Saturday, 23rd November 2024

Viral Video: ಸರ್ಕಾರಿ ಶಾಲೆಯಲ್ಲಿ ನಡೆಯಿತು ಕುಡಿತ, ಕುಣಿತ; ವಿಡಿಯೊ ವೈರಲ್‌

Viral Video

ಬಿಹಾರ: ಶಾಲೆಗಳು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಇರುವ ಸ್ಥಳವೇ ಹೊರತು ಅದು ಯಾವುದೇ ಮೋಜು ಮಸ್ತಿ ಮಾಡಲು ಇರುವಂತಹ ಸ್ಥಳವಲ್ಲ. ಇಲ್ಲಿಗೆ ಬರುವಂತಹ ನೂರಾರು ಮಕ್ಕಳಿಗೆ ವಿದ್ಯೆ ಹೇಳಿಕೊಡುವ ಮೂಲಕ ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಲಾಗುತ್ತದೆ.  ಆದರೆ ಮಕ್ಕಳ ವಿದ್ಯಾಭ್ಯಾಸದ ಸ್ಥಳವೆಂದು ಪರಿಗಣಿಸಲಾಗಿದ್ದ ಸರ್ಕಾರಿ ಶಾಲೆಗಳು ಈಗ ಜನರಿಗೆ ಕುಡಿದು ಮೋಜು ಮಸ್ತಿ ಮಾಡುವ ಸ್ಥಳವಾಗಿದೆ. ಹೌದು, ಬಿಹಾರದ ಸಹರ್ಸಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ  ಈಗ ಇಂತಹದೊಂದು ಅನುಚಿತ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಮಂಗಳವಾರ ಸಂಜೆ, ಜಲೈ ಪೊಲೀಸ್ ಠಾಣೆ ಪ್ರದೇಶದ ಶಾಲಾ ಆವರಣದಲ್ಲಿ ಲೈವ್ ಬ್ಯಾಂಡ್ ಮತ್ತು ಬಾರ್ ನೃತ್ಯಗಾರರನ್ನು ಒಳಗೊಂಡ ಮದುವೆಯ ಪಾರ್ಟಿ ಅಥವಾ ‘ಬರಾತ್’ ಸಾಮೂಹಿಕ ಆಚರಣೆಯನ್ನು ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ನಾಲ್ಕು ಮಹಿಳೆಯರು ಜನಪ್ರಿಯ ಭೋಜ್ಪುರಿ ಹಾಡುಗಳಿಗೆ ಅಸಹ್ಯವಾಗಿ  ನೃತ್ಯಗಳನ್ನು ಪ್ರದರ್ಶಿಸಿದ್ದಾರೆ ಎಂದು ಅದನ್ನು ನೋಡಿದವರು ತಿಳಿಸಿದ್ದಾರೆ. ಈ ಘಟನೆಯನ್ನು ಸೆರೆಹಿಡಿದಿರುವ ವೈರಲ್ ವಿಡಿಯೊದಲ್ಲಿ ಹಲವಾರು ಪುರುಷರು, ಅವರಲ್ಲಿ ಕೆಲವರು ಅಮಲಿನಲ್ಲಿ, ನೃತ್ಯಗಾರರೊಂದಿಗೆ ಉತ್ಸಾಹದಿಂದ ನೃತ್ಯ ಮಾಡಿದ್ದಾರೆ.  ಸರ್ಕಾರಿ ಸೌಲಭ್ಯವನ್ನು ಈ ರೀತಿ ಅನುಚಿತವಾಗಿ ಬಳಸಿಕೊಂಡಿದ್ದಕ್ಕೆ  ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಶಿಕ್ಷಣ ಇಲಾಖೆಯ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎನ್ನಲಾಗಿದೆ.

ಶಿಕ್ಷಣ ಸಂಸ್ಥೆಯಲ್ಲಿಯೂ ಇಂತಹ ಆಚರಣೆಗಳನ್ನು ಮಾಡಬಹುದೇ? ಎಂಬುದಾಗಿ ಸ್ಥಳೀಯ ನಿವಾಸಿಗಳು ಪ್ರಶ್ನಿಸಿದ್ದಾರೆ. ಆದರೆ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಜಲೈ ಪೊಲೀಸ್ ಠಾಣೆಯ ಉಸ್ತುವಾರಿ ಮಮತಾ ಕುಮಾರಿ ಹೇಳಿದ್ದಾರೆ. “ವೈರಲ್ ವಿಡಿಯೊ ನಮ್ಮ ಗಮನಕ್ಕೆ ಬಂದಿದೆ, ಮತ್ತು ನಾವು ಪ್ರಸ್ತುತ ತನಿಖೆ ನಡೆಸುತ್ತಿದ್ದೇವೆ” ಎಂದು ಅವರು ದೃಢಪಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು  ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಲತಾ ಮಂಗೇಶ್ಕರ್ ಕುರಿತ ಈ ಸಂಗತಿಗಳು ನಿಮಗೆ ಗೊತ್ತೆ?

ಈ ಘಟನೆಯು ಬಿಹಾರದ ಸಾರ್ವಜನಿಕ ಸಂಸ್ಥೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ತನಿಖೆಯು ತೆರೆದುಕೊಳ್ಳುತ್ತಿದ್ದಂತೆ, ಈ ಗೊಂದಲದ ಘಟನೆಗೆ ಕಾರಣರಾದವರಿಗೆ ಯಾವ ಶಿಕ್ಷೆ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.