Friday, 27th September 2024

DK Shivakumar: ದ್ವೇಷದ ರಾಜಕಾರಣಕ್ಕೆ ಕೊನೆಹಾಡಲು ಸಿಬಿಐ ಮುಕ್ತ ತನಿಖೆ ಅಧಿಕಾರ ಹಿಂದಕ್ಕೆ: ಡಿ.ಕೆ. ಶಿವಕುಮಾರ್

DK Shivakumar

ಬೆಂಗಳೂರು: ದ್ವೇಷದ ರಾಜಕಾರಣಕ್ಕೆ ದಾರಿ ಆಗಬಾರದು ಎನ್ನುವ ಕಾರಣಕ್ಕೆ ಸಿಬಿಐಗೆ (CBI) ನೀಡಿದ್ದ ಮುಕ್ತ ಅನುಮತಿ ಅಧಿಕಾರವನ್ನು ಹಿಂದಕ್ಕೆ ತೆಗದುಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಸಿಬಿಐ ಮುಕ್ತ ತನಿಖೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿರುವ ಬಗ್ಗೆ ಬಿಜೆಪಿ ಟೀಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಗಂಭೀರ ಪ್ರಕರಣಗಳು ಎದುರಾದಾಗ ನಮ್ಮ ಅಧಿಕಾರಿಗಳು ತನಿಖೆಗೆ ಸೂಕ್ತರಲ್ಲ ಎನ್ನುವ ಅಭಿಪ್ರಾಯ ಬಂದರೆ, ಆ ವೇಳೆ ಸಿಬಿಐಗೆ ನೀಡುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಈ ವೇಳೆ ತಿಳಿಸಿದರು.

ಕಾಂಗ್ರೆಸ್ ಬ್ಯೂರೋ ಆಫ್ ಏಜೆನ್ಸಿ ಎಂದು ಕರೆದಿದ್ದರು

ಸಿಬಿಐ ಬಗ್ಗೆ ಜನತಾದಳದ ದೇವೇಗೌಡರು, ಕುಮಾರಸ್ವಾಮಿ ಏನು ಮಾತನಾಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿಯವರು ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೋ ಆಫ್ ಏಜೆನ್ಸಿ ಎಂದು ಕರೆದಿದ್ದರು. ಸಿಬಿಐಗೆ ಯಾವ, ಯಾವ ಪ್ರಕರಣಗಳನ್ನು ನೀಡಲಾಗಿತ್ತು. ಅವುಗಳು ಏನಾಗಿವೆ, ಐಎಂಎ ಪ್ರಕರಣ ಏನಾಗಿದೆ ಎಂಬುದರ ಬಗ್ಗೆ ನಾನು ಚರ್ಚಿಸುವುದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Nuclear Attack Submarine : ಸಮುದ್ರದಲ್ಲಿ ಮುಳುಗಿದ ಪರಮಾಣು ದಾಳಿ ಜಲಾಂತರ್ಗಾಮಿ; ಚೀನಾಗೆ ಭಾರೀ ಹಿನ್ನಡೆ

ಸಿದ್ದರಾಮಯ್ಯ ಅವರ ರಕ್ಷಣೆಗೆ ಹಾಗೂ ಸಿಬಿಐ ತನಿಖೆ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ ವಿರೋಧ ಪಕ್ಷದವರು ಮಾತನಾಡಿಕೊಳ್ಳಲಿ, ಇದರ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡೋಣ ಎಂದು ಡಿಸಿಎಂ ತಿಳಿಸಿದರು.

ನನ್ನ ಕಚೇರಿಗೆ ಡಿನೋಟಿಫಿಕೇಷನ್ ಕಡತ ಬಂದಿತ್ತು

ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ನಿರ್ಣಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅನೇಕ ವಿಚಾರಗಳನ್ನು ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್ ಗಮನಕ್ಕೆ ತರದೇ ತೀರ್ಮಾನ ಮಾಡಲು ಆಗುತ್ತದೆಯೇ? ಆದ ಕಾರಣ ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ತೀರ್ಮಾನ ತಗೆದುಕೊಂಡಿದ್ದೇವೆ ಎಂದರು.

ನನಗೂ ನೀತಿ, ನಿಯಮಗಳ ಬಗ್ಗೆ ಸ್ವಲ್ಪ ತಿಳುವಳಿಕೆಯಿದೆ. ನಾನು ವಿದ್ಯಾವಂತ, ಬುದ್ದಿವಂತ ಅಲ್ಲದಿದ್ದರೂ ಪ್ರಜ್ಞಾವಂತಿಕೆ ಹೊಂದಿದ್ದೇನೆ. ಪ್ರತಿಯೊಂದಕ್ಕೂ ನಿಯಮವಿರುತ್ತದೆ. ರಾಜ್ಯಪಾಲರ ಕಚೇರಿಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಉತ್ತರ ಹೋಗಬೇಕು.

ನನ್ನ ಕಚೇರಿಗೆ ಕೆಲವು ದಿನಗಳ ಹಿಂದೆ ಡಿನೋಟಿಫಿಕೇಷನ್ ಅಥವಾ ರೀಡೂ ಸಂಬಂಧಪಟ್ಟ ಕಡತ ಬಂದಿತ್ತು. ನನ್ನ ಕಾರ್ಯದರ್ಶಿ ನನಗೆ ಕಳುಹಿಸಿದ್ದರು. ಇದಕ್ಕೆ ನಾನು, “ಬೇರೆಯವರಿಗೆ ಉತ್ತರ ಕೊಡಲು ಆಗುವುದಿಲ್ಲ. ಕ್ಯಾಬಿನೆಟ್‌ನಲ್ಲಿ ಈ ಹಿಂದೆ ತೀರ್ಮಾನವಾದಂತೆ, ಈ ಕುರಿತು ಸಂಪುಟ ಉಪ ಸಮಿತಿ ರಚನೆಯಾಗಿದೆ, ಅಲ್ಲಿಗೆ ಕಳುಹಿಸಿ ಎಂದೆ”ಎಂದು ತಿಳಿಸಿದರು.

ರಾಜಭವನದ ಆಂತರಿಕ ವಿಚಾರ ನನಗೆ ಗೊತ್ತಿಲ್ಲ

ರಾಜಭವನದಿಂದ ಮಾಹಿತಿ ಸೋರಿಕೆ ಬಗ್ಗೆ ಬಿಜೆಪಿ ಆರೋಪ ಮಾಡುತ್ತಿದೆ ಎಂದಾಗ, ಇದು ರಾಜಭವನದ ಆಂತರಿಕ ವಿಚಾರ. ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಲೋಕಾಯುಕ್ತ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವ ಬಗ್ಗೆಯೂ ಮಾಹಿತಿಯಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Traffic restrictions: ಬೆಂಗಳೂರಿನ ಈ ಮಾರ್ಗದಲ್ಲಿ ಇಂದಿನಿಂದ ಒಂದು ತಿಂಗಳವರೆಗೆ ವಾಹನ ಸಂಚಾರ ನಿರ್ಬಂಧ

ಸಿಎಂ ವಿರುದ್ಧ ಎಫ್‌ಐಆರ್ ದಾಖಲಾದರೆ ಪಕ್ಷಕ್ಕೆ ಮುಜುಗರವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಮುಜುಗರವೂ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.