Saturday, 28th September 2024

Bengaluru Woman Murder: ಬೈಕಿನಲ್ಲೇ 1500 ಕಿಲೋಮೀಟರ್‌ ಪರಾರಿಯಾಗಿದ್ದ ಕೊಲೆಗಾರ!

Bengaluru murder

ಬೆಂಗಳೂರು: ಬೆಂಗಳೂರಿನ ವೈಯಾಲಿಕಾವಲ್​ ನಗರ ನಿವಾಸಿ ಮಹಾಲಕ್ಷ್ಮೀ (Mahalakshmi murder Case) ಎಂಬಾಕೆಯನ್ನು ಕೊಲೆ (Bengaluru Woman Murder Case)​ ಮಾಡಿದ್ದ ಆರೋಪಿ, ಕೊಲೆಯ ಬಳಿಕ (Bangalore crime news) 1550 ಕಿಲೋಮೀಟರ್‌ಗಳಷ್ಟು ದೂರ ಬೈಕ್‌ ರೈಡ್‌ ಮಾಡಿಕೊಂಡು ಪರಾರಿಯಾಗಿದ್ದ ಎಂದು ಗೊತ್ತಾಗಿದೆ.

ಬಸ್ಸು ಅಥವಾ ರೈಲಿನಲ್ಲಿ ಹೋದರೆ ದಾರಿಯಲ್ಲಿ ತನ್ನನ್ನು ಪೊಲೀಸರು ಬಂಧಿಸಬಹುದು ಎಂದು ಭಯ ಆತನಿಗಿತ್ತು. ಹೀಗಾಗಿ ಆರೋಪಿ ಮುಕ್ತಿ ರಂಜನ್​ ರಾಯ್​​ ತನ್ನ ಬಜಾಜ್ ಪ್ಲಾಟಿನಂ ಬೈಕ್​ನಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮಾರ್ಗವಾಗಿ 1,550 ಕಿಮೀ ಸಾಗಿ ತನ್ನ ಊರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್​ ಮೊದಲು ಹೆಬ್ಬಗೋಡಿಯ ಸಹೋದರನ ಮನೆಗೆ ತೆರಳಿದ್ದ. ತಮ್ಮನಿಗೆ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಿ, ಯಾರಿಗೂ ಈ ವಿಚಾರ ಹೇಳಬೇಡ, ಬೇಗ ರೂಮ್​ ಖಾಲಿ ಮಾಡು ಎಂದು ಹೇಳಿ ಬೈಕ್​ನಲ್ಲೇ ಒಡಿಶಾಗೆ ತೆರಳಿದ್ದ. ಊರಿಗೆ ತಲುಪಿದ ಬಳಿಕ ಆರೋಪಿ ರಂಜನ್ ಕೊಲೆ ಮಾಡಿದ ವಿಚಾರವನ್ನು​ ತಾಯಿಗೆ ತಿಳಿಸಿದ್ದ. ತಾಯಿ ಕೂಡ ಆತನಿಗೆ ಪರಾರಿಯಾಗಲು ಸಹಕರಿಸಿದ್ದಳು ಎಂದು ಗೊತ್ತಾಗಿದೆ. ಕೊನೆಗೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಅಸಾಧ್ಯ ಎಂದು ಗೊತ್ತಾದ ಬಳಿಕ ಆತ ನೇಣಿಗೆ ಶರಣಾಗಿದ್ದಾನೆ.

ಮಹಾಲಕ್ಷ್ಮೀ ಕೊಲೆಗೆ ಸಂಬಂಧಿಸಿಂತೆ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ ದಯಾನಂದ್ (B Dayananda)​ ಮಾತನಾಡಿ, ಪ್ರಕರಣ ತನಿಖೆ ಇನ್ನೂ ನಡೆಯುತ್ತಿದೆ. ಮಹಾಲಕ್ಷ್ಮೀ ಕೊಲೆ ಮದುವೆ ವಿಚಾರವಾಗಿ ನಡೆದಿದೆ ಎಂಬ ಅಂಶ ತಿಳಿದು ಬಂದಿದೆ. ಆದರೆ, ಇದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಕಮಿಷನರ್​ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಆರೋಪಿ ಮುಕ್ತಿ ರಂಜನ್​ ರಾಯ್​​ ಒರಿಸ್ಸಾದ ಭದ್ರಪ್ ಜಿಲ್ಲೆ‌ಯ ದುಸ್ತ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್ ನೋಟ್‌ ದೊರೆತಿದೆ. ಆರೋಪಿಯ ತಮ್ಮ ಬೆಂಗಳೂರಿನಲ್ಲೇ ಇದ್ದಾರೆ. ಅವನ ಹೇಳಿಕೆಯನ್ನು ಕೂಡ 164 ಅಡಿಯಲ್ಲಿ ದಾಖಲು‌ ಮಾಡಲಾಗುತ್ತದೆ. ಆರೋಪಿಯ ಆತ್ಮಹತ್ಯೆ ಬಗ್ಗೆ ಮಾಹಿತಿ ಸಿಗಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: Bengaluru Woman Murder: ನನ್ನನ್ನೂ ಸೇರಿ ನಾಲ್ವರಿಗೆ ಮೋಸ ಮಾಡಿದಳು ಮಹಾಲಕ್ಷ್ಮಿ: ಪ್ರೇಮವಂಚಿತ ಕೊಲೆಗಾರನ ಪ್ರಲಾಪ