Friday, 27th September 2024

World Tourism Day 2024: ಇಂದು ವಿಶ್ವ ಪ್ರವಾಸೋದ್ಯಮ ದಿನ; ಮೊಬೈಲ್ ನೆಟ್‌‌ವರ್ಕ್ ಇಲ್ಲದ ಅದ್ಭುತ ಪ್ರವಾಸಿ ಸ್ಥಳಗಳಿವು!

World Tourism Day 2024

ಬದುಕಿನ ಎಲ್ಲ ಒತ್ತಡಗಳನ್ನು ಬದಿಗಿಟ್ಟು ಯಾರ ಸಂಪರ್ಕಕ್ಕೂ ಸಿಗದೇ ದೂರವಿರಬೇಕು ಎನ್ನುವ ಆಸೆ ಇದ್ದರೆ ಭಾರತದಲ್ಲೇ ಇರುವ ಈ ಕೆಲವು ತಾಣಗಳಿಗೆ (Tourist places) ಹೋಗಿ ಸುತ್ತಾಡಿ, ಕೆಲವು ದಿನಗಳ ರಜೆ ಕಳೆದು ಬರಬಹುದು. ಇಂದು ಸೆಪ್ಟೆಂಬರ್ 27 ವಿಶ್ವ ಪ್ರವಾಸೋದ್ಯಮ ದಿನ (World Tourism Day 2024). ಈ ಸಂದರ್ಭದಲ್ಲಿ ಲ್ಯಾಪ್‌ಟಾಪ್ ವೈ-ಫೈಗೆ ಸಂಪರ್ಕಗೊಳ್ಳದ, ಮೊಬೈಲ್ ರಿಂಗಣಿಸದ (No Network Destinations) ಭಾರತದ ಆರು ಪ್ರಮುಖ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

ಹೆಚ್ಚಿನವರಿಗೆ ಈಗ ಮೊಬೈಲ್, ಲ್ಯಾಪ್‌ಟಾಪ್ ಇಲ್ಲದೆ ಒಂದು ದಿನ ಕಳೆಯುವುದು ಕಷ್ಟವೆನಿಸುತ್ತದೆ. ಆದರೆ ಕೆಲವೊಮ್ಮೆ ಇದು ಕಿರಿಕಿರಿಯೂ ಎಂದೆನಿಸುತ್ತದೆ. ಹೀಗಾಗಿ ದೈಹಿಕ, ಮಾನಸಿಕ ನೆಮ್ಮದಿಗಾಗಿ ಕೊಂಚ ಬಿಡುವು ಮಾಡಿಕೊಂಡು ಈ ಪ್ರದೇಶಗಳಲ್ಲಿ ಸುತ್ತಾಡಿ ಬರಬಹುದು.

ರಜೆಯ ಮೋಜಿನಲ್ಲಿರುವಾಗ ತುರ್ತು ಕೆಲಸದ ಕರೆಗಳು, ಇಮೇಲ್‌ ಸಂದೇಶಗಳು ನಮ್ಮ ನೆಮ್ಮದಿಯನ್ನು ಹಾಳು ಮಾಡುವುದು ಮಾತ್ರವಲ್ಲ ಪ್ರವಾಸದ ಸಂಪೂರ್ಣ ಸುಖವನ್ನು ಅನುಭವಿಸಲು ಬಿಡುವುದಿಲ್ಲ. ಹೀಗಾಗಿ ಪ್ರವಾಸದಲ್ಲಿ ಹೆಚ್ಚು ಅಗತ್ಯವಿರುವ ಶಾಂತಿ, ನೆಮ್ಮದಿಯನ್ನು ಅರಸಲು ಬಯಸಿದರೆ ನೆಟ್ವರ್ಕ್ ಇಲ್ಲದ ಭಾರತದ ಈ ತಾಣಗಳಿಗೆ ಭೇಟಿ ನೀಡಬಹುದು.

World Tourism Day 2024

ಹಿಮಾಚಲ ಪ್ರದೇಶದ ಖೀರ್‌‌ಗಂಗಾ

ಒಂದೆರಡು ಗಂಟೆಗಳ ಚಾರಣದ ಮೂಲಕ ಹಿಮಾಚಲ ಪ್ರದೇಶದ ಖೀರ್ಗಂಗಾವನ್ನು ತಲುಪಬಹುದು. ಇಲ್ಲಿ ತಲುಪಿದ ಅನಂತರ ಭವ್ಯವಾದ ಪರ್ವತಗಳಿಂದ ಸುತ್ತುವರಿದ ಸುಂದರವಾದ ಹುಲ್ಲುಗಾವಲನ್ನು ಕಾಣಬಹುದು. ಆದರೆ ಇಲ್ಲಿ ಮೊಬೈಲ್ ನೆಟ್ವರ್ಕ್ ಇರುವುದಿಲ್ಲ. ಸಂಪೂರ್ಣವಾಗಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಂಡು ನೆಮ್ಮದಿಯಾಗಿ ಇರಬಹುದು. ಬೇಕಿದ್ದರೆ ಫೋಟೋ ಕ್ಲಿಕ್ಕಿಸಿಕೊಳ್ಳಬಹುದು.

World Tourism Day 2024

ಜಮ್ಮು ಕಾಶ್ಮೀರದ ಐಸ್ ಕಿಂಗ್ಡಮ್ ಝನ್ಸ್ಕರ್

ಭೂಮಿಯ ಮೇಲಿನ ಸ್ವರ್ಗವಿದು. ಇಲ್ಲಿನ ಒಂದು ನೋಟ ಫೋನ್‌ ಅನ್ನು ನಿಮ್ಮಿಂದ ಗಂಟೆಗಳ ಕಾಲ ದೂರವಿಡುವಂತೆ ಮಾಡುತ್ತದೆ. ಅತ್ಯಂತ ಸುಂದರವಾದ ಈ ತಾಣಕ್ಕೆ ಭೇಟಿ ನೀಡಿದ ಬಳಿಕ ಬಿಡುವಿಲ್ಲದ ನಗರ ಜೀವನಕ್ಕೆ ಹಿಂತಿರುಗಲು ನೀವು ಖಂಡಿತ ಇಷ್ಟಪಡಲಾರಿರಿ. ಝನ್ಸ್ಕರ್‌ನಲ್ಲಿ ನೆಲೆಸಿರುವ ಈ ಭವ್ಯವಾದ ಸ್ಥಳವು ‘ಐಸ್ ಕಿಂಗ್‌ಡಮ್’ ಬಾಲ್ಯದಲ್ಲಿ ನೋಡಿರುವ ‘ಐಸ್ ಏಜ್’ ಸಿನಿಮಾವನ್ನು ನೆನಪಿಸಬಹುದು.

World Tourism Day 2024

ಹಿಮಾಚಲ ಪ್ರದೇಶದ ಚಿತ್ಕುಲ್

ನಗರದ ಗದ್ದಲಗಳಿಂದ ಬಹುದೂರವಿರುವ ಹಿಮಾಚಲ ಪ್ರದೇಶದ ಚಿತ್ಕುಲ್ ಪ್ರಶಾಂತ ಗ್ರಾಮವಾಗಿದೆ. ಇಲ್ಲಿ ಚಹಾವನ್ನು ಹೀರುತ್ತಾ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯಾಗಿ ಕಾಲ ಕಳೆಯಬಹುದು.

World Tourism Day 2024

ಸಿಕ್ಕಿಂ ನ ಲುಂಗ್‌ತುಂಗ್ ಧೂಪ್‌ಧಾರ

‘ದೇವರ ನಿವಾಸ’ ಎಂದೂ ಕರೆಯಲ್ಪಡುವ ಸಿಕ್ಕಿಂನಲ್ಲಿ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಈ ಸ್ಥಳ ಅತ್ಯತ್ತಮ ಆಯ್ಕೆಯಾಗಿದೆ. ಹಿಮ ಪರ್ವತಗಳಿಂದ ಆವೃತವಾಗಿರುವ ಲುಂಗ್‌ತುಂಗ್ ಧೂಪ್‌ಧಾರ ಪ್ರದೇಶವು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ಅತ್ಯತ್ತಮ ಸ್ಥಳವಾಗಿದೆ.

World Tourism Day 2024

ಉತ್ತರಾಖಂಡದ ಸ್ವರ್ಗಾರೋಹಿಣಿ

ಸ್ವರ್ಗಕ್ಕೆ ದಾರಿ ಎಂದು ಕರೆಯಲ್ಪಡುವ ಉತ್ತರಾಖಂಡದ ಸ್ವರ್ಗಾರೋಹಿಣಿಯ ಮೇಲಕ್ಕೆ ತಲುಪಿದಾಗ ಕ್ಷೀರಪಥವನ್ನು ಕಾಣಬಹುದು. ಇದು ನೆಟ್‌ವರ್ಕ್ ಕವರೇಜ್ ಪ್ರದೇಶದಿಂದ ಸಂಪೂರ್ಣ ದೂರವಾಗಿದೆ.

Indian Railways: ಅತೀ ಹೆಚ್ಚು ಆದಾಯ ತಂದುಕೊಡುವ ರೈಲು ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್!

World Tourism Day 2024

ಉತ್ತರಾಖಂಡದ ಹೂಗಳ ಕಣಿವೆ

ಉತ್ತರಾಖಂಡ್‌ನಲ್ಲಿರುವ ಮತ್ತೊಂದು ಸ್ವರ್ಗ ಹೂವುಗಳಿಂದ ಆವೃತ್ತವಾದ ಪರ್ವತ. ಇಲ್ಲಿ ನಿಮ್ಮ ಫೋನ್ ಗಳು ಚಿತ್ರಗಳನ್ನು ಸೆರೆ ಹಿಡಿಯಲು ಮಾತ್ರ ಬಳಕೆಯಾಗುತ್ತದೆ. ಪರ್ವತಗಳು ಹೂವುಗಳಿಂದ ಆವೃತವಾಗಿದ್ದು ನಯನಮನೋಹರವಾಗಿರುತ್ತದೆ. ಇಲ್ಲಿ ಅತ್ಯಂತ ಸುಂದರವಾದ ಸಮಯವನ್ನು ಕಳೆಯಬಹುದು.