Saturday, 28th September 2024

IND vs BAN: ಒಂದೂ ಎಸೆತ ಕಾಣದೆ ರದ್ದುಗೊಂಡ 2ನೇ ದಿನದಾಟ

IND vs BAN

ಕಾನ್ಪುರ: ಇಲ್ಲಿನ ಗ್ರೀನ್ ಪಾರ್ಕ್(Green Park) ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ(IND vs BAN) ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. 2ನೇ ದಿನವಾದ ಶನಿವಾರ ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿತ್ತು. ಆದರೆ ನಿನ್ನೆಯಿಂದ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಮೈದಾನ ಸಂಪೂರ್ಣ ಒದ್ದೆಗೊಂಡ ಕಾರಣ ಕೊನೆಗೆ ದಿನದಾಟವನ್ನು ರದ್ದು ಎಂದು ಘೋಷಿಸಲಾಯಿತು. ಪಂದ್ಯವನ್ನಾಡಲು ಸ್ಟೇಡಿಯಂಗೆ ಬಂದಿದ್ದ ಉಭಯ ತಂಡಗಳ ಆಟಗಾರು ನಿರೀಕ್ಷೆಯೊಂದಿಗೆ ಮತ್ತೆ ಹೋಟೆಲ್‌ಗೆ ತೆರಳಿದರು.

ಮೊದಲ ದಿನವಾದ ಶುಕ್ರವಾರ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಗಿತ್ತು. ವೇಗಿ ಆಕಾಶ್ ದೀಪ್ (34ಕ್ಕೆ 2) ಬಿಗಿ ದಾಳಿಯ ಮೂಲಕ ಆರಂಭಿಕ ಕಡಿವಾಣ ಹೇರಿದರೆ, ಬಳಿಕ ಮಾಮಿನುಲ್ ಹಕ್ (40* ರನ್, 81 ಎಸೆತ, 7 ಬೌಂಡರಿ) ಹಾಗೂ ನಾಯಕ ನಜ್ಮೂಲ್ ಹೊಸೈನ್ ಶಾಂಟೋ (31 ರನ್, 57 ಎಸೆತ, 6 ಬೌಂಡರಿ) ಜತೆಯಾಟದ ನೆರವಿನಿಂದ ಬಾಂಗ್ಲಾದೇಶ ಚೇತರಿಸಿಕೊಂಡಿತು. ದ್ವಿತೀಯ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತು. 3ನೇ ದಿನವೂ ಮಳೆ ಅಡಚಣೆಯ ಭೀತಿ ಕಾಡುತ್ತಿದೆ.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಹಂಬಲದಲ್ಲಿರುವ ಭಾರತ ತಂಡಕ್ಕೆ ಪಂದ್ಯ ರದ್ದುಗೊಂಡರೆ ಕೊಂಚ ಹಿನ್ನಡೆಯಾಗಬಹುದು. ಮುಂದಿನ ತಿಂಗಳು ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಯನ್ನು ಗೆದ್ದರೆ ಅಗ್ರಸ್ಥಾನವನ್ನು ಗಟ್ಟಿಗೊಳಿಸಬಹುದು.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಪಂದ್ಯದ 3ನೇ ದಿನದ ಆಟಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಭಾನುವಾರ ಶೇ.50 ಮಳೆ ಬೀಳುವ ನಿರೀಕ್ಷೆ ಇದೆ. ನಾಲ್ಕನೇ ಮತ್ತು ಐದನೆ ದಿನ ಮಳೆ ಭೀತಿ ಕೊಂಚ ಕಡಿಮೆ ಇದೆ. ಇನ್ನು ಎರಡು ದಿನಗಳ ಪಂದ್ಯ ನಡೆದರೆ ಪಂದ್ಯ ಡ್ರಾದೊಂದಿಗೆ ಮುಕ್ತಾಯ ಕಾಣಬಹುದು. ಟೆಸ್ಟ್‌ ಸರಣಿ ಮುಕ್ತಾಯದ ಬಳಿಕ ಇತ್ತಂಡಗಳ ನಡವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಈ ಸರಣಿಯ ಮೊದಲ ಪಂದ್ಯ ಅಕ್ಟೋಬರ್‌ 6 ರಂದು ಮಧ್ಯಪ್ರದೇಶದ ಗ್ವಾಲಿಯಾರ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ IND vs BAN: ಬುಮ್ರಾ ಬೌಲಿಂಗ್‌ ಶೈಲಿ ಹೇಗೆಂದು ತೋರಿಸಿಕೊಟ್ಟ ಕೊಹ್ಲಿ, ಜಡೇಜಾ; ವಿಡಿಯೊ ವೈರಲ್‌