Sunday, 24th November 2024

‌Virat Kohli: ಕೊಹ್ಲಿ ಕಾಲಿಗೆ ಬಿದ್ದ ಮೈದಾನ ಸಿಬ್ಬಂದಿ; ವಿಡಿಯೊ ವೈರಲ್

Virat Kohli

ಕಾನ್ಪುರ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿಗೆ(Virat Kohli) ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಕಾನ್ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಮೈದಾನ ಸಿಬ್ಬಂದಿ(Groundstaff) ಕೊಹ್ಲಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ನಡೆಯಿತು. ಈ ವಿಡಿಯೊ ವೈರಲ್‌(viral video) ಆಗಿದೆ.

ವಿರಾಟ್‌ ಕೊಹ್ಲಿ ಅವರು ಬ್ಯಾಟಿಂಗ್‌ ಅಭ್ಯಾಸ ನಡೆಸಲು ಮೈದಾನಕ್ಕೆ ಬರುತ್ತಿದ್ದ ವೇಳೆ ಮೈದಾನಕ್ಕೆ ಅಳವಡಿಸಿದ್ದ ಕವರ್‌ಗಳನ್ನು ತೆಗೆಯುತ್ತಿದ್ದ ಸಿಬ್ಬಂದಿ ನೇರವಾಗಿ ಕೊಹ್ಲಿ ಬಳಿಗೆ ಓಡಿ ಬಂದು ಅವರ ಕಾಲಿಗೆ ಬಿದ್ದಿದ್ದಾನೆ. ಈ ಮೂಲಕ ಬಹು ದಿನಗಳಿಂದ ಕೊಹ್ಲಿಯನ್ನು ಭೇಟಿಯಾಗುವ ಆಸೆಯನ್ನು ತೀರಿಸಿಕೊಂಡಿದ್ದಾರೆ.

ಮಳೆಯಿಂದಾಗಿ ಪಂದ್ಯ ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿ ಆರಂಭಗೊಂಡಿತು. ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು ಬಾಂಗ್ಲಾದೇಶ ಬ್ಯಾಟಿಂಗ್‌ ನಡೆಸುತ್ತಿದೆ.

ಚೆನ್ನೈಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ವಿರಾಟ್‌ ಘೋರ ಬ್ಯಾಟಿಂಗ್‌ ವೈಫಲ್ಯ ಎದುರಿಸಿದ್ದರು. ದ್ವಿತೀಯ ಟೆಸ್ಟ್‌ನಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ನಡೆಸುವ ವಿಶ್ವಾಸದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಕ್ರಮವಾಗಿ 6 ಮತ್ತು17 ರನ್‌ ಬಾರಿಸಿ ವಿಕೆಟ್‌ ಕೈಚೆಲ್ಲಿದ್ದರು.

ಇದನ್ನೂ ಓದಿ Rishabh Pant: ನಾನು ಆರ್‌ಸಿಬಿ ಸೇರಲ್ಲ; ಸ್ಪಷ್ಟನೆ ಕೊಟ್ಟ ಪಂತ್‌

ಸಚಿನ್‌ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ

ವಿರಾಟ್‌ ಕೊಹ್ಲಿ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ 129 ರನ್‌ ಬಾರಿಸಿದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಕ್ಲಬ್‌ ಸೇರಲಿದ್ದಾರೆ. ಆಗ ಅವರು 9 ಸಾವಿರ ರನ್‌ ಗಳಿಸಿದ ಭಾರತದ 4ನೇ ಕ್ರಿಕೆಟಿಗನಾಗಿ ಮೂಡಿಬರಲಿದ್ದಾರೆ. ಉಳಿದವರೆಂದರೆ ಸಚಿನ್‌ ತೆಂಡೂಲ್ಕರ್‌ (15,921), ರಾಹುಲ್‌ ದ್ರಾವಿಡ್‌ (13,265) ಮತ್ತು ಸುನೀಲ್‌ ಗಾವಸ್ಕರ್‌ (10,122).

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್‌ಗಳನ್ನು ಪೂರೈಸಲು ಕೊಹ್ಲಿಗೆ ಇನ್ನು 35 ರನ್‌ಗಳ ಅಗತ್ಯವಿದೆ. ದ್ವಿತೀಯ ಟೆಸ್ಟ್‌ನಲ್ಲಿ ಕೊಹ್ಲಿ 35 ರನ್‌ ಬಾರಿಸಿದರೆ 147 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲಿ ವೇಗವಾಗಿ 27,000 ರನ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ಸಚಿನ್‌ ಹೆಸರಿನಲ್ಲಿದೆ. ಸಚಿನ್‌ 623 ಇನಿಂಗ್ಸ್‌ಗಳಲ್ಲಿಈ ಮೈಲುಗಲ್ಲು ನಿರ್ಮಿಸಿದ್ದರು. ಕೊಹ್ಲಿ ಈಗಾಗಲೇ 592 ಇನಿಂಗ್ಸ್‌ಗಳಿಂದ 26,965 ರನ್‌ಗಳನ್ನು ಗಳಿಸಿದ್ದಾರೆ.