಭಾರತ್’ ಅಭಿಯಾನದಡಿ ದೇಶದ 11 ಕೋಟಿ ಮನೆಗಳಿಗೆ ಶೌಚಾಲಯಗಳನ್ನು ಉಚಿತವಾಗಿ ಕಟ್ಟಿಸಿಕೊಡಲಾಗಿದೆ. ಈ ಅಭಿಯಾನದ ಫಲವಾಗಿ ಭಾರತದಲ್ಲಿ ಬಯಲುಶೌಚದ ಪರಿಪಾಠವು ಗಣನೀಯವಾಗಿ ತಗ್ಗಿದೆ; ಬಯಲುಶೌಚದಿಂದಾಗಿ ಪ್ರತಿ ವರ್ಷ ಭಾರತದಲ್ಲಿ ವಾರ್ಷಿಕ 70 ಸಾವಿರ ಮಕ್ಕಳು ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದುದನ್ನು ಈ ಅಭಿಯಾನದಿಂದಾಗಿ ತಡೆಗಟ್ಟಿದಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಕೆಲ ವರ್ಷದ ಹಿಂದೆ ಹೇಳಿದ್ದಿದೆ.
ಪ್ರಸಿದ್ಧ ಜಾಗತಿಕ ವೈಜ್ಞಾನಿಕ ಪತ್ರಿಕೆ ‘ನೇಚರ್’ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇದೇ ರೀತಿ, 10.5 ಕೋಟಿ ಬಡ ಮಹಿಳೆಯರ ಮನೆಗಳಿಗೆ ಅಡುಗೆ ಅನಿಲದ ಸಂಪರ್ಕವನ್ನು ನೀಡಲಾಗಿದೆ, ಪ್ರಧಾನಮಂತ್ರಿ ಜಲ ಜೀವನ್ ಯೋಜನೆಯಡಿ ಶೇ.78.5ರಷ್ಟು ಮನೆಗಳಿಗೆ ಕುಡಿಯುವ ಶುದ್ಧನೀರನ್ನು ನಲ್ಲಿಗಳ ಮೂಲಕ ಒದಗಿಸ ಲಾಗಿದೆ. ಮುಂದಿನ ವರ್ಷದೊಳಗಾಗಿ ದೇಶದ ಪ್ರತಿ ಮನೆಯೂ ಕುಡಿಯುವ ನೀರಿನ ಸಂಪರ್ಕವನ್ನು ಪಡೆಯಲಿದೆ.
ಭಾರತೀಯ ರೈಲ್ವೆಯಲ್ಲಿ ಎರಡು ಗಮನಾರ್ಹ ಬದಲಾವಣೆಗಳಾಗಿವೆ. ಹಿಂದೆ, ನಮ್ಮ ರೈಲುಬೋಗಿಗಳಲ್ಲಿ ತೆರೆದ ಶೌಚಾಲಯ ವ್ಯವಸ್ಥೆಯಿದ್ದು, ಮಲಮೂತ್ರಗಳು ಹಳಿಗಳ ಮೇಲೆ ಬೀಳುತ್ತಿದ್ದವು. ಈಗ ಅದನ್ನು ಬಯೋ-ಶೌಚಾ ಲಯವಾಗಿ ಪರಿವರ್ತಿಸಲಾಗಿದ್ದು ಮಲಮೂತ್ರಗಳು ಹಳಿಗಳ ಮೇಲೆ ಬೀಳುವುದಕ್ಕೆ ತಡೆಯೊಡ್ಡಿದಂತಾಗಿದೆ. ರೈಲು ನಿಲ್ದಾಣಗಳ ಮತ್ತು ಹಳಿಗಳ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಬದಲಾವಣೆ ಮಹತ್ವದ್ದಾಗಿದೆ. ದೇಶದ ಗಣನೀಯ ರೈಲುಮಾರ್ಗಗಳು ವಿದ್ಯುದೀಕರಣಗೊಂಡು, ಡೀಸೆಲ್ ಅವಲಂಬನೆಯಿಂದ ರೈಲುಗಳು ಹೊರಬರು ತ್ತಿರುವುದು ಇನ್ನೊಂದು ಮಹತ್ಸಾಧನೆ. ರೈಲುಮಾರ್ಗಗಳ ವಿದ್ಯುದೀಕರಣದಿಂದಾಗಿ ದೇಶಕ್ಕೆ ವಾರ್ಷಿಕ 600 ಕೋಟಿ ರುಪಾಯಿಗಳಷ್ಟು ಇಂಧನ ವೆಚ್ಚವು ಕಡಿಮೆಯಾಗಿದೆ.
ಉತ್ಕೃಷ್ಟ ಸೇವೆ ಒದಗಿಸುವ ವಂದೇ ಭಾರತ್ ರೈಲುಗಳನ್ನು ದೇಶದ ವಿವಿಧೆಡೆ ಪರಿಚಯಿಸಿರುವುದರಿಂದಾಗಿ ಸಮಯದ ಕ್ಲುಪ್ತತೆಯ ಸಾಧನೆಯಾಗುತ್ತಿದೆ. 2014ರಲ್ಲಿ ಕೇವಲ 2.5 ಗಿಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆ ಯಾಗುತ್ತಿದ್ದುದು ಈಗ ಆ ಪ್ರಮಾಣ 90 ಗಿಗಾವ್ಯಾಟ್ ಅನ್ನು ಮುಟ್ಟಿದೆ. ಮನೆಗಳ ಸೂರಿಗೆ ಸೌರಫಲಕಗಳನ್ನು ಅಳವಡಿಸಲು ಪ್ರೋತ್ಸಾಹಿಸುವ ‘ಸೂರ್ಯಘರ್’ ಯೋಜನೆಯು ಪ್ರಸ್ತುತ ಘೋಷಿಸಲ್ಪಟ್ಟಿದ್ದು, ಒಂದು ಕೋಟಿ ಮನೆಗಳು ಹೀಗೆ ಅಳವಡಿಸಿಕೊಂಡಾಗ ಅವುಗಳಿಂದಾಗಿ ಹೆಚ್ಚುವರಿಯಾಗಿ 40 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಯಾಗಲಿದೆ. ಸೌರಫಲಕಗಳಿಗಾಗಿ ಈ ಹಿಂದೆ ಚೀನಾವನ್ನು ಅವಲಂಬಿಸಿದ್ದ ಭಾರತವು ಈಗ ಈ ಕ್ಷೇತ್ರದಲ್ಲೂ ಆತ್ಮನಿರ್ಭರವಾಗುತ್ತಿದೆ.
‘ಮೇಕ್ ಇನ್ ಇಂಡಿಯಾ’ ಹಾಗೂ ‘ಆತ್ಮನಿರ್ಭರ ಭಾರತ’ ಉಪಕ್ರಮಗಳಿಂದಾಗಿ 1.4 ಲಕ್ಷ ನವೋದ್ಯಮಗಳು ಹೊಸದಾಗಿ ತಲೆಯೆತ್ತಿವೆ. ಸ್ಮಾರ್ಟ್ ಫೋನ್‌ಗಳಿಗೆ ವಿದೇಶಗಳನ್ನು ಅವಲಂಬಿಸಿದ್ದ ಭಾರತವಿಂದು ಸ್ವಾವಲಂಬಿ ಯಾಗಿರುವುದಲ್ಲದೆ ಅವನ್ನು ವಿದೇಶಗಳಿಗೂ ರಫ್ತು ಮಾಡುತ್ತಿದೆ. ದೇಶೀಯವಾಗಿ 5-ಜಿ ತಂತ್ರಜ್ಞಾನವನ್ನು
ರೂಪಿಸಿ ಯಶಸ್ವಿಯಾಗಿ ಜಾರಿಮಾಡಿರುವ ಭಾರತವಿಂದು 6-ಜಿ ತಂತ್ರಜ್ಞಾನವನ್ನು ಕೂಡ ರೂಪಿಸುತ್ತಿದೆ.
ದೇಶದಲ್ಲಿಂದು ದಿನವೊಂದಕ್ಕೆ 35 ಕಿ.ಮೀ.ನಷ್ಟು ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ಹೆದ್ದಾರಿಗಳು ನಿರ್ಮಾಣವಾಗುತ್ತಿದ್ದು,
ಕಳೆದ 10 ವರ್ಷಗಳಲ್ಲಿ ರಸ್ತೆ, ಸೇತುವೆ, ಬಂದರು, ರೈಲ್ವೆ, ಮೆಟ್ರೋ, ವಿದ್ಯುತ್, ಕುಡಿಯುವ ನೀರು ಮೊದಲಾದ
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 50 ಲಕ್ಷ ಕೋಟಿ ರುಪಾಯಿಗಳನ್ನು ವ್ಯಯಿಸಲಾಗಿದೆ. ಈ ಮೊತ್ತವು
1947ರಿಂದ 2014ರವರೆಗೆ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಾಡಲಾದ ವೆಚ್ಚಕ್ಕಿಂತಲೂ ಹೆಚ್ಚು. ಕಳೆದ ಹತ್ತು ವರ್ಷಗಳಲ್ಲಿ ದೇಶದ ಸ್ಟಾಕ್ ಮಾರುಕಟ್ಟೆಯು ಬೆಳೆದ ರೀತಿಯೂ ದೇಶದ ಅಭಿವೃದ್ಧಿಯ ಸೂಚ್ಯಂಕ ವಾಗಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸೂಚ್ಯಂಕವು 2014ರಲ್ಲಿ 20000ದ ಆಸುಪಾಸಿನಲ್ಲಿದ್ದುದು ಈಗ 85000ವನ್ನು
ತಲುಪುವ ಸಿದ್ಧತೆಯಲ್ಲಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ 10 ವರ್ಷಗಳಲ್ಲಿ 4 ಪಟ್ಟು ಹೆಚ್ಚು ಮೊತ್ತವು ಹೂಡಿಕೆಯಾದುದನ್ನು ನಾವು ಕಾಣಬಹುದು. ಇವು ಸ್ಥೂಲವಾಗಿ ಭಾರತದಲ್ಲಾಗಿರುವ ಒಂದಷ್ಟು
ಬದಲಾವಣೆಗಳು; ಇದರ ಜತೆಗೆ ಇನ್ನೂ ಬದಲಾಗಬೇಕಾದ ವಿಷಯಗಳು ಸಾಕಷ್ಟಿವೆ. ಪ್ರತಿಭಾವಂತ ಭಾರತೀಯರು
ದೊಡ್ಡ ಸಂಖ್ಯೆಯಲ್ಲಿ ದೇಶದ ಪೌರತ್ವವನ್ನು ತೊರೆದು ವಿದೇಶಗಳಿಗೆ ತೆರಳುತ್ತಿದ್ದು, ಸರಕಾರವು ಸಕಾರಾತ್ಮಕ ನಡೆಗಳ ಮೂಲಕ ಇದನ್ನು ಸರಿಪಡಿಸಬೇಕಾದ ಅಗತ್ಯವಿದೆ. ಕೇಂದ್ರದ ಮಟ್ಟದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ, ಕೇಂದ್ರದ ಆರ್ಥಿಕ ನೆರವುಗಳು ಫಲಾನುಭವಿಗಳ ಬ್ಯಾಂಕ್ ಖಾತೆಗಳನ್ನು ನೇರವಾಗಿ ಸೇರುತ್ತಿವೆ.
ಆದರೆ ರಾಜ್ಯಗಳ ಮಟ್ಟದಲ್ಲಿ ಭ್ರಷ್ಟಾಚಾರವು ಇನ್ನೂ ಹಾಗೆಯೇ ಉಳಿದಿದೆ, ವಿವಿಧ ಇಲಾಖೆಗಳಲ್ಲಿ ಅದು ಎಗ್ಗಿಲ್ಲದೆ ಸಾಗಿದೆ. ಇದನ್ನು ನಿಯಂತ್ರಿಸದೆ ಸಕಾರಾತ್ಮಕ ಬದಲಾವಣೆ ಅಸಾಧ್ಯ. ಭಾರತದಿಂದಾಗುವ ರಫ್ತು ಪ್ರಮಾಣವು ಹೆಚ್ಚುತ್ತಿದ್ದರೂ, ಆಮದಿನ ಪ್ರಮಾಣವೇನೂ ತಗ್ಗಿಲ್ಲ. ಭಾರತವು ಈಗಲೂ ದೊಡ್ಡ ಪ್ರಮಾಣದಲ್ಲಿ ನಿರ್ದಿಷ್ಟ ಸರಕುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ.
‘ವ್ಯಾಪಾರದ ಕೊರತೆ’ಯನ್ನು (ಟ್ರೇಡ್ ಡೆಫಿಸಿಟ್) ನಿಯಂತ್ರಿಸದಿದ್ದರೆ, ಭಾರತವು ನಿರೀಕ್ಷಿತ ಆರ್ಥಿಕ ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್ ಆಂಡ್ ಡಿ) ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಪ್ರೋತ್ಸಾಹವನ್ನು ಕೊಡದಿದ್ದರೆ, ನಮ್ಮ ದೇಶದಲ್ಲಿ ಹೊಸ ಆವಿಷ್ಕಾರಗಳಾಗುವುದಾದರೂ ಹೇಗೆ?
ಆರ್ಥಿಕಾಭಿವೃದ್ಧಿಯ ದರವು ಶೇ.10ಕ್ಕಿಂತ ಮೇಲಕ್ಕೆ ಹೋದರೆ ಮಾತ್ರವೇ ಭಾರತವು ಚೀನಾ ಮತ್ತು ಅಮೆರಿಕ ಗಳೊಂದಿಗೆ ತನ್ನನ್ನು ತುಲನೆ ಮಾಡಿಕೊಳ್ಳಲು ಸಾಧ್ಯ. ಶೇ.10ರ ಅಭಿವೃದ್ಧಿ ದರವನ್ನು ಸಾಧಿಸಬೇಕೆಂದರೆ, ಕೇಂದ್ರ ಸರಕಾರ ಹಾಗೂ ರಾಜ್ಯಗಳ ಸರಕಾರಗಳ ನಡುವೆ ರಾಜಕೀಯವನ್ನು ಮೀರಿದ ಹೊಂದಾಣಿಕೆ ಇರಬೇಕು.
ಆದರೆ, ‘ವಂದೇ ಭಾರತ್’ ರೈಲಿಗೆ ಕಲ್ಲೆಸೆಯುವವರನ್ನು, ರೈಲುಗಳ ಹಳಿ ತಪ್ಪಿಸಲು ಹಳಿಗೆ ಅಡ್ಡಲಾಗಿ ಸಿಲಿಂಡರ್, ಸ್ಲ್ಯಾಬ್, ಕಬ್ಬಿಣದ ತುಂಡು ಇಡುವವರನ್ನು ಸಮರ್ಥಿಸುವ ವಿಪಕ್ಷಗಳಿರುವಾಗ ಇದು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡುತ್ತದೆ!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
ಇದನ್ನೂ ಓದಿ: ಜಾಗತಿಕ ಕಂಪನಿಗಳೇಕೆ ಭಾರತೀಯರಿಗೆ ಮಣೆ ಹಾಕುತ್ತಿವೆ ?