ಮೈಸೂರು: ನಾಡಹಬ್ಬ ಮೈಸೂರು ದಸರಾ (Mysore Dasara 2024) ಮಹೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದೆ. ಈ ನಡುವೆ ಕಳೆದ ವರ್ಷದಂತೆಯೇ ಈ ವರ್ಷವೂ ʼಮಹಿಷ ದಸರಾʼ (Mahisha dasara) ಆಚರಣೆ ನಡೆಸಲು ʼಮಹಿಷ ದಸರಾ ಸಮಿತಿʼ ಮುಂದಾಗಿದೆ. ಜೊತೆಗೆ, ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿ ಬೆಟ್ಟಕ್ಕೆ (Chamundi Hills) ‘ಮಹಿಷ ಬೆಟ್ಟ’ ಎಂದು ಹೆಸರು ಬದಲಿಸಿ ಬರೆದಿದ್ದು, ಇನ್ನೊಂದು ವಿವಾದದ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿದೆ.
ಮಹಿಷ ದಸರಾ ಸಮಿತಿ ಬೆಟ್ಟದ ಹೆಸರನ್ನೇ ಬದಲಿಸುವ ಮೂಲಕ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮಹಿಷ ದಸರಾ ಆಚರಣ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ‘ಮಹಿಷೂರು’, ಚಾಮುಂಡಿ ಬೆಟ್ಟ ಬದಲಿಗೆ ‘ಮಹಿಷ ಬೆಟ್ಟ’ ಎಂಬ ಹೆಸರುಗಳನ್ನು ಮುದ್ರಿಸಿದೆ.
ಇದೇ ತಿಂಗಳು 29ರಂದು ಮಹಿಷ ದಸರಾ ಆಚರಣೆ ನಡೆಸಲು ಸಮಿತಿ ನಿರ್ಧರಿಸಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ಬಳಿಕ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಳೆದ ವರ್ಷವೂ ಮಹಿಷ ದಸರಾ ನಡೆಸಲಾಗಿತ್ತು. ಆದರೆ ಇದನ್ನು ದೊಡ್ಡ ಮಟ್ಟದಲ್ಲಿ ಆಚರಿಸದಂತೆ ಆಗಿನ ಬಿಜೆಪಿ ಸರ್ಕಾರ ತಡೆದಿತ್ತು. ಈ ಬಾರಿ ರಾಜ್ಯ ಸರ್ಕಾರ ಯಾವುದೇ ತಡೆ ಹಾಕಿಲ್ಲ.
ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ಚಾಮುಂಡಿ ಚಲೋ ಹೋರಾಟ ನಡೆಸುವುದಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಮಹಿಷ ದಸರಾವನ್ನು ವಿರೋಧಿಸಿದೆ. ದಲಿತ ಹಾಗೂ ಪ್ರಗತಿಪರ ಹೋರಾಟಗಾರರು ಮಹಿಷ ದಸರಾ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಮಹಿಷ ಅಸುರ ಎಂಬುದು ತಿರುಚಿದ ಇತಿಹಾಸ ಎಂಬುದು ಈ ಸಮಿತಿಯ ವಾದವಾಗಿದೆ. ಈ ಮಧ್ಯೆಯೇ ಮಹಿಷ ದಸರಾ ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿ ಬೆಟ್ಟದ ಹೆಸರನ್ನು ಮಹಿಷ ಬೆಟ್ಟ ಎಂದು ಬದಲಿಸುವ ಮೂಲಕ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದೆ.
ಇದನ್ನೂ ಓದಿ: Dasara invitation: ದಸರಾ ಮಹೋತ್ಸವ-2024 ರ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಅಧಿಕೃತ ಆಹ್ವಾನ