ಬೆಂಗಳೂರು: ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ವಿಧಾನ ಪರಿಷತ್ ನಾಲ್ಕು ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯೂ ನಗರದ ಹಲಗೆವಡೇರಹಳ್ಳಿಯ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆ ಹಾಗೂ ಶಿರಾ ಕ್ಷೇತ್ರದ ಮತಗಳ ಎಣಿಕೆ ತುಮಕೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ.
ಬಹುತೇಕ ಮಧ್ಯಾಹ್ನದ ವೇಳೆಗೆ ಫಲಿತಾಂಶದ ಚಿತ್ರಣ ಸಿಗುವ ಸಾಧ್ಯತೆ ಇದೆ. ಉಪಚುನಾವಣೆಯ ಎರಡು ಕ್ಷೇತ್ರಗಳ ಪೈಕಿ ಒಟ್ಟು 31 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾದರೆ, ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ( ಬಿಜೆಪಿ), ಕುಸುಮಾ ( ಕಾಂಗ್ರೆಸ್) , ಕೃಷ್ಣಮೂರ್ತಿ( ಜೆಡಿಎಸ್) ಸೇರಿದಂತೆ ಒಟ್ಟು 16 ಮಂಧಿ ಅಭ್ಯರ್ಥಿಗಳು ಹಾಗೂ ಶಿರಾ ಕ್ಷೇತ್ರದಿಂದ ಡಾ.ರಾಜೇಶ್ ಗೌಡ( ಬಿಜೆಪಿ) ಟಿ.ಬಿ.ಜಯಚಂದ್ರ ( ಕಾಂಗ್ರೆಸ್) ಅಮ್ಮಾಜಮ್ಮ ( ಜೆಡಿಎಸ್) ಸೇರಿ ಒಟ್ಟು 15 ಅಭ್ಯರ್ಥಿಗಳು ಸ್ಫರ್ಧಿಸಿದ್ದಾರೆ.
ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‍ನ ಆರ್.ಚೌಡಾರೆಡ್ಡಿ ತೂಪಲ್ಲಿ, ಕಾಂಗ್ರೆಸ್‍ನ ರಮೇಶ್ ಬಾಬು, ಬಿಜೆಪಿಯ ಚಿದಾನಂದ ಗೌಡ ಕಣದಲ್ಲಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಪುಟ್ಟಣ್ಣ, ಜೆಡಿಎಸ್‍ನಿಂದ ಎ.ಪಿ.ರಂಗನಾಥ್, ಕಾಂಗ್ರೆಸ್‍ನಿಂದ ಪ್ರವೀಣ್ ಪೀಟರ್ ಸ್ಪರ್ಧಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಎದುರಿಸುತ್ತಿರುವ ಉಪಸಮರ ಇದಾಗಿದ್ದು, ನಾಳಿನ ಫಲಿತಾಂಶದ ಮೇಲೆ ಅವರ ರಾಜಕೀಯ ಭವಿಷ್ಯವೂ ನಿಂತಿದೆ.