ತುಮಕೂರು: ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿಂದ ಬಹುವೈವಿದ್ಯ ಬೆಳೆ ಪದ್ದತಿ ಹೊಂದಿರುವ ಭಾರತ ದಂತಹ ರಾಷ್ಟ್ರದ ಮೇಲೆ ದುಷ್ಪರಿಣಾಮ ಬೀರಲಿದ್ದು, ಇದನ್ನು ವಿರೋಧಿಸಿ,ಈ ನೀತಿ ನಿರೂಪಣೆಯಿಂದ ಒಕ್ಕೂಟ ಸರಕಾರ ಹಿಂದೆ ಸರಿಯುವಂತೆ ಒತ್ತಾಯಿಸಿ ಗಾಂಧಿ ಸಹಜ ಬೇಸಾಯ ಆಶ್ರಮದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ದೊಡ್ಡ ಹೊಸೂರು ಸತ್ಯಾಗ್ರಹಕ್ಕೆ ಜೆಡಿಯು(JDU) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್.ರವಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮನುಷ್ಯರ ದೈಹಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿಂದ ಹಿಂದೆ ಸರಿಯಬೇಕು ಹಾಗೂ ರಾಷ್ಟ್ರೀಯ ನೀತಿ ರೂಪಿಸುವ ವೇಳೆ ಸರ್ವಪಕ್ಷಗಳು ರೈತರು, ಕೃಷಿ ತಜ್ಞರು,ರೈತ ಪ್ರತಿನಿಧಿಗಳು ಹಾಗೂ ದೇಶದಲ್ಲಿನ ಎಲ್ಲಾ ರಾಜ್ಯಗಳ ಸರಕಾರಗಳೊಂದಿಗೆ ಸಮಾಲೋಚಿಸಿ ನೀತಿ ರೂಪಿಸುವಂತೆ ಒತ್ತಾಯಿಸಿ ಇದೇ ತಿಂಗಳು 29 ರಿಂದ ನವೆಂಬರ್ 2 ರವರೆಗೆ 4 ದಿನಗಳ ಕಾಲ ತುಮಕೂರು ತಾಲ್ಲೂಕು ಗೂಳೂರು ಸಮೀಪದಲ್ಲಿರುವ ದೊಡ್ಡ ಹೊಸೂರಿನಲ್ಲಿ “ದೊಡ್ಡ ಹೊಸೂರು ಸತ್ಯಾಗ್ರಹ”ವನ್ನು ಹಮ್ಮಿಕೊಳ್ಳಲಾಗಿದೆ. ಈ ಕುಲಾಂತರಿ ಬೀಜ ವಿರುದ್ಧ ಹೋರಾಟ ಹಮ್ಮಿಕೊಂಡಿರುವ ರೈತಪರ ಸಂಘಟನೆಗಳಿಗೆ ಜೆಡಿ(ಯು) ಕರ್ನಾಟಕ ಸಹ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ತುಮಕೂರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ಧಲಿಂಗ ಸ್ವಾಮಿಗಳು ಚಾಲನೆ ನೀಡಲಿದ್ದು, ನಮ್ಮ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯರಾದ ಅನಿಲ್ ಹೆಗಡೆ ಮತ್ತು ರಾಜ್ಯಾಧ್ಯಕ್ಷರಾದ ಮಹಿಮಾ ಜ ಪಟೇಲ್, ರಾಜ್ಯ ಪದಾಧಿಕಾರಿಗಳು ಈ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ.
ತುಮಕೂರು ಜಿಲ್ಲೆಯ ಎಲ್ಲಾ ಜೆಡಿ(ಯು) ಮುಖಂಡರು, ಪದಾಧಿಕಾರಿಗಳು ಈ ಸತ್ಯಾಗ್ರಹದಲ್ಲಿ ಭಾಗವಹಿಸಲು ರಾಜ್ಯ ಪ್ರಧಾನಕಾರ್ಯದರ್ಶಿ ಕೆ.ಜಿ.ಎಲ್.ರವಿ ಮನವಿ ಮಾಡಿದ್ದಾರೆ.