Friday, 27th September 2024

Dr CN Manjunath: ಮೈಸೂರು ರಾಜಮನೆತನಕ್ಕೆ ವಿಶೇಷ ಸ್ಥಾನಮಾನ; ಸಂಸದ ಡಾ. ಮಂಜುನಾಥ್ ಹೇಳಿದ್ದೇನು?

dr cn manjunath

ಮೈಸೂರು: ರಾಜ್ಯ ಸರ್ಕಾರವು ಮೈಸೂರು ರಾಜಮನೆತನಕ್ಕೆ (Mysore Dynasty) ವಿಶೇಷ ಸ್ಥಾನಮಾನ (Royal Status) ನೀಡಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ (Dr CN Manjunath) ಆಗ್ರಹಿಸಿದ್ದಾರೆ. ಮೈಸೂರಿನ ಜೆ.ಕೆ. ಮೈದಾನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ (Krishnaraja Wadiyar IV) ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇದನ್ನು ಹೇಳಿದರು.

ಸರ್ಕಾರದ ಆಡಳಿತ ಅದರ ಪಾಡಿಗೆ ನಡೆಯಲಿ, ಆದರೆ, ರಾಜಮನೆತಕ್ಕೆ ಗೌರವ ಸಲ್ಲಿಸುವ ವ್ಯವಸ್ಥೆಯೂ ಆಗಬೇಕು. ಇಂಗ್ಲೆಂಡ್ ದೇಶದಲ್ಲಿ‌ ಪ್ರಜಾಪ್ರಭುತ್ವ ಇದ್ದರೂ ರಾಜಮನೆತನಕ್ಕೆ ಉನ್ನತ ಸ್ಥಾನ ನೀಡಲಾಗಿದೆ. ಡೆನ್ಮಾರ್ಕ್, ಸ್ವೀಡನ್ ದೇಶದಲ್ಲೂ ರಾಜರ ವಿಶೇಷ ಸ್ಥಾನಮಾನ ಮುಂದುವರಿಸಲಾಗಿದೆ. ಆದರೆ, ನಮ್ಮ ರಾಜ್ಯ ಹಾಗೂ ದೇಶದಲ್ಲಿ ಅವರನ್ನು ಗೌರವಿಸುವ ವಿಶಾಲ ಹೃದಯ ಇಲ್ಲ ಎಂದು ಮಂಜುನಾಥ್‌ ನುಡಿದರು.

ಪ್ರಸ್ತುತ ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿಯ ಕೇವಲ ಶೇ 1.9ರಷ್ಟು ವೆಚ್ಚ ಮಾಡಲಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಶೇ. 5ರಿಂದ ಶೇ. 6ರಷ್ಟು ವೆಚ್ಚ ಮಾಡಲಾಗುತ್ತಿತ್ತು. ಶಿಕ್ಷಣ, ಆರೋಗ್ಯ ಮತ್ತು ಇತರ ಕ್ಷೇತ್ರಗಳಿಗೆ ಅನೇಕ ಕೊಡುಗೆ ನೀಡಿದ ಅರಸು ಮನೆತನಕ್ಕೆ ನಮ್ಮ ರಾಜ್ಯದಲ್ಲಾದರೂ ವಿಶೇಷ ಸ್ಥಾನಮಾನ ದೊರೆಯಲಿ ಎಂದು ಅವರು ಹೇಳಿದರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ಹತ್ತು ವರ್ಷದ ಹಿಂದೆ ನಮ್ಮ ಕುಟುಂಬ ಕಷ್ಟದ ಸಮಯದಲ್ಲಿದ್ದಾಗ, ರಾಜ್ಯದ ಜನತೆ ತೋರಿದ ಪ್ರೀತಿ ಧೈರ್ಯ ತುಂಬಿತು. ಸಂಸದ ಮಂಜುನಾಥ್ ಅವರು ವಿಶೇಷ ಸ್ಥಾನಮಾನ ನೀಡಲು ಒತ್ತಾಯಿಸಿದ್ದು, ನಾಡಿನ ಜನತೆಯ ರಾಜಮನೆತನದ ಬಗ್ಗೆ ಹೊಂದಿರುವ ಅಭಿಮಾನವನ್ನು ತೋರುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Pratap Simha: ಪ್ರಚೋದನಕಾರಿ ಭಾಷಣ, ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ದೂರು ದಾಖಲು