ಬೆಂಗಳೂರು: ಬ್ರಾಹ್ಮಣ ಮುಂದುವರಿದ ಸಮಾಜ ಎಂಬ ಕಾರಣಕ್ಕೆ ಸಮುದಾಯದಲ್ಲಿರುವ ಬಡವರಿಗೆ ಅನ್ಯಾಯವಾಗಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದರು. ಬೆಂಗಳೂರಿನಲ್ಲಿ (Bengaluru News) ಇಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಆಯೋಜಿಸಿದ್ದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ರಾಹ್ಮಣ ಸಮುದಾಯದ ಮಕ್ಕಳು ಪಬ್ಲಿಕ್ ಸರ್ವೀಸ್ ಹುದ್ದೆಗಳತ್ತ ಹೆಚ್ಚಿನ ಗಮನ ಹರಿಸುವ ಅಗತ್ಯತೆ ಇದೆ. ನಮಗೆ ಸರ್ಕಾರಿ ಕೆಲಸಗಳು ಸಿಗಲ್ಲ ಎಂದು ಬಹುತೇಕರು ಇಂದು ಡಾಕ್ಟರ್, ಎಂಜಿನಿಯರ್ ಆಗುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಆದರೆ ಕೆ.ಎ.ಎಸ್., ಐಎಎಸ್ ಹುದ್ಧೆಗಳನ್ನು ಅಲಂಕರಿಸಲು ಪ್ರಯತ್ನಿಸಬೇಕು. ಇದರಿಂದ ಸಾರ್ವಜನಿಕ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರ ಜತೆಗೆ ಸಮಾಜದ ಬಡವರಿಗೂ ನೀವು ಸಹಾಯ ಮಾಡಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬ್ರಾಹ್ಮಣರು ನಿಜವಾದ ಜಾತ್ಯತೀತರು
ಈ ಹಿಂದೆ ಬ್ರಾಹ್ಮಣ ಸಮುದಾಯದವರು ಎಲ್ಲ ಸಿದ್ಧಾಂತಗಳ ರಂಗಗಳಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದವರು. ಹಾಗೆ ನೋಡಿದರೇ ಬ್ರಾಹ್ಮಣರು ನಿಜವಾದ ಜಾತ್ಯತೀತರು. ಬ್ರಾಹ್ಮಣ ಸಮುದಾಯದ ಶಾಸಕರು ಗೆದ್ದು ಬರುವ ಕ್ಷೇತ್ರಗಳಲ್ಲಿ ಸಮುದಾಯದ ಮತಗಳು ತೀರಾ ಕಡಿಮೆ. ಇತರ ಸಮುದಾಯದ ಜನರ ವಿಶ್ವಾಸ ಗಳಿಸಿ ನಾವು ಗೆದ್ದು ಬರ್ತಿದ್ದೇವೆ. ಎಲ್ಲ ಸಮುದಾಯ, ಧರ್ಮದವರನ್ನು ನಾವು ಸಮಭಾವದಿಂದ ನೋಡುತ್ತೆವೆ ಎಂದರು.
ಸರ್ಕಾರದಿಂದ ಸಿಗುವ ಸೌಲಭ್ಯಗಳು ಬ್ರಾಹ್ಮಣ ಸಮುದಾಯದ ಬಡವರಿಗೂ ತಲುಪುವಂತಾಗವೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಮಂಡಳಿಗೆ ನೀಡುತ್ತಿರುವ 10 ಕೋಟಿ ಅನುದಾನ ಸಾಲದು. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಬ್ರಾಹ್ಮಣ ಬಡ ವರ್ಗದವರಿಗೆ ಸರ್ಕಾರಗಳು ಸೌಲಭ್ಯಗಳನ್ನು ಕಲ್ಪಿಸಲಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಬ್ರಾಹ್ಮಣ ಸಮುದಾಯದಲ್ಲಿರುವ ಬಡವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗಬೇಕು ಎಂದರು. ಬ್ರಾಹ್ಮಣ ಸಮುದಾಯ ಮುಂದುವರಿದ ಸಮಾಜ ಇರಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅನೇಕರು ಬಡವರಿದ್ದಾರೆ. ಅವರಿಗೆ ಸರ್ಕಾರಗಳು ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚು ಶಕ್ತಿಯನ್ನು ಸರ್ಕಾರ ತುಂಬಬೇಕು. ಮಂಡಳಿಯ ಅಧ್ಯಕ್ಷರಾಗಿ ಜಯಸಿಂಹ ಅವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: DK Shivakumar: ದ್ವೇಷದ ರಾಜಕಾರಣಕ್ಕೆ ಕೊನೆಹಾಡಲು ಸಿಬಿಐ ಮುಕ್ತ ತನಿಖೆ ಅಧಿಕಾರ ಹಿಂದಕ್ಕೆ: ಡಿ.ಕೆ. ಶಿವಕುಮಾರ್
ವಿಶ್ವಾಮಿತ್ರ ಹೆಸರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹೆಚ್ಚು ಅಂಕ ಪಡೆದ 127 ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೊದಲ ಬಹುಮಾನವಾಗಿ 15 ಸಾವಿರ ಹಾಗೂ ದ್ವಿತೀತಿಯ ಬಹುಮಾನ 10 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಯಿತು.