Sunday, 24th November 2024

Viral Video: ಭಾರತದ ಧ್ವಜ ಹಿಡಿದು ಸಂಭ್ರಮಿಸಿದ ಪಾಕ್ ಆಟಗಾರರು; ವಿಡಿಯೊ ವೈರಲ್!

Pakistani Chess Team

ನವದೆಹಲಿ: ಇತ್ತೀಚೆಗೆ ಚೀನಾದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ (Asian Champions Trophy) ಹಾಕಿ ಫೈನಲ್‌ ಪಂದ್ಯದ ವೇಳೆ ಭಾರತ ತಂಡ ಆಡುತ್ತಿದ್ದಾಗ ಪಾಕಿಸ್ತಾನ ಆಟಗಾರರು ಚೀನಾ ಧ್ವಜ ಹಿಡಿದು ಚೀನಾಕ್ಕೆ ಬೆಂಬಲ ಸೂಚಿಸಿದ್ದರು. ಆದರೆ, ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ(Olympiad) ಪಾಕಿಸ್ತಾನದ ಚೆಸ್‌ ತಂಡ(Pakistani Chess Team) ಭಾರತದ ಧ್ವಜವನ್ನು ಹಿಡಿದು ಭಾರತೀಯ ತಂಡದೊಂದಿಗೆ ಸಂಭ್ರಮಿಸಿದ್ದಾರೆ. ಈ ವಿಡಿಯೊ ವೈರಲ್‌(Viral Video) ಆಗಿದೆ.

ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಪುರುಷರ ಹಾಗೂ ಮಹಿಳಾ ತಂಡ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ಪಾಕಿಸ್ತಾನ ತಂಡದ ಆಟಗಾರರು ಮತ್ತು ಕೋಚಿಂಗ್‌ ಸಿಬ್ಬಂದಿ ಭಾರತೀಯ ಸಂಭ್ರಮಾಚರಣೆಯಲ್ಲಿ ಕೈ ಜೋಡಿಸಿದ್ದಾರೆ. ಭಾರತದ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಈ ವಿಡಿಯೊ ಕಂಡ ನೆಟ್ಟಿಗರು. ಭಾರತ– ಪಾಕಿಸ್ತಾನ ಮಧ್ಯದ ದ್ವಿಪಕ್ಷೀಯ ಬಾಂಧವ್ಯ ಸಿರಿ ಇರದಿದ್ದರೂ ಇಲ್ಲಿ ಕ್ರೀಡಾ ಸ್ಫೂರ್ತಿ ಗೆದ್ದಿದೆ ಎಂದು ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 22ರ ಭಾನುವಾರ ಹಂಗೇರಿಯಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಅರ್ಜುನ್‌ ಎರಿಗೇಸಿ, ಡಿ. ಗುಕೇಶ್‌, ಆರ್‌. ಪ್ರಜ್ಞಾನಂದ, ಪಿ. ಹರಿಕೃಷ್ಣ ಮತ್ತು ಶ್ರೀನಾಥ್‌ ನಾರಾಯಣನ್‌ (ನಾಯಕ) ಅವರಿದ್ದ ಪುರುಷರ ತಂಡ ಮುಕ್ತ ವಿಭಾಗದಲ್ಲಿ ಚೊಚ್ಚಲ ಸ್ವರ್ಣ ಜಯಿಸಿತ್ತು. ಬಳಿಕ ದ್ರೋಣವಲ್ಲಿ ಹರಿಕಾ, ದಿವ್ಯಾ ದೇಶ್‌ಮುಖ್‌, ಆರ್‌. ವೈಶಾಲಿ ಮತ್ತು ವಂತಿಕಾ ಅಗರ್ವಾಲ್‌ ಅವರಿದ್ದ ಮಹಿಳಾ ತಂಡವೂ ಚಿನ್ನಕ್ಕೆ ಕೊರಳೊಡ್ಡಿತ್ತು. ಪುರುಷರ ತಂಡ ಸ್ಲೊವೇ ನಿಯಾ ವಿರುದ್ಧ ಗೆಲುವು ದಾಖಲಿಸಿತು. ಮಹಿಳಾ ತಂಡ ಅಜರ್‌ಬೈಜಾನ್‌ ವಿರುದ್ಧ 3.5-0.5ರಿಂದ ಗೆದ್ದು ಬೀಗಿತ್ತು.

ಇದನ್ನೂ ಓದಿ IND vs BAN 2nd Test: ಕಾನ್ಪುರದಲ್ಲಿ ಭಾರೀ ಮಳೆ; ಟಾಸ್‌ ವಿಳಂಬ

ಬುಧವಾರ ಚೆಸ್‌ ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಧಾನಿ ನಿವಾಸದಲ್ಲಿ ಸಮ್ಮಾನಿಸಿದ್ದರು. ವಿಜೇತ ತಂಡದ ಪ್ರತಿಯೊಬ್ಬ ಆಟಗಾರ ಮತ್ತು ಆಟಗಾರ್ತಿಯರು ತಲಾ 25 ಲಕ್ಷ ರೂ. ಪಡೆಯಲಿದ್ದಾರೆ. ಪುರುಷರ ಮತ್ತು ಮಹಿಳಾ ತಂಡಗಳ ಕೋಚ್‌ ಆಗಿದ್ದ ಶ್ರೀನಾಥ್ ನಾರಾಯಣನ್ ಮತ್ತು ಅಭಿಜಿತ್‌ ಕುಂಟೆ ಅವರಿಗೆ ತಲಾ 15 ಲಕ್ಷ ರೂ. ನೀಡಲಾಗುವುದು. ಭಾರತ ನಿಯೋಗದ ನೇತೃತ್ವ ವಹಿಸಿದ್ದ ಗ್ರ್ಯಾಂಡ್‌ಮಾಸ್ಟರ್‌ ದಿವ್ಯೇಂದು ಬರುವಾ 10ಲಕ್ಷ ರೂ. ಪಡೆಯಲಿದ್ದು, ಸಹಾಯಕ ತರಬೇತುದಾರರು ತಲಾ 7.5 ಲಕ್ಷ ಮೊತ್ತ ಪಡೆಯಲಿದ್ದಾರೆ.