ಬೆಂಗಳೂರು: ‘ಭಾರತ್ ಮಾತಾ ಕಿ ಜೈ’ (Bharat Mata Ki Jai Slogan) ಘೋಷಣೆ ಸಾಮರಸ್ಯಕ್ಕೆ ಕಾರಣವಾಗುವಂಥದ್ದು ಹೊರತು ಎಂದಿಗೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಅಭಿಪ್ರಾಯಪಟ್ಟಿದೆ. ಮಂಗಳೂರಿನ (Mangalore news) ಪ್ರಕರಣವೊಂದಕ್ಕೆ ಸಂಬಂಧಿಸಿ ಹೈಕೋರ್ಟ್ ಈ ಮಾತನ್ನು ಹೇಳಿದ್ದು, ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಈ ಘಟನೆ ನಡೆದಿತ್ತು. ಇಲ್ಲಿನ ಕೊಣಾಜೆಯ ನಿವಾಸಿಗಳಾದ ಸುರೇಶ, ವಿನಯ ಕುಮಾರ ಎಂ, ಸುಭಾಷ್, ರಂಜನ್ ಮತ್ತು ಧನಂಜಯ ಎಂಬವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜೂನ್ 9, 2024ರಂದು ಪ್ರಧಾನಿ ನರೇಂದ್ರ ಮೋದಿ ಅವರ ವಿಜಯೋತ್ಸವ ಮತ್ತು ಪ್ರಮಾಣವಚನ ಕಾರ್ಯಕ್ರಮದ ಲೈವ್ ವೀಕ್ಷಿಸಿ ಹಿಂದಿರುಗುತ್ತಿದ್ದಾಗ ಅರ್ಜಿದಾರರು ʼಭಾರತ್ ಮಾತಾ ಕಿ ಜೈʼ ಘೋಷಣೆ ಕೂಗಿದ್ದರು. ರಾತ್ರಿ 8.45- 9.15ರ ಸುಮಾರಿಗೆ ಉಳ್ಳಾಲ ತಾಲೂಕಿನ ಬೋಳಿಯಾರ್ ಗ್ರಾಮದ ಸಮದನ್ ಬಾರ್ ಬಳಿ ತಲುಪಿದಾಗ ʼಭಾರತ್ ಮಾತಾ ಕಿ ಜೈʼ ಘೋಷಣೆ ಕೂಗಿದ್ದಕ್ಕೆ ಮುಸ್ಲಿಂ ಸಮುದಾಯದ ಕೆಲ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಸುಮಾರು 25 ಮಂದಿ ಸೇರಿ ಇವರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಕೋರರಲ್ಲಿ ಒಬ್ಬ ಹರೀಶ್ ಮತ್ತು ನಂದ ಕುಮಾರ್ ಅವರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದರು.
ಕಿಶನ್ ಕುಮಾರ್ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 341, 143, 147, 148, 504, 506, 323, 324, 307 ಮತ್ತು 149 ರ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಮರುದಿನ ಪಿ.ಕೆ.ಅಬ್ದುಲ್ಲಾ ಎಂಬವರು ಮತ್ತೊಂದು ದೂರು ದಾಖಲಿಸಿದ್ದು, ಅರ್ಜಿದಾರರು ತನಗೆ ಮತ್ತು ಇತರರಿಗೆ ಬೆದರಿಕೆ ಹಾಕಿದ್ದಾರೆ ಮತ್ತು ದೇಶವನ್ನು ತೊರೆಯುವಂತೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅರ್ಜಿದಾರರು ಇದನ್ನು ನಿರಾಕರಿಸಿದ್ದರು. ಇರಿತದ ಘಟನೆಗೆ ಸಂಬಂಧವೇ ಇಲ್ಲದ ಬೇರೆ ಯಾರೋ ಒಬ್ಬರು ಕೌಂಟರ್ ದೂರು ದಾಖಲಿಸಿದ್ದಾರೆ ಎಂದು ವಾದಿಸಿದ್ದರು.
ವಿಚಾರಣೆಯ ಬಳಿಕ, ಎರಡೂ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಆದೇಶ ನೀಡಿದ್ದಾರೆ. ವಿವಿಧ ಧರ್ಮದ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದರೆ ಐಪಿಸಿ ಸೆಕ್ಷನ್ 153 ಎ ಅದನ್ನು ಅಪರಾಧವೆಂದು ಪರಿಗಣಿಸುತ್ತದೆ. ಪ್ರಸ್ತುತ ಪ್ರಕರಣವು ಈ ನಿಬಂಧನೆಯ ದುರುಪಯೋಗದ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಈ ಪ್ರಕರಣದ ತನಿಖೆಗೆ ಅವಕಾಶ ನೀಡಿದರೆ ಅದು ʼಭಾರತ್ ಮಾತಾ ಕಿ ಜೈʼ ಘೋಷಣೆಯ ಬಗ್ಗೆ ತನಿಖೆಗೆ ಅವಕಾಶ ನೀಡುತ್ತದೆ. ಆದರೆ ಅದು ಯಾವುದೇ ರೀತಿಯಲ್ಲೂ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವುದಿಲ್ಲ. ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವುದು ಸಾಮರಸ್ಯಕ್ಕೆ ಮಾತ್ರ ಕಾರಣವಾಗುತ್ತದೆ ಹೊರತು ಎಂದಿಗೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವುದಿಲ್ಲ” ಎಂದು ನ್ಯಾಯಾಧೀಶರು ಟಿಪ್ಪಣಿ ಮಾಡಿದ್ದಾರೆ.
ಇದನ್ನೂ ಓದಿ: DK Shivakumar: ಸಿಎಂ ಬೆನ್ನಿಗೆ ಪಕ್ಷ ನಿಂತಿದೆ, ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಕೆಶಿ