Saturday, 23rd November 2024

GE Aerospace: 2 ಮಿಲಿಯನ್ ಗಂಟೆಗಳ ವಾಯುಯಾನ ಪೂರ್ಣಗೊಳಿಸಿದ ಜಿಇ ಏರೋಸ್ಪೇಸ್‌ ನ ಜಿಇಎನ್ಎಕ್ಸ್ಎಂಜಿನ್

ದಕ್ಷಿಣ ಏಷ್ಯಾದ ವಿಮಾನಯಾನ ಸಂಸ್ಥೆಗಳಲ್ಲಿ ಬಳಕೆ ಆರಂಭಗೊಂಡ ಬಳಿಕ ಯಶಸ್ವಿ

ಬೆಂಗಳೂರು: ದಕ್ಷಿಣ ಏಷ್ಯಾದ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿ ತನ್ನ ಜಿಇಎನ್ಎಕ್ಸ್ ಕಮರ್ಷಿಯಲ್ ಏವಿಯೇಷನ್ ಎಂಜಿನ್ ಉತ್ಪನ್ನಗಳ ಬಳಕೆ ಆರಂಭಗೊಂಡ ಬಳಿಕ ಈ ಎಂಜಿನ್ ಗಳು ಇದೀಗ ಎರಡು ಮಿಲಿಯನ್ ಗಂಟೆಗಳ ವಾಯುಯಾನ ಪೂರ್ಣಗೊಳಿಸಿದೆ ಎಂದು ಜಿಇ ಏರೋಸ್ಪೇಸ್ ಇಂದು ಘೋಷಿಸಿದೆ. 2012ರಲ್ಲಿ ದಕ್ಷಿಣ ಏಷ್ಯಾದಲ್ಲಿ ಮೊದಲ ಜಿಇಎನ್ಎಕ್ಸ್ ಎಂಜಿನ್ ಅನ್ನು ಒದಗಿಸಲಾಗಿತ್ತು. ಪ್ರಸ್ತುತ ಏರ್ ಇಂಡಿಯಾ, ವಿಸ್ತಾರಾ ಮತ್ತು ಬಿಮನ್ ಬಾಂಗ್ಲಾದೇಶ ವಿಮಾನಗಳಲ್ಲಿ 90ಜಿಇಎನ್ಎಕ್ಸ್ ಎಂಜಿನ್‌ಗಳು ಕಾರ್ಯ ನಿರ್ವಹಿಸುತ್ತಿವೆ.

ಇಂದು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ ಜಿಇ ಏರೋಸ್ಪೇಸ್‌ ನ ಕಮರ್ಷಿಯಲ್ ಪ್ರೋಗ್ರಾಮ್ ವಿಭಾಗದ ಗ್ರೂಪ್ ವೈಸ್ ಪ್ರೆಸಿಡೆಂಟ್ ಮಹೇಂದ್ರ ನಾಯರ್ ಅವರು , “ದಕ್ಷಿಣ ಏಷ್ಯಾದ ವಿಮಾನ ಯಾನ ಕ್ಷೇತ್ರದ ಬೆಳವಣಿಗೆಯಲ್ಲಿ ಜಿಇಎನ್ಎಕ್ಸ್ ಎಂಜಿನ್ ಪ್ರಮುಖ ಪಾತ್ರ ವಹಿಸಿದೆ. 2 ಮಿಲಿಯನ್ ಗಂಟೆಗಳ ವಿಮಾನಯಾನ ಪೂರ್ಣಗೊಳಿಸಿರುವ ಈ ಅಪೂರ್ವ ಸಾಧನೆ ಎಂಜಿನ್ ನ ಇಂಜಿನಿಯರಿಂಗ್ ಉತ್ಕೃಷ್ಟತೆ ಮತ್ತು ಅತ್ಯುನ್ನದ ತಂತ್ರಜ್ಞಾನ ಬಳಕೆಗೆ ಸಾಕ್ಷಿಯಾಗಿದೆ. ನಮ್ಮ ಅತ್ಯುತ್ತಮ ತಂತ್ರಜ್ಞಾನ ಮತ್ತು ಸೇವೆಗಳನ್ನು ಒದಗಿಸುವುದರ ಮೂಲಕ ನಮ್ಮ ಗ್ರಾಹಕರ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.

ಜಿಇ ಏರೋಸ್ಪೇಸ್ ನ ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕ್ರಮ್ ರೈ ಅವರು , “ಏರ್ ಇಂಡಿಯಾ ಸೇರಿದಂತೆ ದಕ್ಷಿಣ ಏಷ್ಯಾದ ವಿಮಾನ ಯಾನ ಸಂಸ್ಥೆಗಳ ಜೊತೆ ನಾವು ಹೊಂದಿರುವ ಸುದೀರ್ಘ ಸಂಬಂಧಗಳ ಬಗ್ಗೆ ನಮಗೆ ಹೆಮ್ಮೆ ಇದೆ. ವಿಶೇಷವಾಗಿ ಏರ್ ಇಂಡಿಯಾ 20 ಹೊಸ ದೊಡ್ಡ ಗಾತ್ರ ಏರ್‌ಕ್ರಾಫ್ಟ್‌ ಆರಂಭಿಸುವ ಯೋಜನೆ ಹಾಕಿಕೊಂಡಿದ್ದು, ಅದರಲ್ಲಿ 40 ಜಿಎನ್‌ಎಕ್ಸ್ ಎಂಜಿನ್‌ ಗಳು ಕಾರ್ಯ ನಿರ್ವಹಿಸುತ್ತವೆ” ಎಂದು ಹೇಳಿದರು.

ಈ ಕುರಿತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ನಿಪುನ್ ಅಗರ್ವಾಲ್ ಅವರು , “ನಾವು ದೊಡ್ಡ ದೇಹದ ಹೊಸ ವಿಮಾನ ಕಾರ್ಯಾಚರಣೆಗಳನ್ನು ಆರಂಭಿಸುತ್ತಿರುವ ಈ ಸಂದರ್ಭದಲ್ಲಿ ನಮಗೆ ಜಿಇ ಏರೋಸ್ಪೇಸ್ ವಿಶ್ವಾಸಾರ್ಹ ಪಾಲುದಾರರಾಗಿ ದೊರೆತಿದ್ದಾರೆ. ಅವರ ಜಿಇಎನ್ಎಕ್ಸ್ ಎಂಜಿನ್ ವಿಶ್ವಾಸಾರ್ಹತೆ, ದಕ್ಷತೆ ಮತ್ತು ಸುಸ್ಥಿರತೆ ವಿಚಾರದಲ್ಲಿ ಅತ್ಯುತ್ತಮ ಉತ್ಪನ್ನವಾಗಿದೆ. ನಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದಂತೆ ಆ ಕಾರ್ಯಾಚರಣೆಗಳನ್ನು ಸುಗಮವಾಗಿ ನಡೆಯುವಂತೆ ಮಾಡಲು ಜಿಇಎನ್ಎಕ್ಸ್ ಎಂಜಿನ್ ಸೂಕ್ತ ರೀತಿಯಲ್ಲಿ ಸಹಕರಿಸಲಿದ್ದು, ಈ ಪ್ರಯಾಣದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.

ವಿಶ್ವಾಸಾರ್ಹ ಮತ್ತು ಸುಸ್ಥಿರ ತಂತ್ರಜ್ಞಾನ
ವಿಶ್ವಾದ್ಯಂತದ ವಿಮಾನಯಾನ ಸಂಸ್ಥೆಗಳ ಆದ್ಯತೆಯ ಆಯ್ಕೆಯಾಗಿ ರೂಪುಗೊಂಡಿರುವ ಜಿಇಎನ್ಎಕ್ಸ್ ಎಂಜಿನ್ ಗಳು ಬೋಯಿಂಗ್‌ನ 787 ಡ್ರೀಮ್‌ಲೈನರ್ ಮತ್ತು 747-8 ನಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು, ಪ್ರೊಪಲ್ಷನ್ ತಂತ್ರಜ್ಞಾನದ ಉತ್ಕೃಷ್ಟತೆಯನ್ನು ತೋರಿಸಿಕೊಟ್ಟಿದೆ. ಎಂಜಿನ್‌ನ ಉತ್ತಮ ಕಾರ್ಯಕ್ಷಮತೆಯಿಂದ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ ಮತ್ತು ಕಡಿಮೆ ಇಂಗಾಲವನ್ನು ಹೊರಸೂಸುವಂತೆ ಮಾಡುತ್ತದೆ. ಇದು ಶೇ.15 ಹೆಚ್ಚು ಇಂಧನ-ಸಮರ್ಥವಾಗಿದೆ ಮತ್ತು ಅದರ ಪೂರ್ವವರ್ತಿಯಾದ ಸಿಎಫ್6 ಎಂಜಿನ್‌ ಗಿಂತ ಶೇ.15ರಷ್ಟು ಕಡಿಮೆ ಇಂಗಾಲವನ್ನು ಹೊರಸೂಸುತ್ತದೆ. ಆ ಮೂಲಕ ಜಾಗತಿಕ ವಾಯುಯಾನ ಉದ್ಯಮದ ಸುಸ್ಥಿರತೆಯ ಗುರಿ ಸಾಧನೆಗೆ ಈ ಎಂಜಿನ್ ಗಳು ಸೂಕ್ತವಾಗಿ ಹೊಂದಿಕೆಯಾಗುತ್ತವೆ.

ಎಂಜಿನ್‌ ನ ದಕ್ಷತೆ ಮತ್ತು ಸುಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸಲು ಜಿಇ ಏರೋಸ್ಪೇಸ್ 360 ಫೋಮ್ ವಾಶ್ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಈ ತಂತ್ರಜ್ಞಾನವು ಸಾಂಪ್ರದಾಯಿಕ ನೀರಿನಿಂದ ತೊಳೆಯುವ ವಿಧಾನಕ್ಕೆ ಅತ್ಯಾಧುನಿಕ ಪರ್ಯಾಯವಾಗಿದೆ. ಈ ಅತ್ಯಾಧುನಿಕ ಶುಚಿಗೊಳಿಸುವ ಪ್ರಕ್ರಿಯೆಯು ಕಸವನ್ನು ತೆಗೆದುಹಾಕುವ ಮೂಲಕ ಎಂಜಿನ್ ಅತ್ಯುತ್ತಮವಾಗಿ ಕಾರ್ಯಕ್ಷಮತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ನಿರ್ವಹಣೆ ಮಾಡಬೇಕಾದ ಸಮಯವನ್ನು ಕೊಂಚ ಜಾಸ್ತಿ ಮಾಡುತ್ತದೆ.

ಎಐ ಮೂಲಕ ಸೇವೆಯ ಗುಣಮಟ್ಟ ಸುಧಾರಣೆ
ಜಿಇ ಏರೋಸ್ಪೇಸ್ ಸಂಸ್ಥೆಯು ತನ್ನ ಜಿಇಎನ್ಎಕ್ಸ್ ವಾಣಿಜ್ಯ ಎಂಜಿನ್‌ ಗಳನ್ನು ನಿರಂತರವಾಗಿ ನಿಗಾ ವಹಿಸುತ್ತಲೇ ಇರುತ್ತದೆ. ಡಿಜಿಟಲ್ ಒಳನೋಟಗಳನ್ನು ಪಡೆಯುವ ಮೂಲಕ ಮುಂದೆ ತೆಗೆದುಕೊಳ್ಳಬೇಕಿರುವ ನಿರ್ವಹಣಾ ಕ್ರಮಗಳನ್ನು ಯೋಜಿಸುತ್ತದೆ. ಉತ್ತಮ ಗುಣಮಟ್ಟದ ಸೇವೆ ಒದಗಿಸಲು ಈ ಕ್ರಮಗಳನ್ನು ಕೈಗೊಳ್ಳುತ್ತದೆ. ಕಂಪನಿಯು ಈ ಕೆಲಸಗಳನ್ನು ಮತ್ತಷ್ಟು ಉತ್ತಮಗೊಳಿಸಲು, ಇನ್ನೂ ಹೆಚ್ಚಿನ ನಿಖರತೆಯಲ್ಲಿ ನಿಗಾ ವಹಿಸಲು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಶೀನ್ ಲರ್ನಿಂಗ್ (ಎಂಎಲ್) ಚಾಲಿತ ಮಾಡೆಲ್ ಗಳನ್ನು ಬಳಸುತ್ತದೆ.