Friday, 27th September 2024

Minister V Somanna: ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಕ್ರಾಂತಿ- ಸಚಿವ ಸೋಮಣ್ಣ 

ತುಮಕೂರಿನಲ್ಲಿ ಮೆಮು ರೈಲು ಲೋಕಾರ್ಪಣೆ 

ತುಮಕೂರು: ರಾಜ್ಯದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೈಲ್ವೆ ಕ್ರಾಂತಿ (Railway Revolution) ಮಾಡಲು ಬದ್ಧವಾಗಿರುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ (MInister V Somanna) ತಿಳಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ತುಮಕೂರು, ಯಶವಂತಪುರ ಹೊಸ ಮೆಮು ರೈಲು ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನಿನ್ನು ಇಲಾಖೆಯ ಬಗ್ಗೆ ಬಹಳ ತಿಳಿದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ನನ್ನ ಅವಧಿಯಲ್ಲಿ ರಾಜ್ಯದಲ್ಲಿ ಬಾಕಿ ಉಳಿದಿರುವ, ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಸಂಪೂರ್ಣಗೊಳಿಸುವ ಮೂಲಕ ರೈಲ್ವೆ ಕ್ರಾಂತಿ ಮಾಡುವುದಾಗಿ ಹೇಳಿದರು.

ರಾಯದುರ್ಗ ಯೋಜನೆ ಪೂರ್ಣ: 2027ರ ಮಾರ್ಚ್ ಒಳಗೆ ರಾಯದುರ್ಗ-ತುಮಕೂರು, ದಾವಣಗೆರೆ-ತುಮಕೂರು ರೈಲ್ವೆ ಮಾರ್ಗಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Railway Minister Ashwini Vaishnav) ರವರಿಂದ ಲೋಕಾರ್ಪಣೆ ಮಾಡಿಸಲಾಗುವುದು .

ಬೆಂಗಳೂರಿಗೆ ಸಬ್‌ಅರ್ಬನ್ ರೈಲು(SubUrban Train) ಸೇವೆ ಒದಗಿಸಲು ಈಗಾಗಲೇ ಸಚಿವರಾದ ಅಶ್ವಿನಿ ವೈಷ್ಣವ್‌ರವರೊಂದಿಗೆ ಚರ್ಚೆ ಮಾಡಿದ್ದು, 2025ರೊಳಗೆ 2 ಹಂತದ ಸಬ್‌ಅರ್ಬನ್ ರೈಲುಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಸ್ವಯಂ ಪ್ರೇರಿತ ಸಿಗ್ನಲ್ : ತುಮಕೂರು-ಅರಸೀಕೆರೆ ಮಾರ್ಗ(Tumkur-Arsikere Route) ದಲ್ಲಿ 220 ಕೋಟಿ ವೆಚ್ಚದಲ್ಲಿ ಸ್ವಯಂಪ್ರೇರಿತ ಸಿಗ್ನಲ್‌ಗಳನ್ನು ಸಹ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ . 

ತುಮಕೂರನ್ನು ಮತ್ತೊಂದು ಬೆಂಗಳೂರನ್ನಾಗಿ ಮಾಡಬೇಕು ಎಂಬ ಆಸೆ ತಮಗಿದೆ. ಹಾಗಾಗಿ ತುಮಕೂರು-ಬೆಂಗಳೂರು ಮಾರ್ಗದಲ್ಲಿರುವ 2 ಪಥದ ರೈಲ್ವೆ ಹಳಿಗಳನ್ನು 4 ಲೈನ್‌ಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳ ಲಾಗುವುದು ಎಂದರು.

ಒಂದೇ ನಾಣ್ಯದ ಎರಡು ಮುಖ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿದರೆ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಳ್ಳುವುದರ ಜತೆಗೆ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣಲಿವೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಕಾರ್ಯೋನ್ಮುಖರಾದರೆ ಯಾವುದೇ ಒಂದು ಸಮಸ್ಯೆಯೂ ಜನಪ್ರತಿನಿಧಿಗಳ ಬಳಿಗೆ ಬರುವುದೇ ಇಲ್ಲ ಎಂದರು.

ರೈಲ್ವೆ ಇಲಾಖೆ ಸೂಕ್ಷ್ಮ ಇಲಾಖೆ. ರಕ್ಷಣಾ ಇಲಾಖೆಯಂತೆ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತಿದ್ದೇನೆ. ಅ. 15ರ ಬಳಿಕ 4 ತಿಂಗಳ ಕಾಲ ತುಮಕೂರು ಲೋಕಸಭಾ ಕ್ಷೇತ್ರದ ಜನರ ಅಹವಾಲು, ಹಳ್ಳಿಗಳ ಸ್ಥಿತಿಗತಿ ಅರಿಯಲು ಒಂದೊಂದು ತಾಲ್ಲೂಕಿನ ಪಂಚಾಯ್ತಿ ಕೇಂದ್ರ ಸ್ಥಾನಗಳಿಗೆ ಭೇಟಿ ನೀಡುತ್ತೇನೆ ಎಂದು  ಹೇಳಿದರು.

ಸ್ಕೈ ವಾಕ್ ನಿರ್ಮಾಣ : ನಗರದ ರೈಲ್ವೆ ನಿಲ್ದಾಣದ ಪಕ್ಕದ ರಸ್ತೆಯಲ್ಲಿ ಪ್ರಥಮ ದರ್ಜೆ ಕಾಲೇಜು, ಶಾಲೆಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸ್ಕೈ ವಾಕ್ ನಿರ್ಮಾಣ ಮಾಡುವಂತೆ ಶಾಸಕರಿಂದ ಮನವಿ ಬಂದಿದೆ. ಹಾಗಾಗಿ ಕೂಡಲೇ ಈ ಜಾಗದಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸುವುದಾಗಿ ತಿಳಿಸಿದರು.

ಡಬಲ್ ಗೇಮ್ ಗೊತ್ತಿಲ್ಲ: ನನಗೆ ಡಬಲ್ ಗೇಮ್ ಆಡುವುದು ಗೊತ್ತಿಲ್ಲ. ಕ್ಷೇತ್ರದ ಜನರ ಪ್ರತಿ ಮತಕ್ಕೂ 100 ಪಟ್ಟು ಬೆಲೆ ಜಾಸ್ತಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಕ್ಷೇತ್ರ ಜನರ ಋಣ ನನ್ನ ಮೇಲಿದೆ. ಈ ಋಣವನ್ನು ಪ್ರಾಮಾ ಣಿಕವಾಗಿ ತೀರಿಸಲು ಬದ್ಧನಾಗಿದ್ದೇನೆ .ತುಮಕೂರು ಲೋಕಸಭಾ ಕ್ಷೇತ್ರವನ್ನು ಕರ್ನಾಟಕದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಇಂಗಿತವನ್ನು ಸಚಿವ ಸೋಮಣ್ಣ ವ್ಯಕ್ತಪಡಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ, ಎಂ.ಟಿ. ಕೃಷ್ಣಪ್ಪ ಮಾತನಾಡಿದರು. 

ಸಮಾರಂಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಶಾಸಕರಾದ ನೆ.ಲ. ನರೇಂದ್ರಬಾಬು, ಹೆಚ್. ನಿಂಗಪ್ಪ, ನೈರುತ್ಯ ರೈಲ್ವೆ ಇಲಾಖೆಯ ಡಿಆರ್‌ ಯೋಗೀಶ್ ಮೋಹನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್  ಮತ್ತಿತರರು ಉಪಸ್ಥಿತರಿದ್ದರು.