Friday, 22nd November 2024

Dr SadhanaShree Column: ಶರತ್‌ ಋತುವಿನ ವಿಹಾರದ ಷರತ್ತುಗಳು!

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ಮನುಷ್ಯನ ಆಯುರಾರೋಗ್ಯಗಳ ಪೋಷಣೆಗಾಗಿ ಹಾಗೂ ಸಂರಕ್ಷಣೆಗಾಗಿ ಆಯುರ್ವೇದ ಶಾಸ್ತ್ರದಲ್ಲಿ ಪ್ರಾಚೀನ ಋಷಿವಿಜ್ಞಾನಿಗಳು ದಿನಚರ್ಯಾ, ಋತುಚರ್ಯಾ ಮತ್ತು ಸದ್ವೃತ್ತಗಳೆಂಬ ಮೂರು ಪರಿಹಾರಗಳನ್ನು ಸೂಚಿಸಿ ದ್ದಾರೆ.

ಇವುಗಳ ಶಿಸ್ತುಬದ್ಧ ಪಾಲನೆಯು ವ್ಯಕ್ತಿಯ ಸಂಪೂರ್ಣ ಸ್ವಾಸ್ಥ್ಯಕ್ಕೆ ಕಾರಣವಾಗಿರುವುದಲ್ಲದೆ, ಆತ್ಮಸಾಕ್ಷಾತ್ಕಾರಕ್ಕೂ ಪೂರಕವಾಗುತ್ತವೆ. ದಿನಚರ್ಯಾ ಎಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿ ದಿನವೂ ಬಿಡದೆ ಆಚರಿಸಬೇಕಾದ ಜೀವನ ಕ್ರಮ. ಆದರೆ, ಈ ದಿನಚರ್ಯೆಯು ಋತುಗಳಿಗೆ ಅನುಸಾರವಾಗಿ ಬದಲಾವಣೆಯಾಗಬೇಕಾಗುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಇರುವ ಮನುಷ್ಯನು ಋತುಗಳಲ್ಲಿ ಆಗುವ ಬದಲಾವಣೆ ಗಳಿಗೆ ಸ್ಪಂದಿಸಿ ತನ್ಮೂಲಕ ದೇಹದಗುವ ಬದಲಾವಣೆಗಳನ್ನು ಸರಿದೂಗಿಸುವಂತಹ ಆಹಾರ- ವಿಹಾರ ಕ್ರಮಗಳನ್ನು ಪ್ರತಿನಿತ್ಯ ತನ್ನ ದಿನಚರ್ಯೆಯಲ್ಲಿ ಹೊಂದಿಸಿಕೊಂಡು ಹೋಗುವುದೇ ಋತುಚರ್ಯೆ. ಋತುಚರ್ಯೆಗಳ ನಿಯಮ ಪಾಲನೆಗಾಗಿಯೇ ಆಯುರ್ವೇದ ಆಚಾರ್ಯರು ಕಾಲವನ್ನು ಸಂವತ್ಸರವನ್ನಾಗಿ, ಸಂವತ್ಸರವನ್ನು ಆಯನಗಳಾಗಿ, ಆಯನಗಳನ್ನು ಋತುಗಳನ್ನಾಗಿ, ಋತುಗಳನ್ನು ಮಾಸಗಳನ್ನಾಗಿ, ಮಾಸಗಳನ್ನು ಪಕ್ಷಗಳನ್ನಾಗಿ, ಪಕ್ಷಗಳನ್ನು ವಾರಗಳನ್ನಾಗಿ ಮತ್ತು ವಾರಗಳನ್ನು ದಿನಗಳನ್ನಾಗಿ ವಿಭಜನೆ ಮಾಡಿದ್ದಾರೆ.

ಅದರಲ್ಲಿ ಸಂವತ್ಸರದ ಎರಡು ವಿಭಾಗಗಳೆಂದರೆ- ಉತ್ತರಾಯಣ ಮತ್ತು ದಕ್ಷಿಣಾಯನ. ಉತ್ತರಾಯಣದಲ್ಲಿ ಸೂರ್ಯನು ತನ್ನ ಸ್ಥಾನದಿಂದ ಉತ್ತರಾಭಿಮುಖವಾಗಿ ಸಂಚರಿಸುತ್ತಾನೆ. ಈ ಕಾಲದಲ್ಲಿ ಮೂರು ಋತುಗಳನ್ನು
ಕಾಣಬಹುದು- ಶಿಶಿರ, ವಸಂತ ಮತ್ತು ಗ್ರೀಷ್ಮಾ. ಇನ್ನು ದಕ್ಷಿಣಾಯನವೆಂದರೆ ಸೂರ್ಯನು ತನ್ನ ಸ್ಥಾನದಿಂದ ದಕ್ಷಿಣಾಭಿಮುಖವಾಗಿ ಸಂಚರಿಸುವುದು. ಇದರಲ್ಲಿ ಬರುವ ಮೂರು ಋತುಗಳೆಂದರೆ- ವರ್ಷಾ, ಶರತ್ ಮತ್ತು ಹೇಮಂತ.

ಉತ್ತರಾಯಣವೆಂಬ ಆದಾನ ಕಾಲದಲ್ಲಿ ಪೃಥ್ವಿಯಿಂದ ಸೂರ್ಯನು ನೀರನ್ನು ಹೀರುತ್ತಾನೆ. ಈ ಕಾಲದಲ್ಲಿ ಮನುಷ್ಯರ ಶಕ್ತಿ, ಬಲ ಮತ್ತು ವೀರ್ಯಗಳು ಕ್ರಮೇಣ ಕ್ಷೀಣವಾಗುತ್ತದೆ. ಇನ್ನು ದಕ್ಷಿಣಾಯನವೆಂಬ ವಿಸರ್ಗ ಕಾಲದಲ್ಲಿ ಸೂರ್ಯನು ಪೃಥ್ವಿಗೆ ನೀರನ್ನು ಬಿಟ್ಟುಕೊಡುತ್ತಾನೆ. ಈ ಕಾಲದಲ್ಲಿ ಮನುಷ್ಯನಲ್ಲಿ ಶಕ್ತಿ, ಬಲ ಮತ್ತು
ವೀರ್ಯಗಳು ದೇಹದಲ್ಲಿ ವೃದ್ಧಿಯಾಗುತ್ತದೆ. ಈ ಸಂಚಿಕೆಯಲ್ಲಿ ದಕ್ಷಿಣಾಯನದ ಋತುವಾದ ಶರತ್ ಋತುವಿನ ಋತುಚರ್ಯೆಯನ್ನು ಮತ್ತಷ್ಟು ವಿವರಗಳೊಂದಿಗೆ ಅರ್ಥೈಸಿಕೊಳ್ಳೋಣ.

ರತ್ ಋತುವು ಒಂದು ಅತ್ಯಂತ ಸುಂದರವಾದ ಕಾಲ. ಶರತ್ ಶಬ್ದದ ಅರ್ಥವೇ ಸೂಚಿಸುವಂತೆ – ‘ಶಂ ರಾತೀತಿ ಶರತ್’ ಅಂದರೆ ಹಿತವಾದ ತಂಗಾಳಿಯಿಂದ ಆನಂದ ಕೊಡುವ ಕಾಲವೇ ಶರತ. ಹಾಗೆಯೇ, ಧಾನ್ಯಗಳು ಮಾಗಿ ಕಣಜ ತುಂಬುವ ಕಾಲವೇ ಶರತ್ ಋತು. ಹಿಂದಿನ ಋತುವಾದಂತಹ ವರ್ಷಾ ಋತುವಿನಲ್ಲಿ ಮಳೆಯ ಪ್ರಭಾವ ದಿಂದ ಶರೀರವು ತಣ್ಣಗಿದ್ದು ಶೀತವಾತಾದಿಗಳ ಸೇವನೆಯಿಂದ ಶರೀರಕ್ಕೆ ಶೀತವು ಅಭ್ಯಾಸವಾಗಿರುತ್ತದೆ. ಇದು ಮುಗಿದ ಮೇಲೆ ಆಕಾಶದಲ್ಲಿ ಮೋಡಗಳು ತಿಳಿಯಾಗುತ್ತಿದ್ದಂತೆ ಸೂರ್ಯನ ಕಿರಣಗಳ ತೀಕ್ಷ್ಣತೆಯಿಂದ ಶರದೃತು ವಿನಲ್ಲಿ ದೇಹವು ಬಿಸಿಯಾಗುವುದಕ್ಕೆ ಪ್ರಾರಂಭವಾಗಿ ಮಳೆಗಾಲದಲ್ಲಿ ಸಂಚಯವಾದಂತಹ ಪಿತ್ತವು ಶರತ್ ಕಾಲ ದಲ್ಲಿ ಕೆರಳಿಬಿಡುತ್ತದೆ. ಹಾಗಾಗಿಯೇ, ಈ ಋತುವಿನಲ್ಲಿ ನಾವು ಪಿತ್ತನಿವಾರಣೆಯ ಉಪಾಯಗಳನ್ನೆಲ್ಲ ಋತು ಚರ್ಯೆಯಾಗಿ ಆಚರಿಸತಕ್ಕದ್ದು. ಈ ಪಿತ್ತದೋಷದ ಶಮನಕ್ಕಾಗಿ ನಾವು ಪಾಲಿಸಬೇಕಾದ ಆಹಾರ ಕ್ರಮ ಗಳನ್ನು ನಾವು ಕಳೆದ ಸಂಚಿಕೆಯಲ್ಲಿ ಸವಿಸ್ತಾರವಾಗಿ ನೋಡಿದ್ದೇವೆ. ಇಂದಿನ ಸಂಚಿಕೆಯಲ್ಲಿ ಪಿತ್ತ ಪ್ರಶಮಕ ವಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ಮೊದಲಿಗೆ, ಈ ಋತುವಿನಲ್ಲಿ ಪಿತ್ತ ದೋಷದ ನಿವಾರಣೆಗೆ ಕಹಿ ಔಷಧಗಳಿಂದ ತಯಾರಿಸಲ್ಪಟ್ಟ ತುಪ್ಪವನ್ನು ಸೇವಿಸತಕ್ಕದ್ದು ಹಾಗೂ ಆಯುರ್ವೇದ ವೈದ್ಯರ ನಿರ್ದೇಶನದಲ್ಲಿ ವಿರೇಚನವೆಂಬ ಪಂಚಕರ್ಮವನ್ನು ಸಹ ಮಾಡಿಸಿಕೊಳ್ಳಬೇಕು. ಸ್ನೇಹಿತರೆ, ಆಯುರ್ವೇದದಲ್ಲಿ ದೇಹ ಶುದ್ದಿಗಾಗಿ ಐದು ವಿಧಿವಿಧಾನಗಳ ಚಿಕಿತ್ಸೆಯನ್ನು ಪಂಚಕರ್ಮವೆಂದು ಕರೆಯುತ್ತಾರೆ. ಅದರಲ್ಲಿ, ವಿಶೇಷವಾಗಿ ಕೆರಳಿದ ಪಿತ್ತ ದೋಷವನ್ನು ದೇಹದಿಂದ ಹೊರಗೆ ಹಾಕಲು ವಿವಿಧ ರೀತಿಯ ಔಷಧಗಳನ್ನು ನೀಡಿ, ಬೇಧಿ ಮಾಡಿಸುವ ಕ್ರಿಯೆಯನ್ನು ವಿರೇಚನವೆಂದು ಕರೆಯುತ್ತಾರೆ.

ಶರೀರದಲ್ಲಿ ಸಹಜವಾಗಿಯೇ ಪಿತ್ತದೋಷವು ಶರತ್ ಋತುವಿನಲ್ಲಿ ಕೆರಳಿರುವಾಗ ಈ ಕಾಲದಲ್ಲಿ ಋತು ಶೋಧನೆಯ
ಭಾಗವಾಗಿ ವಿರೇಚನ ಕರ್ಮವನ್ನು ಎಲ್ಲರೂ ಅಂದರೆ ಸ್ವಸ್ಥರೂ ಸಹ ಮಾಡಿಸಿಕೊಳ್ಳಲೇ ಬೇಕು. ಇದರಿಂದ ಇಡೀ ವರ್ಷ ನಮ್ಮ ದೇಹದಲ್ಲಿ ವಿಕೃತ ಪಿತ್ತದಿಂದಾಗುವ ತೊಂದರೆಗಳನ್ನು ನಿವಾರಿಸಿಕೊಂಡು ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು. ಇದು ಶರೀರದ ಶೋಧನೆಯ ವಿಷಯ. ಇನ್ನು, ಪಿತ್ತ ಶಾಮಕ ವಿಹಾರಗಳನ್ನು ನೋಡೋಣ. ರಾತ್ರಿ ಊಟವಾದ ಮೇಲೆ ಬೆಳದಿಂಗಳಲ್ಲಿ ವಿಹರಿಸಿ 10 ರಿಂದ 10.30 ಒಳಗೆ ಮಲಗಿ, ಪುನಃ ಬೆಳಿಗ್ಗೆ 5 ರಿಂದ 5.30 ವರೆಗೆ
ಏಳುವುದು ಉತ್ತಮ. ಈ ಋತುವಿನಲ್ಲಿ ರಾತ್ರಿ ಜಾಗರಣೆಯು ಪಿತ್ತ ಮತ್ತು ರಕ್ತ ದುಷ್ಟಿಕರ. ಬೆಳದಿಂಗಳು ಪಿತ್ತ ಶಾಮಕ. ಶರತ್ ಋತುವಿನಲ್ಲಿ ಹಗಲು ನಿದ್ದೆಯೂ ಸಹ ನಿಷಿದ್ಧ.

ಹಾಗಾಗಿ, ಊಟವಾದ ನಂತರ ಮಧ್ಯಾಹ್ನ ಮಲಗುವ ಅಭ್ಯಾಸವಿದ್ದರೆ ಅದನ್ನು ಕ್ರಮೇಣ ತಪ್ಪಿಸುವುದು
ಒಳ್ಳೆಯದು. ಶರತ್ ಋತುವಿನಲ್ಲಿ ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಮಾಡುವ ಮೈಥುನವು ತೊಂದರೆ ತರೆದು. ದಿನನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಏದುಸಿರು ಬರುವವರೆಗಿನ ಮಿತವಾದ ವ್ಯಾಯಾಮ ಈ ಋತುವಿನಲ್ಲಿ ಶ್ರೇಷ್ಠ. ಅತಿ ವ್ಯಾಯಾಮವು ಮತ್ತಷ್ಟು ರಕ್ತದುಷ್ಟಿಯನ್ನು ಮಾಡುತ್ತದೆ. ವ್ಯಾಯಾಮವಾದ ನಂತರ ಪೂರ್ತಿ ಶರೀರಕ್ಕೆ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಅಥವಾ ತುಪ್ಪವನ್ನು ಸವರಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಆರಾಮದಾಯಕ. ಚಂದನ ನೀರಿನ ಸ್ನಾನ, ಚಂದನ, ಲಾವಂಚ, ಪಚ್ಚಕರ್ಪೂರ ಲೇಪನ ಒಳ್ಳೆಯದು.

ಅತಿ ಬಿಸಿಯಾದ ನೀರಿನ ಸ್ನಾನವು ಪಿತ್ತ ದುಷ್ಟಿಕರ. ಶರತ್ ಋತುವಿನ ಸಮಯದಲ್ಲಿ ಸುಂದರವಾದ, ತಂಪಾದ, ತಿಳಿಯಾದ ಕಾಟನ್ ಬಟ್ಟೆಗಳು ಉತ್ತಮ. ನೈಲೋನ್/ ಪಾಲಿಸ್ಟರ್ ವಸ್ತ್ರಗಳನ್ನು ಧರಿಸದಿದ್ದರೆ ಒಳ್ಳೆಯದು. ಗಾಢ ವಾದ ಬಣ್ಣಗಳ ವಸಗಳೂ ಬೇಡ. ಈ ಸಮಯದಲ್ಲಿ ಮುತ್ತಿನಹಾರಗಳನ್ನೂ ಧರಿಸಬಹುದು. ಈ ಋತುವಿನಲ್ಲಿ ಅರಳುವ ಹೂವುಗಳ ಮಾಲೆಯನ್ನು ಧಾರಣೆ ಮಾಡಬಹುದು. ಇದರಿಂದ ಪಿತ್ತದೋಷ ದೇಹದಲ್ಲಿ ಕೆರಳುವುದಿಲ್ಲ.

ಶರತ್ ಋತುವಿನಲ್ಲಿ ಹಬ್ಬಗಳ ಸಾಲೇ ಸಾಲು. ಹಬ್ಬದ ಸಮಯದಲ್ಲಿ ಮಾಡುವ ಉಪವಾಸದ ಕುರಿತಾಗಿ ಒಂದು ಕಿವಿಮಾತು. ಉಪವಾಸದ ಹೆಸರಿನಲ್ಲಿ ಹಸಿವೆ ತಡೆಗಟ್ಟಿ ದೇಹವನ್ನು ದಂಡಿಸುವುದು ಆಯುರ್ವೇದವು ಒಪ್ಪುವ ಮಾತಲ್ಲ. ಆಯುರ್ವೇದದ ಪ್ರಕಾರ ನಮ್ಮ ಜಠರಾಗ್ನಿಯೇ ನಮ್ಮನ್ನು ರಕ್ಷಿಸುವ ದೇವರು. ಇದರ ಪೂಜೆಯೇ ಅತ್ಯಂತ ಮಹತ್ವವಾದದ್ದು. ಹಸಿವೆಯನ್ನು ತಡೆಯುವುದು ಸರಿಯಲ್ಲ.

ಹಾಗೆಯೇ, ಹಸಿವೆ ತಡೆದು ತಡೆದು ಒಮ್ಮೆಲೆ ಜೀರ್ಣಕ್ಕೆ ಜಡವಾದ ಆಹಾರವನ್ನು ತೆಗೆದುಕೊಳ್ಳುವುದು ಸಹ ಆರೋಗ್ಯವನ್ನು ಹಾಳು ಮಾಡೀತು. ಸರಿಯಾದ ಆಹಾರ ಕಾಲದಲ್ಲಿ ಲಘುವಾದ, ಹಿತವಾದ ಮತ್ತು ಸಾತ್ವಿಕವಾದ ಆಹಾರವನ್ನು ಸೇವಿಸಿ ಹಬ್ಬದ ಆಚರಣೆಯಲ್ಲಿ ತೊಡಗುವುದು ಎಂದಿಗೂ ಶ್ರೇಷ್ಠ. ಹಬ್ಬದ ಸಮಯದಲ್ಲಿ ಸ್ನಾನ ವಾದ ನಂತರ ಮಾಡುವ ಪೂಜೆಯು ಅರ್ಧ ಗಂಟೆಗೂ ಮೇಲಿದ್ದರೆ ಲಘುವಾಗಿ ಹಾಲು ಸೇವಿಸಿ ಅಥವಾ ಲಘು ಉಪಹಾರವನ್ನು ತೆಗೆದುಕೊಂಡು ಪೂಜೆಗೆ ಕೂರುವುದು ಆರೋಗ್ಯಕರ. ಸ್ನೇಹಿತರೆ, ಸ್ನಾನದ ನಂತರ ನಮ್ಮ ಜಾಠರಾಗ್ನಿಯು ತೀಕ್ಷ್ಣವಾಗಿ ಉರಿಯಲು ಪ್ರಾರಂಭವಾಗುತ್ತದೆ. ಅರ್ಧ ಗಂಟೆಗೂ ಮೀರಿ ಖಾಲಿ ಹೊಟ್ಟೆ ಬಿಟ್ಟರೆ ಜಾಠರಾಗ್ನಿಗೆ ಸರಿಯಾದ ಇಂಧನ ಸಿಗದೇ ಅದರಿಂದ ಬೇರೆ ತೊಂದರೆಗಳಾಗಬಹುದು.

ಇದು ಹಬ್ಬದ ವೇಳೆಯಲ್ಲಿ ಪಾಲಿಸಬೇಕಾದ ಕ್ರಮವಷ್ಟೇ ಅಲ್ಲದೆ ದಿನಚರಿಯಲ್ಲೂ ಸಹ ನೆನಪಿಡಬೇಕಾದ ಅಂಶ. ಹಸಿವೆಯನ್ನು ತಡೆಯುವ ಅಭ್ಯಾಸ ಮಾಡಿಕೊಂಡರೆ ಇದರಿಂದ gastritis/ulcers ಮುಂತಾದ ತೊಂದರೆಗಳು ಸಹ ಆಗಬಹುದು. ಇನ್ನು ಶರತ್ ಋತುವಿನ ನಿಷಿದ್ಧವಾದ ಹತ್ತು ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.

೧. ದಿವಾಸ್ವಪ್ನ- ವಿಶೇಷವಾಗಿ ಹಬ್ಬದ ಊಟವಾದ ನಂತರ ಮಲಗುವುದು 2. ರಾತ್ರಿ ಜಾಗರಣೆ 3. ಅತಿಯಾಗಿ ಬಿಸಿಲಿಗೆ ಮೈಯೊಡ್ಡುವುದು ೪. ಅತಿಯಾದ ಪ್ರಯಾಣ ೫. ಅತಿಯಾದ ಉಪ್ಪು- ಖಾರ-ಹುಳಿಯ ಸೇವನೆ ೬. ಉಷ್ಣ ಆಹಾರದ
ಅತಿಯಾದ ಸೇವನೆ ೭. ಕರಿದ ತಿಂಡಿಗಳ ಸೇವನೆ ೮. ಇನ್ನು ಬಹಳ ಮುಖ್ಯವಾಗಿ, ಸಿಟ್ಟು-ಕೋಪ-ದ್ವೇಷ -ಹೊಟ್ಟೆ ಕಿಚ್ಚುಗಳು ಬೇಡವೇ ಬೇಡ. ಏಕೆಂದರೆ ಈ ಮಾನಸಿಕ ಅಂಶಗಳು ಸಹ ಪಿತ್ತವನ್ನು ದೂಷಿಸುತ್ತವೆ. ಶಾಂತಿ ಮತ್ತು ಸಮಾಧಾನದ ನಡುವಳಿಕೆ ಸದಾ ಹಿತ. ೯. ಪದೇಪದೇ ಕಾಫಿ ಮತ್ತು ಟೀ ಸೇವನೆಯೂ ಸಹ ಕೆಟ್ಟದ್ದು. ಇದು ಪಿತ್ತ ವನ್ನು ಹೆಚ್ಚು ಮಾಡುತ್ತದೆ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆಯಿಂದ ಮತ್ತೂ ತೊಂದರೆ ಹೆಚ್ಚು. 10. ಮದ್ಯದ ಸೇವನೆಯೂ ಶರತ್ ಋತುವಿನಲ್ಲಿ ನಿಷಿದ್ಧ.

ಶರತ್ ಋತುವಿನಲ್ಲಿ ಕಾಡುವ ಮತ್ತೊಂದು ಸಮಸ್ಯೆಯೆಂದರೆ- ನಿದ್ರಾ ಕ್ಷಯ ಅಥವಾ ಪದೇಪದೇ ಎಚ್ಚರವಾಗುವ ಸಂಕಟ ಭರಿತವಾದ ರಾತ್ರಿ ನಿದ್ದೆ. ಈ ಋತುವಿನಲ್ಲಿ ಕಾಣಿಸಿಕೊಳ್ಳುವ ರಾತ್ರಿ ನಿದ್ದೆ ಸಮಸ್ಯೆಗೆ ಕೆಲವು ಸರಳ ಉಪಾಯ ಗಳು ಹೀಗಿವೆ. ಆಹಾರ ಕಾಲದ ಬಗ್ಗೆ ಗಮನವಿರಲಿ.

ರಾತ್ರಿ 8.30 ರ ಮುನ್ನ ಊಟ ಮುಗಿಸುವುದು ಒಳ್ಳೆಯದು. ಊಟದಲ್ಲಿ ಅತಿಯಾದ ಉಪ್ಪು- ಖಾರ-ಹುಳಿಯ ಉಷ್ಣ ಪದಾರ್ಥಗಳು ಬೇಡ. ಉಪ್ಪಿನಕಾಯಿ ಮತ್ತು ಮೊಸರನ್ನು ವರ್ಜಿಸಿ. ಅನ್ನ ಅಥವಾ ಹೆಸರುಬೇಳೆ ಕಟ್ಟು, ಹಾಲು ಅನ್ನದ ಗಂಜಿ, ಕಾಯಿ ಹಾಲಿನ ಗಂಜಿ, ಗಸಗಸೆ ಅಥವಾ ಅಕ್ಕಿ ಪಾಯಸಗಳನ್ನು ತುಪ್ಪದೊಂದಿಗೆ ಸೇವಿಸುವುದು
ಹಿತಕರ. ಊಟದ ನಂತರ ಬೆಳದಿಂಗಳಲ್ಲಿ, ತಂಪಾದ ಗಾಳಿಯಲ್ಲಿ ವಿಹರಿಸುವುದು ಅತ್ಯಂತ ಆಹ್ಲಾದಕರ.
ರಾತ್ರಿಯ ಪ್ರಾರಂಭಕಾಲದಲ್ಲಿ / ಮೊದಲಯಾಮದಲ್ಲಿನ ಅರ್ಧಕಾಲದಲ್ಲಿ ಚಂದ್ರಕಿರಣವನ್ನು ಸೇವಿಸಬೇಕು. ನಂತರ, ರಾತ್ರಿ ಮಲಗುವ ಮುನ್ನ ಎರಡೂ ಕೈ-ಕಾಲುಗಳನ್ನು ತಣ್ಣೀರಿನಲ್ಲಿ ತೊಳೆದು ನೆತ್ತಿಗೆ, ಅಂಗೈಗೆ ಮತ್ತು ಅಂಗಾಲಿಗೆ ಕೊಬ್ಬರಿ ಎಣ್ಣೆ ಮತ್ತು ತುಪ್ಪದ ಮಿಶ್ರಣವನ್ನು 2-3 ನಿಮಿಷಗಳು ಸವರಿಕೊಂಡು ಮಲಗುವುದರಿಂದ ಸುಖ ನಿದ್ರೆ ಗ್ಯಾರೆಂಟಿ. ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಮೆಂತ್ಯ ಮತ್ತು ಮಜ್ಜಿಗೆಯನ್ನು ಕಲಸಿ, ಖಾಲಿ ಹೊಟ್ಟೆಯಲ್ಲಿ ತಲೆಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಹೂಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವುದು ಉತ್ತಮ
ನಿದ್ದೆಯನ್ನು ನೀಡುತ್ತದೆ.

ನಿತ್ಯ ಸಂಜೆ ಅಂದರೆ ಮಧ್ಯಾಹ್ನದ ಊಟವು ಜೀರ್ಣವಾದ ನಂತರ ಮೈಗೆ ಕೊಬ್ಬರಿ ಎಣ್ಣೆ ಹಚ್ಚಿ, ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ನಿದ್ರಾಕ್ಷಯವನ್ನು ನಿವಾರಿಸುತ್ತದೆ. ಇದರೊಂದಿಗೆ ಶೀತಲಿ ಮತ್ತು ಶೀತ್ಕಾರಿ
ಪ್ರಾಣಾಯಾಮಗಳು ಒಳ್ಳೆಯದು. ಇವಿಷ್ಟು ಶರತ್ ಋತುವಿನ ವಿಹಾರದ ವಿಚಾರಗಳು. ಶರತ್ ಋತುವಿನ ನಂತರ ಹೇಮಂತ ಋತುವಿನ ಆಗಮನ. ಇದು ಚಳಿಗಾಲದ ಪ್ರಾರಂಭ. ಶರತ್ ಋತುವಿನ ಕೊನೆಯ 15 ದಿನಗಳನ್ನು ಹಾಗೂ ಹೇಮಂತ ಋತುವಿನ ಮೊದಲ 15 ದಿನಗಳನ್ನು ಆಯುರ್ವೇದದಲ್ಲಿ ಋತುಸಂಧಿ ಎಂದು ಕರೆಯುತ್ತಾರೆ. ಈ ಸಂಧಿಯ ಕಾಲದಲ್ಲಿ ನಾವು ಅತ್ಯಂತ ಜಾಗರೂಕರಾಗಿರಬೇಕು. ಕಾರಣ, ನಮ್ಮ ಆರೋಗ್ಯ ಈ ಸಮಯದಲ್ಲಿ ಬಹಳ ನಾಜೂಕು. ಹಿಂದಿನ ಋತುವಿನ ಆಚರಣೆಗಳನ್ನು ನಿಧಾನವಾಗಿ ಬಿಡುತ್ತಾ ಮುಂದಿನ ಋತುವಿನ ಆಚರಣೆ ಗಳನ್ನು ನಿಧಾನವಾಗಿ ಅಳವಡಿಸಿಕೊಳ್ಳಬೇಕು.

ಹೀಗೆ ಮಾಡುವುದರಿಂದ ಋತು ಬೇರೆಯಾದರೂ ಸಹ ಆರೋಗ್ಯದಲ್ಲಿ ಏನೂ ಏರುಪೇರುಗಳಾಗದೆ ಸಾಮ್ಯಾವಸ್ಥೆ ಯನ್ನು ಕಾಪಾಡಿಕೊಳ್ಳಬಹುದು. ಸ್ನೇಹಿತರೆ, ಇದು ಆಯುರ್ವೇದ ಜೀವ ವಿಜ್ಞಾನದಲ್ಲಿ ನಮ್ಮ ಸ್ವಾಸ್ಥ್ಯರಕ್ಷ ಚರ್ಯೆ ಇದೆ. ಇಡೀ ಋತುಚರ್ಯೆಯು ಆಯಾ ಋತುವಿಗೆ ತಕ್ಕಂತೆ ನಮ್ಮ ದೇಹಬಲ ಮತ್ತು ಅಗ್ನಿ ಬಲವನ್ನು ಗಮನ ದಲ್ಲಿಟ್ಟುಕೊಂಡು ಮಾಡಬೇಕಾದ ಆಹಾರ-ವಿಹಾರಗಳ ಸೂಕ್ತವಾದ ಬದಲಾವಣೆ.

ಇದನ್ನು ನಾವು ನಿಷ್ಠೆಯಿಂದ ಮಾಡಿದ್ದೇ ಆದರೆ ಖಂಡಿತ ಶರತ್ ಋತುವಿನಲ್ಲಿ ಮಾತ್ರವಲ್ಲದೆ, ಸಂವತ್ಸರ ಪೂರ್ತಿ ಯಾಗಿ ಆರೋಗ್ಯವಾಗಿರಬಹುದು. ದಿನಚರ್ಯೆ-ಋತುಚರ್ಯೆಗಳೆಂಬ ಅನರ್ಘ್ಯ ರತ್ನಗಳನ್ನು ಮಾನವ ಕುಲದ ರಕ್ಷಣೆಗೆ ಆಯುರ್ವೇದವು ನೀಡಿದೆ. ಆಯುರ್ವೇದವು ನಮ್ಮ ಭಾರತ ಭೂಮಿಯ ಪರಂಪರೆಗೆ ಸೇರಿದ್ದು ಅಂತ ಹೇಳುವುದಕ್ಕೆ ಅತ್ಯಂತ ಹೆಮ್ಮೆ ಪಡುತ್ತೇನೆ. ಬನ್ನಿ ಆಯುರ್ವೇದ ಪಾಲನೆಯ ಮೂಲಕ ಒಟ್ಟಿಗೆ ಒಂದು ಸ್ವಸ್ಥ- ಸುಂದರ ಬದುಕನ್ನು ಹಾಗೂ ಸಮಾಜವನ್ನು ತನ್ಮೂಲಕ ದೇಶವನ್ನು ಕಟ್ಟೋಣ.

| ಜೀವೇಮ ಶರದಃ ಶತಮ್ |

ಇದನ್ನೂ ಓದಿ: Dr SadhanaShree Column: ಇಲ್ಲಿದೆ ನೋಡಿ ಪರಸ್ಪರ ಹೊಂದಿಕೆಯಾಗದ ಆಹಾರಗಳ ಪಟ್ಟಿ