Saturday, 23rd November 2024

Nitin Gadkari ಪ್ರತಿಪಕ್ಷ ನಾಯಕರಿಂದ ಹಲವು ಬಾರಿ ಪ್ರಧಾನಿಯಾಗುವ ಆಫರ್‌ ಬಂದಿತ್ತು- ಮತ್ತೆ ಬಾಂಬ್‌ ಸಿಡಿಸಿದ ಗಡ್ಕರಿ

Nitin Gadkari

ಮುಂಬೈ: ಕೆಲವು ದಿನಗಳ ಹಿಂದೆಯಷ್ಟೇ ಮುಂದಿನ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ(NDA Government) ಅಧಿಕಾರಕ್ಕೆ ಬರುವ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) , ಇದೀಗ ಲೋಕಸಭೆ ಚುನಾವಣೆಗೂ ಮುನ್ನ ಮತ್ತು ಫಲಿತಾಂಶದ ಬಳಿಕ ತಮಗೆ ಅನೇಕ ಬಾರಿ ಪ್ರಧಾನಮಂತ್ರಿ ಆಗುವ ಆಫರ್‌ ಬಂದಿತ್ತು ಎಂದು ಹೇಳುವ ಮೂಲಕ ಬಾಂಬ್‌ ಸಿಡಿಸಿದ್ದಾರೆ.

ಮಾದ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕನಿಂದಲೇ ಪಿಎಂ ಆಗುವ ಆಫರ್‌ ಸಿಕ್ಕಿತ್ತು. ತಾವು ಪಿಎಂ ಆದರೆ ಬೆಂಬಲ ನೀಡುವುದಾಗಿ ಅವರು ಹೇಳಿದ್ದರು. ಇಂತಹ ಆಫರ್‌ಗಳು ಅನೇಕ ಬಾರಿ ನನಗೆ ಬಂದಿವೆ. ನಾನು ಅದನ್ನು ತಿರಸ್ಕರಿಸಿದ್ದೆ ಎಂದು ಹೇಳಿದ್ದಾರೆ. ಆ ಆಫರ್‌ ಅನ್ನು ಏಕೆ ತಿರಸ್ಕರಿಸಿದ್ದೀರಿ ಎಂದು ಸಂದರ್ಶಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರಧಾನಿಯಾಗುವುದು ನನ್ನ ಗುರಿಯಲ್ಲ. ನಾನು ನನ್ನ ನಂಬಿಕೆಯೊಂದಿಗೆ ನನ್ನ ಸಿದ್ಧಾಂತವನ್ನು ಬದುಕುತ್ತಿದ್ದೇನೆ” ಎಂದು ಅವರು ಪ್ರತಿಪಾದಿಸಿದರು.

ಅನೇಕ ಬಾರಿ ಸ್ವಪಕ್ಷ ಹಾಗೂ ಸರ್ಕಾರದ ವಿರುದ್ಧವೇ ಟೀಕೆಗಳನ್ನು ವ್ಯಕ್ತಪಡಿಸಿ ಆಗಾಗ ಸುದ್ದಿಯಲ್ಲಿರುವ ನಿತಿನ್‌ ಗಡ್ಕರಿ, ಅವರ ಈ ಹೇಳಿಕೆ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ನಿತಿನ್‌ ಗಡ್ಕರಿ ಅವರು ನಮ್ಮ ಸರ್ಕಾರ 4ನೇ ಬಾರಿ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಚಾರದಲ್ಲಿ ಖಚಿತತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಭಾನುವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿಅವರು, ವಿವಿಧ ಸರ್ಕಾರಗಳಲ್ಲಿ ಸಚಿವರಾಗುತ್ತಿರುವ ತಮ್ಮ ಸಹೋದ್ಯೋಗಿ ರಾಮದಾಸ್ ಅಠಾವಳೆ (Ramdas Athawale) ಅವರ ಸಾಮರ್ಥ್ಯದ ಕುರಿತು ತಮಾಷೆ ಮಾಡುತ್ತ ಈ ರೀತಿಯ ಹೇಳಿಕೆ ನೀಡಿದ್ದಾರೆ. “ನಮ್ಮ ಸರ್ಕಾರ ನಾಲ್ಕನೆಯ ಬಾರಿ ಅಧಿಕಾರಕ್ಕೆ ಮರಳುವ ಕುರಿತು ಖಾತರಿ ಇಲ್ಲ. ಅದಾಗ್ಯೂ ರಾಮದಾಸ್ ಅಠಾವಳೆ ಮುಂದಿನ ಬಾರಿಯೂ ಸಚಿವರಾಗಲಿದ್ದಾರೆ ಎಂಬುದು ಖಚಿತʼʼ ಎಂದು ಗಡ್ಕರಿ ಅವರು ಹೇಳಿದ್ದಾರೆ. ಜತೆಗೆ ನಾನು ತಮಾಷೆ ಮಾಡುತ್ತಿದ್ದೇನೆ ಎಂದೂ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (Republican Party of India-RPI)ದ ನಾಯಕ ರಾಮದಾಸ್ ಅಠಾವಳೆ ಅವರು ಮೂರು ಅವಧಿಯಲ್ಲಿಯೂ ಸಚಿವರಾಗಿದ್ದು, ನಾಲ್ಕನೆಯ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಮರಳಿದರೆ ಮತ್ತೆ ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಗಡ್ಕರಿ ತಮ್ಮ ಸಹೋದ್ಯೋಗಿಯ ಕಾಲೆಳೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Nitin Gadkari: 4ನೇ ಬಾರಿ ನಾವು ಅಧಿಕಾರಕ್ಕೆ ಬರುವ ಖಾತರಿ ಇಲ್ಲ; ನಿತಿನ್‌ ಗಡ್ಕರಿ ಹೀಗೆ ಹೇಳಿದ್ದೇಕೆ?