ಭಾರತದಲ್ಲಿ ಪ್ರತಿವರ್ಷ ಸುಮಾರು 20,000 ಜನರ ಪ್ರಾಣ ಹೀರುತ್ತಿರುವ ರೇಬೀಸ್ ರೋಗ (World Rabies Day 2024) ಬರುವುದು ವೈರಸ್‌ನಿಂದ. ಆದಾಗ್ಯೂ ರೇಬೀಸ್ ನಿಯಂತ್ರಣಕ್ಕೆ ಒಳಪಡುವಂಥ ರೋಗ. ಆದರೆ, ಹುಚ್ಚು ಪ್ರಾಣಿಯ (ಸಾಮಾನ್ಯವಾಗಿ ನಾಯಿ) ಕಡಿತಕ್ಕೆ ಒಳಗಾದವರು ತಕ್ಷಣವೇ ವೈದ್ಯರಲ್ಲಿ ಹೋಗಲೇಬೇಕು. ರೋಗ ಲಕ್ಷಣಗಳು ಆರಂಭವಾಗುವ ಮುನ್ನ ಚಿಕಿತ್ಸೆ ನೀಡಿದರೆ ಮಾತ್ರ ಅದು ಫಲಕಾರಿ ಆಗುತ್ತದೆ. ಒಮ್ಮೆ ಈ ವೈರಸ್ ನರಮಂಡಲವನ್ನು ಪ್ರವೇಶಿಸಿದರೆ, ಮೆದುಳಿನಲ್ಲಿ ತೀವ್ರ ಉರಿಯೂತ ಕಾಣಿಸಿಕೊಂಡು, ಮತ್ತೆ ಚಿಕಿತ್ಸೆಯೂ ಪ್ರಯೋಜನ ನೀಡದಂಥ ಸ್ಥಿತಿ ಬರುತ್ತದೆ. ಈ ರೋಗದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 28ನೇ ದಿನವನ್ನು ವಿಶ್ವ ರೇಬೀಸ್ ಜಾಗೃತಿ ದಿನವೆಂದು ಗುರುತಿಸಲಾಗಿದೆ.
ಲಕ್ಷಣಗಳು ಏನೇನು?
ಯಾವುದೇ ಹುಚ್ಚು ಪ್ರಾಣಿ ಕಚ್ಚಿದ ಅಥವಾ ಪರಚಿದ ಮೇಲೆ ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಳವರೆಗೆ ಲಕ್ಷಣ ಕಾಣಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಮೊದಲಿಗೆ ಫ್ಲೂ ಮಾದರಿಯಲ್ಲಿ ಜ್ವರ, ತಲೆನೋವು, ಗಂಟಲು ನೋವಿನಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಂತರ ಎಚ್ಚರ ತಪ್ಪುವುದು, ಪಾರ್ಶ್ವವಾಯುವಿನಂಥ ಲಕ್ಷಣಗಳು, ಸ್ನಾಯುಗಳು ತಿರುಚಿದಂತಾಗುವುದು, ನೀರನ್ನು ಕಂಡರೆ ಭಯವಾಗುವಂಥ ಲಕ್ಷಣಗಳು ಆರಂಭಗೊಳ್ಳುತ್ತವೆ. ಇವುಗಳ ಬೆನ್ನಿಗೆ ರೋಗಿ ಕೋಮಾಗೆ ಹೋಗಬಹುದು, ನಂತರ ಬದುಕುವುದು ಒಂದೆರಡು ದಿನಗಳಷ್ಟೆ. ಹಾಗಾಗಿ ಯಾವುದೇ ಪ್ರಾಣಿ ಕಚ್ಚಿದಾಗೆಲ್ಲ ತಕ್ಷಣ ವೈದ್ಯರನ್ನು ಕಾಣಲೇಬೇಕು. ಅದಕ್ಕೆ ಚುಚ್ಚುಮದ್ದಿನ ಚಿಕಿತ್ಸೆ ಪಡೆಯಲೇಬೇಕು. ರೇಬೀಸ್ ಕುರಿತಾಗಿ ಬಹಳಷ್ಟು ತಪ್ಪು ಕಲ್ಪನೆಗಳು ಜನಮಾನಸದಲ್ಲಿವೆ. ಇಂದು ಜಾಗೃತಿ ದಿನವಾಗಿರುವುದರಿಂದ ಈ ಕುರಿತ ಮಿಥ್ಯೆಗಳನ್ನು ಹೋಗಲಾಡಿಸಿ, ಅರಿವು ಮೂಡಿಸುವ ಪ್ರಯತ್ನವಿದು.
ರೇಬೀಸ್ ನಾಯಿಗಳಿಂದ ಮಾತ್ರ ಬರುತ್ತದೆ
ಹಾಗೇನಿಲ್ಲ, ಹುಚ್ಚು ಹಿಡಿದ ಯಾವುದೇ ಪ್ರಾಣಿಗಳಿಂದ ರೇಬೀಸ್ ವೈರಸ್ ಪ್ರಸರಣ ಆಗಬಹುದು. ಬಾವಲಿ, ನರಿಯಂಥ ಕಾಡು ಪ್ರಾಣಿಗಳಿಂದ, ಬೆಕ್ಕು, ಇಲಿ ಮುಂತಾದ ಮನೆಯ ಸುತ್ತಲಿನ ಪ್ರಾಣಿಗಳಿಂದ ರೇಬೀಸ್ ಹರಡಬಹುದು. ಆದರೆ ಸಾಮಾನ್ಯವಾಗಿ ಹರಡುವುದು ಹುಚ್ಚು ನಾಯಿಯಿಂದ. ಅದರರ್ಥ ನಾಯಿಯಿಂದ ಮಾತ್ರವೇ ಈ ರೋಗ ಬರುತ್ತದೆ ಎಂದಲ್ಲ.
ರೇಬೀಸ್ ಅಂಟಿದಾಕ್ಷಣ ಲಕ್ಷಣಗಳು ಕಾಣುತ್ತವೆ
ತಪ್ಪು, ರೇಬೀಸ್ ವೈರಸ್ ವರ್ಧನೆಗೊಳ್ಳಲು ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ಬೇಕಾಗುತ್ತದೆ. ಹಾಗಾಗಿ ನಾಯಿ ಕಚ್ಚಿ ಒಂದು ತಿಂಗಳವರೆಗೆ ಏನೂ ಆಗದಿದ್ದರೆ, ನಂತರ ಏನೂ ಆಗುವುದಿಲ್ಲ ಎಂದುಕೊಳ್ಳುವಂತಿಲ್ಲ. ಯಾವುದೇ ಪ್ರಾಣಿ ಕಚ್ಚಿದರೂ ತಕ್ಷಣ ವೈದ್ಯರಲ್ಲಿ ಹೋಗಿ ಚುಚ್ಚುಮದ್ದು ತೆಗೆದುಕೊಳ್ಳಲೇಬೇಕು.
ರೋಗ ಲಕ್ಷಣ ಕಂಡರೂ ರೇಬೀಸ್ ಗುಣಪಡಿಸಬಹುದು
ಇಲ್ಲ, ಒಮ್ಮೆ ರೋಗಲಕ್ಷಣಗಳು ಕಂಡ ಮೇಲೆ ಗುಣವಾಗುವ ಸಾಧ್ಯತೆ ಬಹಳ ಕಡಿಮೆ. ಹಾಗಾಗಿಯೇ ವೈರಸ್ ತನ್ನ ಲಕ್ಷಣ ತೋರುವ ಮುನ್ನ ಸರಣಿ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಕು. ಇದರಿಂದ ರೋಗ ಮುಂದುವರಿಯದಂತೆ ತಡೆಯಲು ಸಾಧ್ಯವಿದೆ. ರೋಗಿಯನ್ನು ಅಪಾಯದಿಂದ ಪಾರು ಮಾಡಬಹುದಾಗಿದೆ.
ಪ್ರಾಣಿಪ್ರಿಯರಿಗೆ ಮಾತ್ರವೇ ಇದು ಅಂಟುತ್ತದೆ
ಹಾಗೆನ್ನಲಾಗದು, ಪ್ರಾಣಿಗಳೊಂದಿಗೆ ಆಕಸ್ಮಿಕ ಸಂಪರ್ಕಕ್ಕೆ ಯಾರು ಬೇಕಿದ್ದರೂ ಬರಬಹುದಲ್ಲ. ಮನೆಯಲ್ಲಿ ಸಾಕಿದ ಪ್ರಾಣಿಗಳಿಗಾದರೂ ಸಾಮಾನ್ಯವಾಗಿ ಚುಚ್ಚುಮದ್ದುಗಳನ್ನು ಹಾಕಿಸಲಾಗುತ್ತದೆ. ಆದರೆ ಬೀದಿಯಲ್ಲಿ ಅಥವಾ ತಮ್ಮಷ್ಟಕ್ಕೆ ತಾವಿರುವ ಪ್ರಾಣಿಗಳಿಗೆ ಇಂಥ ಚಿಕಿತ್ಸೆಗಳು ದೊರೆತಿರುವುದಿಲ್ಲ. ಹಾಗಾಗಿ ಯಾರೇ ಪ್ರಾಣಿಗಳ ಸಂಪರ್ಕಕ್ಕೆ ಯಾವುದೇ ರೀತಿಯಲ್ಲಿ ಬಂದರೂ ಉದಾಸೀನ ಮಾಡುವುದಲ್ಲ.
ಈ ಸುದ್ದಿಯನ್ನೂ ಓದಿ | Health Tips: ಮನೆಗೆ ಬಂದ ತಕ್ಷಣ ಪಾದಗಳನ್ನು ತೊಳೆಯುವುದರಿಂದ ಸಿಗುತ್ತವೆ ಹಲವು ಲಾಭಗಳು…
ಈ ರೋಗ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಅಗತ್ಯ ಕ್ರಮಗಳನ್ನು ಎಲ್ಲರೂ ಅನುಸರಿಸುವುದು ಅಗತ್ಯ. ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ತಪ್ಪದೆ ರೇಬೀಸ್ ನಿರೋಧಕ ಲಸಿಕೆ ಹಾಕಿಸಿ. ಈ ರೋಗ ಪ್ರಸರಣಕ್ಕೆ ಪ್ರಾಣಿಗಳು ಕಚ್ಚಬೇಕೆಂದಿಲ್ಲ, ಜೋರಾಗಿ ಪರಚಿದರೂ ಅಪಾಯ ಆಗಬಹುದು. ಹಾಗಾಗಿ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯಿರಿ.