Friday, 22nd November 2024

Fire Accident: ಹೊಸೂರಿನ ಟಾಟಾ ಎಲೆಕ್ಟ್ರಾನಿಕ್ಸ್‌ ಘಟಕದಲ್ಲಿ ಭಾರಿ ಬೆಂಕಿ ಅವಘಡ

Fire Accident

ಚೆನ್ನೈ: ಶನಿವಾರ (ಸೆಪ್ಟೆಂಬರ್‌ 28) ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೆಟ್‌ ಲಿಮಿಟೆಡ್‌ (Tata Electronics Private Limited) ಘಟಕದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ (Fire Accident). ಸೆಲ್‌ಫೋನ್‌ ಉತ್ಪಾದನಾ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಉದ್ಯೋಗಿಗಳನ್ನುಸ್ಥಳಾಂತರಿಸಲಾಗಿದೆ. ಸದ್ಯ ಯಾವುದೇ ಸಾವು-ನೋವಿನ ಬಗ್ಗೆ ತಿಳಿದು ಬಂದಿಲ್ಲ. ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ.

ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದ್ದು, ಪ್ರಸ್ತುತ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. ನಾಗಮಂಗಲಂ ಬಳಿಯ ಉದ್ದನಪಲ್ಲಿಯಲ್ಲಿರುವ ಕಂಪನಿಯ ಮೊಬೈಲ್ ಫೋನ್ ಬಿಡಿಭಾಗಗಳ ಪೈಂಟಿಂಗ್‌ ಘಟಕದಲ್ಲಿ ಬೆಳಗ್ಗೆ 5: 30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ʼʼದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆವರಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲ ಕಾರ್ಮಿಕರನ್ನು, ಉದ್ಯೋಗಿಗಳನ್ನು ಆವರಣದಿಂದ ಸ್ಥಳಾಂತರಿಸಲಾಯಿತು. ಏಳು ಅಗ್ನಿಶಾಮಕ ಘಟಕಗಳನ್ನು ನಿಯೋಜಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಮೊದಲ ಪಾಳಿಯ ಸುಮಾರು 1,500 ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ವಕ್ತಾರರೊಬ್ಬರು ಮಾತನಾಡಿ, “ತಮಿಳುನಾಡಿನ ಹೊಸೂರಿನಲ್ಲಿರುವ ನಮ್ಮ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನಮ್ಮ ಎಲ್ಲ ಉದ್ಯೋಗಿಗಳು ಸುರಕ್ಷಿತವಾಗಿರುವುದನ್ನು ಸಂಬಂಧಪಟ್ಟವರು ಖಚಿತಪಡಿಸಿದ್ದಾರೆ. ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ನಮ್ಮ ಉದ್ಯೋಗಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆʼʼ ಎಂದು ತಿಳಿಸಿದ್ದಾರೆ.

ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಮೂವರು ಉದ್ಯೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಂಪನಿಯ ಆವರಣದಿಂದ ತೆರಳುವಂತೆ ಎಲ್ಲ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಐಫೋನ್‌ಗಾಗಿ ವಿವಿಧ ಬಿಡಿಭಾಗಗಳ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಯು ಸುಮಾರು 4,500 ಉದ್ಯೋಗಿಗಳನ್ನು ಹೊಂದಿದೆ. ಇದು 500 ಎಕರೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ದಿನದ 24 ಗಂಟೆಯೂ ತೆರೆದಿರುತ್ತದೆ.

ಈ ಸುದ್ದಿಯನ್ನೂ ಓದಿ: Viral Video: ಹುಟ್ಟುಹಬ್ಬದ ಸರ್ಪ್ರೈಸ್ ಎಂದು ಯುವಕನ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ ಸ್ನೇಹಿತರು!