Saturday, 28th September 2024

Vishweshwar Bhat Column: ಅಂಕಣಕಾರರ ತಳಮಳ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಈ ವಾರ ಏನು ಬರೆಯುವುದು? ಇದು ಅಂಕಣಕಾರರ ದೊಡ್ಡ ಸಮಸ್ಯೆ. ಎಲ್ಲ ವಾರವೂ ವಿಷಯಗಳು ಸಿಗುವುದಿಲ್ಲ. ಸಿಕ್ಕ ವಿಷಯಗಳ ಬಗೆಗೆಲ್ಲ ಬರೆಯಲಾಗುವುದಿಲ್ಲ, ಬರೆಯಲೂಬಾರದು. ಪ್ರತಿಯೊಬ್ಬ ಅಂಕಣಕಾರ ತನ್ನ ಬರಹಕ್ಕೆ ಒಂದು ಹಸನಾದ ಪಿಚ್ ಸಿದ್ಧಪಡಿಸಿಕೊಂಡಿರುತ್ತಾನೆ.

ಅದಕ್ಕೆ ಮನಸ್ಸು ಮತ್ತು ವಿಷಯ ಹದವಾಗಿರಬೇಕು. ಬರೆಯುವ ವಿಷಯದ ಬಗ್ಗೆ ಸ್ಟ್ರಾಂಗ್ ಪಾಯಿಂಟ್ಸ್ ಇರಬೇಕು. ಇಲ್ಲದಿದ್ದರೆ ಬರಹ ಘಟ್ಟ ಹತ್ತುವುದಿಲ್ಲ. ಶಿರಾಡಿ ಘಾಟಿನಲ್ಲಿ ಏದುಸಿರು ಬಿಡುತ್ತಾ ಏರುವ ಲಾರಿಗಳಂತಾಗುತ್ತವೆ. ಓದುಗನಿಗೆ ‘ಇಂದು ಅಂಕಣಕಾರ ಏಕೋ ಸಿದ್ಧನಾಗಿಲ್ಲ, ಏನೋ ರಾಂಗ್ ಹೊಡೆಯುತ್ತಿದ್ದೇನಲ್ಲ’ ಎಂಬುದು ಮೂರು ಪ್ಯಾರ ಓದುತ್ತಿದ್ದಂತೆ ಗೊತ್ತಾಗುತ್ತದೆ. ಮೊದಲ ಓವರಿನಲ್ಲಿ ಮೂರು ವೈಡ್ ಬಾಲ್ ಎಸೆದರೆ ಬೌಲರನ ಮನಸ್ಥಿತಿಯಂತೆ, ಅಂಕಣಕಾರನೂ ಪೇಚಾಡುವುದು ಅನುಭವಕ್ಕೆ ಬರುತ್ತದೆ. ಹಾಗಂತ ಅದೇನು ಪ್ರಮಾದವಲ್ಲ.
ಮಾಲ್ಕಮ್ ಮಾರ್ಷಲ್‌ನಂಥ ಅದ್ಭುತ ಬೌಲರುಗಳು ಸಹ ಓವರಿನಲ್ಲಿ ಐದು ವೈಡ್ ಬಾಲ್ ಎಸೆದಿದ್ದಾರೆ.

ಅದು ಅವನ ಅಂದಿನ ಮನಸ್ಥಿತಿ ಅಷ್ಟೇ. ಅಂಕಣಕಾರನೂ ಒಮ್ಮೊಮ್ಮೆ ಇಂಥದೇ ವೈಡ್ ಬಾಲ್ ಎಸೆಯುತ್ತಾನೆ. ಅಂಪೈರುಗಳಾದ ಓದುಗರು ತಟ್ಟನೆ ‘ವೈಡ್ ಬಾಲ’ ಎಂದು ನಿರ್ಧರಿಸಿಬಿಡುತ್ತಾರೆ. ಅಂಕಣ ಬರಹ ಏಕಾಏಕಿ ಹುಟ್ಟು ವಂಥದ್ದಲ್ಲ. ವಿಷಯ ಆಗಾಗ ಅಂಕಣಕಾರನ ಎದೆಯೊಳಗೆ ತುರಿಸುತ್ತಿರಬೇಕು. ಹಲವಾರು ದಿನಗಳಿಂದ ಕಾಡಬೇಕು. ಆ ವಿಷಯದ ಬಗ್ಗೆ ಮತ್ತಷ್ಟು ಅಧ್ಯಯನ ಮಾಡುವಂತೆ ಪ್ರೇರೇಪಿಸಬೇಕು. ಕೆಲವು ಆಪ್ತರ ಜತೆ, ಪರಿಣತರ ಜತೆ ಚರ್ಚೆಗೆ ಕರೆದುಕೊಂಡು ಹೋಗಬೇಕು. ಆಗಾಗ ತೊಟ್ಟಿಕ್ಕುತ್ತಾ ತುಂಬುವ ಕೊಡದಂತೆ ವಿಷಯಗಳೂ ಹನಿಹನಿ ಗರೆದು ತುಂಬುತ್ತಿರಬೇಕು. ಅದಿಲ್ಲದೆ ಏಕಾಏಕಿ, ಸಂತೆಗೆ ಮೂರು ಮೊಳ ನೇಯ್ದರೆ, ಹುಡುಗಾಟಿಕೆ ಎನಿಸಿ‌ ಕೊಳ್ಳುತ್ತದೆ. ಅಷ್ಟಕ್ಕೂ ಪತ್ರಿಕೆಯಲ್ಲಿ ಅಂಕಣಕಾರನಿಗೆ, ಸಂಪಾದಕನ ನಂತರ, ಅಭಿಪ್ರಾಯ ರೂಪಿಸುವ ಮಹತ್ವದ ಹೊಣೆಗಾರಿಕೆಯಿರುತ್ತದೆ.

ಪತ್ರಿಕೆಯೊಂದು ಬರಹಗಾರನಿಗೆ ಕೊಡಬಹುದಾದ ದೊಡ್ಡ ಹುದ್ದೆ ಅಥವಾ ಗೌರವವೆಂದರೆ ಅಂಕಣಕಾರನದು. ಗಾಗಿ ಈ ಜವಾಬ್ದಾರಿಯಿಂದಲೇ ವಾರವಾರವೂ ಬರೆಯಲು ಕುಳಿತುಕೊಳ್ಳಬೇಕು. ಒಂದು ಬರಹ ಸೋತರೆ, ಅಷ್ಟರ ಮಟ್ಟಿಗೆ ಓದುಗರಿಗೆ ನಿರಾಸೆಯಾಗುತ್ತದೆ. ವಿರಾಟ್ ಕೊಹ್ಲಿ ಎಲ್ಲ ಪಂದ್ಯಗಳಲ್ಲಿ ಸೆಂಚುರಿ ಹೊಡೆಯದಿರ ಬಹುದು, ಅನೇಕ ಸಲ ಜೀರೋಕ್ಕೆ ಔಟ್ ಆಗಿರಬಹುದು. ಆದರೆ ಪ್ರೇಕ್ಷಕ ಮಾತ್ರ ಪ್ರತಿ ಸಲವೂ ಆತ ಸೆಂಚುರಿ ಹೊಡೆಯಲಿ ಎಂದೇ ನಿರೀಕ್ಷಿಸುತ್ತಾನೆ. ಈ ಸಂಗತಿ ಅಂಕಣಕಾರನಿಗೆ ಹೇಳಿ ಮಾಡಿಸಿದಂತಿದೆ. ಹಾ.ಮಾ.ನಾಯಕರು ಅಂಕಣಕಾರರ ತಳಮಳ ಎಂಬ ಲೇಖನದಲ್ಲಿ ತಾವು ‘ಪ್ರಜಾವಾಣಿ’ ಅಂಕಣಕಾರರಾಗಿ ಅನುಭವಿಸಿದ ಬರೆಯುವ ಸಂಕಷ್ಟಗಳ ಬಗ್ಗೆ ಬರೆದಿzರೆ. ಅವರು ‘ಸಂಪ್ರತಿ’ ಎಂಬ ಅಂಕಣ ಬರೆಯುತ್ತಿದ್ದರು.

ಅದು ಆ ದಿನಗಳಲ್ಲಿ ಜನಪ್ರಿಯವಾಗಿತ್ತು. ಕೆಲವೊಮ್ಮೆ ಡೆಡ್ ಲೈನ್ ಸಮೀಪಿಸಿದರೂ ಯಾವ ವಿಷಯದ ಬಗ್ಗೆ ಬರೆಯಬೇಕು ಎಂಬುದು ಗೊತ್ತಾಗದೇ ಚಡಪಡಿಸುತ್ತಿದ್ದರು. ಒಮ್ಮೆ ವಿಷಯ ಸಿಕ್ಕರೆ ಚೌಕಟ್ಟನ್ನು ಹದಗೊಳಿಸ ಬಹುದು, ಮಾರ್ಗವನ್ನು ರೂಪಿಸಬಹುದು. ವಿಷಯ ಆಯ್ಕೆಯೇ ಸಮಸ್ಯೆಯಾಗಿ ಅವರು ಪರದಾಡುತ್ತಿದ್ದರು. ಈ ವಾರ ಹೇಗೋ ಮುಗಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟು ಎರಡು ದಿನ ಕಳೆಯುತ್ತಿದ್ದಂತೆ, ಮತ್ತೆ ಶುರು, ಮುಂದಿನ ವಾರ ಯಾವ ವಿಷಯದ ಬಗ್ಗೆ ಬರೆಯುವುದು ಎಂಬ ಗುಂಗಿಹುಳದ ಕೊರೆತ. ವಾರ ವಾರವೂ ಬಸಿರಾಗುವುದು
ಮತ್ತು ವಾರ ವಾರವೂ ಹಡೆಯುವುದು ಕಷ್ಟ ಕಷ್ಟ. ಒಮ್ಮೆಯೂ ಪ್ರಸೂತಿ ವೈರಾಗ್ಯ ಬರಲೇಕೂಡದು. ಹೀಗಾಗಿ ಕೆಲವು ಅಂಕಣಕಾರರು ಐದಾರು ತಿಂಗಳು ಬರೆದು ಸುಸ್ತಾಗಿ ಹೋಗುತ್ತಾರೆ. ಅವರಲ್ಲಿ ಖಾಲಿತನ ಕಾಡಲಾ ರಂಭಿಸುತ್ತದೆ. ಅನಂತರ ಅವರು ಏನೋ ನೆಪ ತೆಗೆದು ಕೈಚೆಲ್ಲಿಬಿಡುತ್ತಾರೆ. ಇನ್ನು ಕೆಲವು ಅಂಕಣಕಾರರ ಬರಹಗಳಲ್ಲಿ ಸುಸ್ತು ಇಣುಕಲಾರಂಭಿಸುತ್ತದೆ. ಅವರ ಬರಹ ನೋಡಿಯೇ, ಓದುಗರು ದಣಿಯುತ್ತಾರೆ.

ಇದನ್ನೂ ಓದಿ: Vishweshwar Bhat Column: ಸಂಬಂಧಗಳೂ ಸತ್ತರೂ ಭಾವನೆಗಳು ಸಾಯುವುದಿಲ್ಲ!