-ಅರವಿಂದ ಸಿಗದಾಳ್, ಮೇಲುಕೊಪ್ಪ
ಕಸ್ತೂರಿ ರಂಗನ್ ವರದಿ ಜಾರಿಯನ್ನು ರಾಜ್ಯ ಸರ್ಕಾರವು (State Government) ತಿರಸ್ಕರಿಸಿದೆ. ಹಾಗಾಗಿ ವರದಿ ಜಾರಿಯಾಗುವುದಿಲ್ಲ. ಆದರೆ ವರದಿಯ ಬಗ್ಗೆ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ಏಕೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯ (Kasturirangan Report) ಜಾರಿಗೆ ಆರನೇ ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳಿದ್ದರೆ ಸೆಪ್ಟೆಂಬರ್ 30ರ ಒಳಗೆ ಸಲ್ಲಿಸಲು ಕೇಂದ್ರ ಸರ್ಕಾರ (Central Government) ಅವಕಾಶ ಮಾಡಿ ಕೊಟ್ಟಿತ್ತು. 60 ದಿನಗಳ ಆ ಕಾಲಾವಕಾಶದಲ್ಲಿ 57 ದಿನಗಳು ಮುಗಿದಿದ್ದು, ಇನ್ನಿರುವುದು ಕೇವಲ ಮೂರು ದಿನಗಳು ಮಾತ್ರ.
ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದರೂ, ಕಸ್ತೂರಿ ರಂಗನ್ ವರದಿಗೆ ಸಾರ್ವಜನಿಕ ನಾಗರಿಕರು ಆಕ್ಷೇಪಣೆ ಸಲ್ಲಿಸುವುದು ಅಗತ್ಯ ಮತ್ತು ಅನಿವಾರ್ಯ. ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರ ತಿರಸ್ಕಾರ ಮಾಡಿದ್ದರೂ, ಕರ್ನಾಟಕದಲ್ಲೂ ಸೇರಿದಂತೆ ಆರೂ ರಾಜ್ಯಗಳಲ್ಲಿ ವರದಿ ಜಾರಿಯಾಗುವ ಸಾಧ್ಯತೆ ಇದ್ದೇ ಇದೆ.
ಈ ಸುದ್ದಿಯನ್ನೂ ಓದಿ | United Nations : ವಿಶ್ವ ಸಂಸ್ಥೆಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಫ್ರಾನ್ಸ್ ಬಳಿಕ ಇದೀಗ ಬ್ರಿಟನ್ ಬೆಂಬಲ
ವರದಿ ಜಾರಿಯ ಸಂಫೂರ್ಣ ನಿರ್ಣಯ ಕೇಂದ್ರ ಸರ್ಕಾರದ್ದಾಗಿದೆಯೇ ಹೊರತು ರಾಜ್ಯ ಸರ್ಕಾರದ್ದಲ್ಲ. ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ಪ್ರಮಾಣ ಪತ್ರ (ಅಫಿಡವಿಟ್) ಸಲ್ಲಿಸಿಯಾಗಿದೆ. ಕರ್ನಾಟಕ ಸರ್ಕಾರದಂತೆ ಉಳಿದ ಐದು ರಾಜ್ಯಗಳು ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿದರೂ, ವರದಿ ಜಾರಿ ಆಗುವುದು ನಿಶ್ಚಿತ.
ರಾಜ್ಯ ಸರ್ಕಾರದ ವಿರೋಧ ಮತ್ತು ಬಹುಮುಖ್ಯವಾಗಿ ಪಶ್ಚಿಮಘಟ್ಟದ ನೆಲವಾಸಿಗಳ (ನಮ್ಮ) ಆಕ್ಷೇಪಣೆಗಳಿಂದ, ಕಾಡಂಚಿನ ನಮ್ಮ ಕೃಷಿ ಭೂಮಿ, ವಾಸದ ಮನೆ, ಗ್ರಾಮಗಳನ್ನು ಅತಿ ಸೂಕ್ಷ್ಮ ಪ್ರದೇಶದಿಂದ (ESA) ಹಾಗೂ ಅದರ ಬಫರ್ ಜೋನ್‌ನಿಂದ ಹೊರಗಿಡಬಹುದು. ಮತ್ತು ಈಗ ವರದಿಯಲ್ಲಿರುವ ಕಠಿಣ ನಿಯಮಾವಳಿಗಳನ್ನು ಸಡಿಲಿಸಬಹುದು. ಹಾಗಾಗಿ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸುವಂತಿಲ್ಲ ಮತ್ತು ಆಕ್ಷೇಪಣೆ ಸಲ್ಲಿಸಲು ಮೂರು ದಿನಗಳು ಬಾಕಿ ಇರುವುದರಿಂದ ತ್ವರಿತವಾಗಿ ಪಶ್ಚಿಮ ಘಟ್ಟದ ಎಲ್ಲಾ ನೆಲವಾಸಿ ನಾಗರಿಕರು ಕೂಡಲೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವುದು ಅನಿವಾರ್ಯವಾಗಿದೆ. ಹಾಗಾಗಿ, ಎಲ್ಲ ಪಶ್ಚಿಮ ಘಟ್ಟದ ನಾಗರಿಕರು ಕೂಡಲೆ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣಾ ಅರ್ಜಿಯನ್ನು ತಕ್ಷಣವೆ ಸಲ್ಲಿಸುವುದು ಸೂಕ್ತ.
ಈ ಸುದ್ದಿಯನ್ನೂ ಓದಿ | Kumki elephants: ಕಾಡಾನೆ ಸೆರೆ ಕಾರ್ಯಾಚರಣೆಗೆ ಆಂಧ್ರಕ್ಕೆ ನಾಲ್ಕು ಕುಮ್ಕಿ ಆನೆ: ಸಚಿವ ಈಶ್ವರ್ ಖಂಡ್ರೆ
ಆಕ್ಷೇಪಣಾ ಅರ್ಜಿಗಳನ್ನು ಈ ಕೆಳಕಂಡ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬೇಕು
To
The Secretary
The Ministry of Environment, Forest and Climate Change
Indira Paryavaran Bhavan
Jor bagh Road, Ali Ganj
New Delhi-110003
ಅಥವಾ ನೇರ e-mail ಮೂಲಕ esz-mef@nic.in ಈ ವಿಳಾಸಕ್ಕೆ ಇಮೇಲ್ ಮಾಡಬಹುದು. ನೆನಪಿರಲಿ, ಆಕ್ಷೇಪಣೆ ಸಲ್ಲಿಸಲು ಇರುವುದು ಕೇವಲ ಮೂರು ದಿನಗಳು ಮಾತ್ರ.