Friday, 27th September 2024

Dwayne Bravo Retirement: ಎಲ್ಲ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಡ್ವೇನ್‌ ಬ್ರಾವೊ

Dwayne Bravo

ಗಯಾನ: ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಸ್ಟಾರ್‌ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ(Dwayne Bravo) ಅವರು ಕೆರಿಬಿಯನ್‌ ಕ್ರಿಕೆಟ್‌ ಲೀಗ್‌ಗೆ ವಿದಾಯ ಹೇಳುವ ಮೂಲಕ ಎಲ್ಲ ಮಾದರಿಕೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ(Dwayne Bravo Retirement). ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದ ಬ್ರಾವೋ ಇಂಜುರಿಯಿಂದಾಗಿ ಆಟದಿಂದ ಹೊರಗುಳಿದಿದ್ದರು. ವಿದಾಯ ಹೇಳಿದ ಬ್ರಾವೊಗೆ ತಂಡದ ಆಟಗಾರರು ಗಾರ್ಡ್ ಆಫ್ ಹಾನರ್ ನೀಡುವ ಮೂಲಕ ಅಂಗಳಕ್ಕೆ ಸ್ವಾಗತಿಸಿ ಬೀಳ್ಕೊಟ್ಟರು.

40 ವರ್ಷದ ಬ್ರಾವೊ ಕೆರಿಬಿನ್‌ ಟೂರ್ನಿ ಆರಂಭಕ್ಕೂ ಮುನ್ನವೇ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು. ಇದೀಗ ನಿವೃತ್ತಿಯಾದ ವಿಚಾರವನ್ನು ಅತ್ಯಂತ ಭಾವುಕವಾಗಿ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ವೃತ್ತಿಪರ ಕ್ರಿಕೆಟಿಗನಾಗಿ ಇಪ್ಪತ್ತೊಂದು ವರ್ಷಗಳನ್ನು ಪೂರ್ತಿಗೊಳಿಸಿರುವೆ. ಇದು ನಂಬಲಾಗದ ಪ್ರಯಾಣವಾಗಿದೆ. ನನ್ನ ಮನಸ್ಸು ಮುಂದುವರಿಯಲು ಬಯಸುತ್ತದೆ. ಆದರೆ ನನ್ನ ದೇಹವು ಇನ್ನು ಮುಂದೆ ನೋವು ಮತ್ತು ಒತ್ತಡವನ್ನು ಸಹಿಸುವುದಿಲ್ಲ. ನನ್ನ ತಂಡದ ಆಟಗಾರರು, ನನ್ನ ಅಭಿಮಾನಿಗಳು ಅಥವಾ ನಾನು ಪ್ರತಿನಿಧಿಸುವ ತಂಡಗಳನ್ನು ನಿರಾಸೆಗೊಳಿಸುವ ಸ್ಥಿತಿಯಲ್ಲಿ ನಾನು ಇರಲು ಸಾಧ್ಯವಿಲ್ಲ. ಆದ್ದರಿಂದ, ಭಾರವಾದ ಹೃದಯದಿಂದ, ನಾನು ಅಧಿಕೃತವಾಗಿ ಕ್ರೀಡೆಯಿಂದ ನಿವೃತ್ತಿ ಘೋಷಿಸುತ್ತೇನೆ “ಎಂದು ಅವರು ಬರೆದುಕೊಂಡಿದ್ದಾರೆ.

2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಬ್ರಾವೊ ಟಿ20 ಫ್ರಾಂಚೈಸಿ ಲೀಗ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2 ವರ್ಷಗಳ ಹಿಂದೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ವಿದಾಯ ಹೇಳಿದ್ದರು. ಇದೀಗ ತವರಿನ ಪ್ರೀಮಿಯರ್‌ ಲೀಗ್‌ನಿಂದಲೂ ನಿವೃತ್ತಿಯಾಗಿದ್ದಾರೆ. ಕಳೆದ ಟಿ20 ವಿಶ್ವ ಕಪ್‌ ಟೂರ್ನಿಯಲ್ಲಿ ಬ್ರಾವೊ ಅಫಘಾನಿಸ್ತಾನ ತಂಡದ ಬೌಲಿಂಗ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಆಫ್ಘಾನ್‌ ಸೆಮಿ ಫೈನಲ್‌ ಪ್ರವೇಶಿಸಿತ್ತು.

ಇದನ್ನೂ ಓದಿ IND vs BAN 2nd Test: ಕಾನ್ಪುರದಲ್ಲಿ ಭಾರೀ ಮಳೆ; ಟಾಸ್‌ ವಿಳಂಬ

ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬ್ರಾವೊ ಇದುವರೆಗೆ 107 ಪಂದ್ಯಗಳನ್ನಾಡಿ ಒಟ್ಟು 1,155 ರನ್ ಕಲೆಹಾಕಿದ್ದಾರೆ. ಜತೆಗೆ 129 ವಿಕೆಟ್​ಗಳನ್ನು ಕಬಳಿಸಿದ್ದಾರೆ. 2017 ಮತ್ತು 2018 ರಲ್ಲಿ ಬ್ರಾವೊ ನಾಯಕತ್ವದಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡವು ಸಿಪಿಎಲ್​ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. 2021 ರಲ್ಲಿ ಪೇಟ್ರಿಯಾಟ್ಸ್‌ ತಂಡವು ಬ್ರಾವೊ ಅವರ ನಾಯಕತ್ವದಲ್ಲೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

ವಿಂಡೀಸ್‌ ತಂಡದ ಪರ ಸಾಧನೆ

ವೆಸ್ಟ್‌ ಇಂಡೀಸ್‌ ತಂಡದ ಪರ 40 ಟೆಸ್ಟ್‌ ಪಂದ್ಯ ಆಡಿರುವ ಬ್ರಾವೊ, 71 ಇನಿಂಗ್ಸ್‌ಗಳಿಂದ 31.43ರ ಸರಾಸರಿಯಲ್ಲಿ 2,200 ರನ್‌ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು 13 ಅರ್ಧ ಶತಕಗಳಿವೆ. 39.84ರ ಸರಾಸರಿಯಲ್ಲಿ 86 ವಿಕೆಟ್‌ಳನ್ನು ಕೆಡವಿದ್ದಾರೆ. ಎರಡು ಬಾರಿ ಐದು ವಿಕೆಟ್‌ ಕಿತ್ತ ಸಾಧನೆ ಒಳಗೊಂಡಿದೆ. 2004ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಪಾದಾರ್ಪಣೆ ಮಾಡಿದ್ದ ಬ್ರಾವೊ 2010ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್‌ ಆಡಿದ್ದರು. 164 ಏಕದಿನ ಪಂದ್ಯಗಳಲ್ಲಿ 25.37ರ ಸರಾಸರಿಯಲ್ಲಿ 2968 ರನ್‌ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 10 ಅರ್ಧಶತಕಗಳಿವೆ. ಬೌಲಿಂಗ್‌ ವಿಭಾಗದಲ್ಲಿ 29.52ರ ಸರಾಸರಿಯಲ್ಲಿ 199 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಕೊಂಡಿದ್ದಾರೆ. 66 ಟಿ20 ಪಂದ್ಯಗಳಲ್ಲಿ 59 ಇನಿಂಗ್ಸ್‌ ಗಳಿಂದ 116.53 ಸ್ಟ್ರೇಕ್‌ ರೇಟ್‌ನಲ್ಲಿ 1,142 ರನ್‌ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳಿವೆ. 8.46ರ ಎಕಾನಮಿಯಲ್ಲಿ 1470 ರನ್‌ ನೀಡಿ 52 ವಿಕೆಟ್‌ ಪಡೆದುಕೊಂಡಿದ್ದಾರೆ.