ಬೆಂಗಳೂರು: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79 ನೇ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಯುನೈಟೆಡ್ ಕಿಂಗ್ಡಮ್ನ ಪ್ರಧಾನಿ ಕೀರ್ ಸ್ಟಾರ್ಮರ್, ವಿಶ್ವಸಂಸ್ಥೆಯ (United Nations) ಭದ್ರತಾ ಮಂಡಳಿಯಲ್ಲಿ (UNSC) ಭಾರತದ ಕಾಯಂ ಸದಸ್ಯತ್ವಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಭಾರತಕ್ಕೆ ಬೆಂಬಲಿಸಿದ ಬಳಿಕ ಬ್ರಿಟನ್ನಿಂದಲೂ ಇದೇ ರೀತಿಯ ಬೆಂಬಲ ವ್ಯಕ್ತಗೊಂಡಿದೆ.
ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಯುಕೆ ಪ್ರಧಾನಿ, “ಭದ್ರತಾ ಮಂಡಳಿಯು ಹೆಚ್ಚು ಪ್ರಾತಿನಿಧಿಕ ಸಂಸ್ಥೆಯಾಗಿ ಬದಲಾಗಬೇಕಾಗಿದೆ. ಆ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ . ರಾಜಕೀಯದಿಂದ ಹಿನ್ನಡೆ ಉಂಟಾಗಬಾರದು” ಎಂದು ಹೇಳಿದರು.
ವಿಶ್ವ ಸಂಸ್ಥೆಯಲ್ಲಿ ಬ್ರೆಜಿಲ್, ಭಾರತ, ಜಪಾನ್ ಮತ್ತು ಜರ್ಮನಿಯನ್ನು ಕಾಯಂ ಸದಸ್ಯರಾಗಿ ಮತ್ತು ಚುನಾಯಿತ ಸದಸ್ಯರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು ಯುಕೆ ಪ್ರಧಾನಿ ಹೇಳಿದ್ದಾರೆ.
ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಐದು ಕಾಯಂ ಸದಸ್ಯರು ಮತ್ತು 10 ಕಾಯಂ ಅಲ್ಲದ ಸದಸ್ಯರನ್ನು ಒಳಗೊಂಡಿದೆ. ಕಾಯಂ ಅಲ್ಲದ ಸದಸ್ಯರನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತದೆ. ಐದು ಕಾಯಂ ಸದಸ್ಯ ರಾಷ್ಟ್ರಗಳಾದ ರಷ್ಯಾ, ಯುನೈಟೆಡ್ ಕಿಂಗ್ಡಮ್, ಚೀನಾ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಯಾವುದೇ ಮಹತ್ವದ ನಿರ್ಣಯ ವೀಟೋ ಮಾಡುವ ಅಧಿಕಾರ ಹೊಂದಿವೆ.
ಇದಕ್ಕೂ ಮುನ್ನ ಬುಧವಾರ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ ಭಾರತವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್ಸಿ) ಖಾಯಂ ಸದಸ್ಯರಾಗಿ ಸೇರಿಸಬೇಕೆಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: Liquor Consumers: ಎಣ್ಣೆ ಹೊಡೆಯುವುದರಲ್ಲಿ ತೆಲಂಗಾಣದ ಜನ ನಂ.1; ಕರ್ನಾಟಕಕ್ಕೆ ಯಾವ ಸ್ಥಾನ?
ಕಳೆದ ವಾರ, ಯುಎಸ್ ಅಧ್ಯಕ್ಷ ಜೋ ಬೈಡನ್ ಯುಎನ್ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಕ್ವಾಡ್ ನಾಯಕರ ಶೃಂಗಸಭೆಯಲ್ಲಿ, ಕ್ವಾಡ್ (ಯುಎಸ್, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ) ನಾಯಕರು ಜಂಟಿ ಹೇಳಿಕೆಯಲ್ಲಿ ಯುಎನ್ ಸಂಸ್ಥೆಯ ಸಮಗ್ರ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದರು.
ಸೆಪ್ಟೆಂಬರ್ 21 ರಂದು ಡೆಲಾವೇರ್ನ ವಿಲ್ಮಿಂಗ್ಟನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬಿಡೆನ್ ನಡುವಿನ ದ್ವಿಪಕ್ಷೀಯ ಮಾತುಕತೆಯ ನಂತರ ಈ ಬೆಳವಣಿಗೆ ಸಂಭವಿಸಿದೆ. ಅಲ್ಲಿ ಬೈಡನ್ ಸುಧಾರಿತ ಭದ್ರತಾ ಮಂಡಳಿಯಲ್ಲಿ ಭಾರತವನ್ನು ಸೇರಿಸಲು ಯುಎಸ್ ಬೆಂಬಲವನ್ನು ಪುನರುಚ್ಚರಿಸಿದರು ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ