ಮುಂಬಯಿ: ಟೀಮ್ ಇಂಡಿಯಾದ ಆಟಗಾರ ಸರ್ಫರಾಜ್ ಖಾನ್(Sarfaraz Khan) ಅವರ ಸಹೋದರ, ಮುಂಬೈ ತಂಡದ ಯುವ ಕ್ರಿಕೆಟಿಗ ಮುಶೀರ್ ಖಾನ್(Musheer Khan) ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿಯಲ್ಲಿ ಶತಕ ಹಾಗೂ ಕಳೆದ ಬಾರಿಯ ರಣಜಿ ಟ್ರೋಫಿಯಲ್ಲಿ ಮುಶೀರ್ ಖಾನ್ ದ್ವಿಶತಕ ಬಾರಿಸಿ ಮಿಂಚಿದ್ದರು. ಇರಾನಿ ಟ್ರೋಫಿಯಲ್ಲಿ ಅಡುವ ನಿರೀಕ್ಷೆಯಲ್ಲಿದ್ದ ಮುಶೀರ್ ಖಾನ್ ತಂದೆ ನೌಶನ್ ಖಾನ್ ಅವರೊಂದಿಗೆ ವಾಹನದಲ್ಲಿ ಅಜಂಗಢದಿಂದ(Azamgarh) ಲಕ್ನೋಗೆ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿದ್ದು, ಅವರ ಮೂಳೆ ಮುರಿತಗೊಂಡಿದೆ ಎಂದು ವರದಿಯಾಗಿದೆ. ಹೀಗಾಗಿ ಮುಂಬರುವ ಇರಾನಿ ಕಪ್ ಪಂದ್ಯಕ್ಕೆ ಮುಶೀರ್ ಖಾನ್ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ ಮುಶೀರ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಗಾಯದಿಂದಾಗಿ ಮುಶೀರ್ ಖಾನ್ ಮುಂದಿ ತಿಂಗಳು ನಡೆಯುವ ಇರಾನಿ ಕಪ್ನಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಜತೆಗೆ ರಣಜಿ ಟೂರ್ನಿ ಆರಂಭಿಕ ಕೆಲ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇರಾನಿ ಕಪ್ ಪಂದ್ಯ ಅಕ್ಟೋಬರ್ ಒಂದರಿಂದ 5ರ ತನಕ ಲಕ್ನೋದಲ್ಲಿ ನಡೆಯಲಿದೆ.
19 ವರ್ಷದ ಮುಶೀರ್ ಖಾನ್ ಮುಂಬೈ ತಂಡದ ಪರ 9 ಪ್ರಥಮ ದರ್ಜೆ ಪಂದ್ಯವನ್ನಾಡಿ 716 ರನ್ ಗಳಿಸಿದ್ದಾರೆ. ಈ ವೇಳೆ 3 ಶತಕ ಮತ್ತು ಒಂದು ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್ನಲ್ಲಿ 8 ವಿಕೆಟ್ ಕಿತ್ತಿದ್ದಾರೆ. ಕಳೆದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಮುಶೀರ್ ಖಾನ್ ಒಟ್ಟು 360 ರನ್ ಬಾರಿಸಿ ಮಿಂಚಿದ್ದರು. ಕಳೆದ ಬಾರಿ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮುಶೀರ್ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ IND vs BAN Day 2: ದ್ವಿತೀಯ ದಿನದಾಟ ಬಹುತೇಕ ರದ್ದು ಸಾಧ್ಯತೆ
ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಆಯುಷ್ ಮ್ಹಾತ್ರೆ, ಮುಶೀರ್ ಖಾನ್, ಸಫìರಾಜ್ ಖಾನ್, ಶ್ರೇಯಸ್ ಅಯ್ಯರ್, ಸಿದ್ದೇಶ್ ಲಾಡ್, ಸೂರ್ಯಾಂಶ್ ಶೇಡ್ಗೆ, ಹಾರ್ದಿಕ್ ತಮೋರೆ, ಸಿದ್ಧಾಂತ್ ಆದತ್ರಾವ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಹಿಮಾಂಶು ಸಿಂಗ್, ಶಾರ್ದೂಲ್ ಠಾಕೂರ್, ಮೋಹಿತ್ ಅವಸ್ತಿ, ಮೊಹಮ್ಮದ್ ಜುನೇದ್ ಖಾನ್, ರಾಯ್ಸ್ಟನ್ ಡಾಯಸ್.
ಶೇಷ ಭಾರತ ತಂಡ: ಋತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್, ಧ್ರುವ ಜುರೆಲ್, ಇಶಾನ್ ಕಿಶನ್, ಮಾನವ್ ಸುಥಾರ್, ಸಾರಾಂಶ್ ಜೈನ್, ಪ್ರಸಿದ್ಧ್ ಕೃಷ್ಣ, ಮುಕೇಶ್ ಕುಮಾರ್, ಯಶ್ ದಯಾಳ್, ರಿಕಿ ಭುಯಿ, ಶಾಶ್ವತ್ ರಾವತ್, ಖಲೀಲ್ ಅಹ್ಮದ್, ರಾಹುಲ್ ಚಹರ್.