Friday, 22nd November 2024

Zainab Nasrallah: ಇಸ್ರೇಲ್‌ ದಾಳಿಗೆ ಹೆಜ್ಬುಲ್ಲಾ ತತ್ತರ; ಪ್ರಮುಖ ನಾಯಕ ಹಸನ್ ನಸ್ರಲ್ಲಾ ಪುತ್ರಿ ಝೈನಬ್ ನಸ್ರಲ್ಲಾ ಸಾವು?

Zainab Nasrallah

ಬೈರುತ್: ಮಹತ್ವದ ಬೆಳವಣಿಗೆಯೊಂದರಲ್ಲಿ ಲೆಬನಾನ್‌ನ ದಕ್ಷಿಣ ಬೈರುತ್‌ನಲ್ಲಿರುವ ಭಯೋತ್ಪಾದಕ ಗುಂಪು ಹೆಜ್ಬುಲ್ಲಾ(Hezbollah)ದ ಮುಖ್ಯಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (Hassan Nasrallah)ನ ಪುತ್ರಿ ಝೈನಬ್ ನಸ್ರಲ್ಲಾ (Zainab Nasrallah) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಹೆಜ್ಬುಲ್ಲಾ ಅಥವಾ ಲೆಬನಾನ್ ಅಧಿಕಾರಿಗಳ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ ಇಸ್ರೇಲ್‌ನ ಚಾನೆಲ್ 12 ಆಕೆಯ ಸಾವಿನ ಬಗ್ಗೆ ವರದಿ ಮಾಡಿದೆ. ಹೆಜ್ಬುಲ್ಲಾ ಸಂಘಟನೆಗೆ ಬೆಂಬಲ ನೀಡುತ್ತಿದ್ದ ಝೈನಬ್ ನಸ್ರಲ್ಲಾ 1997ರಲ್ಲಿ ಇಸ್ರೇಲಿ ಪಡೆಗಳಿಂದ ಕೊಲ್ಲಲ್ಪಟ್ಟ ತನ್ನ ಸಹೋದರ ಹಾದಿಯ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದರು ಎಂದು ಜೆರುಸಲೇಂ ಪೋಸ್ಟ್‌ ವರದಿ ಮಾಡಿದೆ.

2022ರಲ್ಲಿ ಅಲ್-ಮನಾರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಝೈನಬ್ ನಸ್ರಲ್ಲಾ ತಮ್ಮ ಸಹೋದರ ಸಾವಿನ ಬಗ್ಗೆ ಪ್ರಸ್ತಾಪಿಸಿದ್ದರು.”ನನ್ನ ಸಹೋದರ ಹಾದಿ ‘ಹುತಾತ್ಮನಾದಾಗ’ ಪೋಷಕರು ಒಂದೇ ಒಂದು ಕಣ್ಣೀರು ಸುರಿಸಲಿಲ್ಲʼʼ ಎಂದು ಹೇಳಿದ್ದರು. ಪ್ರಾಣ ತ್ಯಾಗ ಮಾಡಿದ ಹಾದಿ ಬಗ್ಗೆ ಅವರ ಕುಟುಂಬ ಹೆಮ್ಮೆ ಹೊಂದಿತ್ತು ಎಂದು ತಿಳಿಸಿದ್ದರು. ಝೈನಬ್ ಸಾವು ದೃಢಪಟ್ಟರೆ ಇದು ಹೆಜ್ಬುಲ್ಲಾ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯಾರು ಈ ಹಸನ್ ನಸ್ರಲ್ಲಾ?

ಈ ಮಧ್ಯೆ ಲೆಬನಾನ್‌ನಲ್ಲಿ ಶುಕ್ರವಾರ (ಸೆಪ್ಟೆಂಬರ್‌ 27) ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ಹರಡಿದ್ದು, ಇದನ್ನ ಹೆಜ್ಬುಲ್ಲಾ ನಿರಾಕರಿಸಿದೆ. ಹಸನ್ ನಸ್ರಲ್ಲಾ ಆರೋಗ್ಯವಾಗಿದ್ದಾನೆ ಎಂದು ಮೂಲಗಳು ದೃಢಪಡಿಸಿವೆ.

ಇಸ್ರೇಲಿ ರಕ್ಷಣಾ ಪಡೆಗಳು (Israeli Defence Forces) ಬೈರುತ್‌ ಮೇಲೆ ದಾಳಿ ನಡೆಸಿ, ಹೆಜ್ಬುಲ್ಲಾದ ಕೇಂದ್ರ ಕಚೇರಿಯನ್ನು ನೆಲಸಮಗೊಳಿಸಿದ ನಂತರ ನಸ್ರಲ್ಲಾ ಸಾವನ್ನಪ್ಪಿರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ದಾಳಿಯಿಂದ ನಸ್ರಲ್ಲಾ ಪಾರಾಗಿದ್ದಾನೆ ಎನ್ನವುದನ್ನು ನಂಬಲು ಸಾಧ್ಯವಿಲ್ಲ ಎಂದು ಇಸ್ರೇಲ್‌ ಪಡೆಗಳು ತಿಳಿಸಿರುವುದಾಗಿ ಜೆರುಸಲೇಂ ಪೋಸ್ಟ್‌ ವರದಿ ಮಾಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡುವ ಮೊದಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ದಾಳಿಗೆ ಅಧಿಕಾರ ನೀಡಿದ್ದರು ಎಂದು ಇಸ್ರೇಲ್ ಪತ್ರಿಕೆ ತಿಳಿಸಿದೆ.

ಹಸನ್ ನಸ್ರಲ್ಲಾ ಫೆಬ್ರವರಿ 1992ರಿಂದ ಹೆಜ್ಬುಲ್ಲಾದ ಮಿಲಿಟರಿ ಗುಂಪನ್ನು ಮುನ್ನಡೆಸುತ್ತಿದ್ದಾನೆ. ಈತ ಗುಂಪಿನ ಮೂರನೇ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇಸ್ರೇಲ್‌ ಸೈನಿಕರಿಂದ ಕೊಲ್ಲಲ್ಪಟ್ಟ ಅಬ್ಬಾಸ್ ಅಲ್-ಮುಸಾವಿಯ ಉತ್ತರಾಧಿಕಾರಿಯಾಗಿದ್ದಾನೆ. 64 ವರ್ಷದ ಈತ ಬಡ ದಿನಸಿ ವ್ಯಾಪಾರಿಯೊಬ್ಬನ ಮಗ. ನಸ್ರಲ್ಲಾ 1960ರ ಆಗಸ್ಟ್ 31ರಂದು ಬೈರುತ್‌ನ ಉತ್ತರ ಬುರ್ಜ್ ಹಮ್ಮದ್ ಉಪನಗರದಲ್ಲಿ ಜನಿಸಿದ್ದ. ಆತನಿಗೆ 8 ಮಂದಿ ಒಡಹುಟ್ಟಿದವರು ಮತ್ತು 4 ಮಂದಿ ಮಕ್ಕಳಿದ್ದಾರೆ. ಮಧ್ಯಪ್ರಾಚ್ಯದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬನಾದ ಹಸನ್ ನಸ್ರಲ್ಲಾ 2006ರಲ್ಲಿ ಇಸ್ರೇಲ್ ಜತೆಗಿನ ಯುದ್ಧದ ನಂತರ ತಲೆಮರೆಸಿಕೊಂಡಿದ್ದ.

ಈ ಸುದ್ದಿಯನ್ನೂ ಓದಿ: Lebanon Pager Explosion: ಪೇಜರ್‌ ಸ್ಫೋಟ; ಯಾರು ಈ ಹೆಜ್ಬೊಲ್ಲಾಗಳು? ಇಸ್ರೇಲ್‌ಗೂ ಇವರಿಗೂ ಯಾಕಿಷ್ಟು ವೈರತ್ವ?