Saturday, 28th September 2024

Haryana Election : ಉಚಿತ ವಿದ್ಯುತ್‌, ಜಾತಿಗಣತಿ ಭರವಸೆ; ಹರಿಯಾಣ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

Haryana Election

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ (Haryana Election ) ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ ತನ್ನ ಪ್ರಣಾಳಿಕೆ ಪ್ರಕಟಿಸಿದೆ. ಉಚಿತ ವಿದ್ಯುತ್ (Free Electricity), ಉಚಿತ ವೈದ್ಯಕೀಯ ಚಿಕಿತ್ಸೆ, ಮಹಿಳೆಯರಿಗೆ ಆರ್ಥಿಕ ನೆರವು, ರೈತರಿಗೆ ಬೆಂಬಲ ಬೆಲೆ ಖಾತರಿ ಮತ್ತು ರಾಜ್ಯದಲ್ಲಿ ಜಾತಿ ಗಣತಿ ನಡೆಸುವುದು ಸೇರಿದಂತೆ ತನ್ನ ಯಶಸ್ಸಿನ ಮಾದರಿಯನ್ನು ಇಲ್ಲಿನ ಚುನಾವಣೆ ಪ್ರಣಾಳಿಕೆಯಲ್ಲೂ ಸೇರಿಸಲಾಗಿದೆ. ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಎಚ್ಪಿಸಿಸಿ) ಅಧ್ಯಕ್ಷ ಉದಯ್ ಭಾನ್ ಅವರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ಪ್ರಣಾಳಿಕೆಯ ಪ್ರಮುಖ ಅಂಶಗಳಲ್ಲಿ, ಕಾಂಗ್ರೆಸ್ ಪಕ್ಷವು ಹರಿಯಾಣದ ಪ್ರತಿ ಕುಟುಂಬಕ್ಕೆ 300 ಯುನಿಟ್ ಉಚಿತ ವಿದ್ಯುತ್ ಮತ್ತು 25 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಭರವಸೆ ನೀಡಿದೆ.

ಕರ್ನಾಟಕದಲ್ಲಿರುವ ಗೃಹಲಕ್ಷ್ಮೀ ಯೋಜನೆ ರೀತಿಯಲ್ಲೇ ರಾಜ್ಯದಲ್ಲಿ 18-60 ವರ್ಷ ವಯಸ್ಸಿನ ಮಹಿಳೆಯರಿಗೆ ತಿಂಗಳಿಗೆ 2000 ರೂ.ಗಳನ್ನು ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಪ್ರಣಾಳಿಕೆಯಲ್ಲಿ ಗ್ಯಾಸ್ ಸಿಲಿಂಡರ್‌ಗೆ 500 ರೂಪಾಯಿ ಮಾಡುವುದಾಗಿಯೂ ಹೇಳಲಾಗಿದೆ.

ಲೋಕಸಭಾ ಚುನಾವಣೆಯಂತೆಯೇ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಬೆಳೆಗಳಿಗೆ ತಕ್ಷಣದ ಪರಿಹಾರದ ಕಾನೂನು ಖಾತರಿ ನೀಡಿದೆ. ಕಾಂಗ್ರೆಸ್ ಪಕ್ಷವು ರೈತ ಆಯೋಗ ರಚಿಸುವುದಾಗಿ ಮತ್ತು ರೈತರಿಗೆ ಡೀಸೆಲ್ ಮೇಲಿನ ಸಬ್ಸಿಡಿಗಳನ್ನು ನೀಡುವುದಾಗಿ ಹೇಳಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಬಡ ಕುಟುಂಬಗಳಿಗೆ 200 ಚರದ ಅಡಿಯ ಭೂಮಿ ಮತ್ತು ಎರಡು ಕೋಣೆಗಳನ್ನು ಹೊಂದಿರುವ ಮನೆ ನೀಡುವುದಾಗಿ ಭರವಸೆ ನೀಡಿದೆ. .

ಜಾತಿ ಆಧಾರಿತ ಸಮೀಕ್ಷೆ

ಪ್ರಣಾಳಿಕೆಯ ಮತ್ತೊಂದು ಪ್ರಮುಖ ಅಂಶವೆಂದರೆ ರಾಜ್ಯದಲ್ಲಿ ಜಾತಿ ಆಧಾರಿತ ಸಮೀಕ್ಷೆ ನಡೆಸುವ ಭರವಸೆ ನೀಡಿರುವುದು. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ದೀರ್ಘಕಾಲದಿಂದ ಧ್ವನಿ ಎತ್ತುತ್ತಿದೆ. ಹೆಚ್ಚುವರಿಯಾಗಿ ಕೆನೆಪದರ ಮಿತಿಯನ್ನು 10 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಹೇಳಿಕೊಂಡಿದೆ. ಯುವಕರಿಗೆ 2 ಲಕ್ಷ ಕಾಯಂ ಉದ್ಯೋಗಗಳನ್ನು ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ರಾಜ್ಯವನ್ನು ಮಾದಕವಸ್ತು ಮುಕ್ತವಾಗಿಸುವ ಭರವಸೆ ನೀಡಿದೆ.

ಇದನ್ನೂ ಓದಿ: Swiggy IPO : ಐಪಿಒಗೆ ಮುಂಚಿತವಾಗಿಯೇ ಸ್ವಿಗ್ಗಿಯಲ್ಲಿ ಹೂಡಿಕೆ ಮಾಡಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್

ಕೇಂದ್ರಕ್ಕೆ ವಿರುದ್ಧವಾಗಿ, ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಪುನಃಸ್ಥಾಪಿಸುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು, ಹಿರಿಯ ನಾಗರಿಕರು, ಅಂಗವಿಕಲರು ಮತ್ತು ವಿಧವೆಯರಿಗೆ ಪಿಂಚಣಿ, ಅಂಗವಿಕಲರ ಪಿಂಚಣಿ ಮತ್ತು ವಿಧವಾ ಪಿಂಚಣಿ ಅಡಿಯಲ್ಲಿ ಕ್ರಮವಾಗಿ 6000 ರೂ.ಗಳನ್ನು ನೀಡುವುದಾಗಿ ಪಕ್ಷ ಭರವಸೆ ನೀಡಿದೆ.

ಪ್ರ ಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ, ಸಾಕಷ್ಟು ಕಠಿಣ ಪರಿಶ್ರಮದ ನಂತರ ಪ್ರಣಾಳಿಕೆ ರಚಿಸಲಾಗಿದೆ ಎಂದು ಹೇಳಿದರು. ಪ್ರಣಾಳಿಕೆಯಲ್ಲಿನ ಬಹಳಷ್ಟು ವಿಷಯಗಳನ್ನು ರಾಜಸ್ಥಾನ ಮತ್ತು ಇತರ ಹಲವಾರು ರಾಜ್ಯಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಅಕ್ಟೋಬರ್‌ 5ರಿಂದ ಚುನಾವಣೆ

ಹರಿಯಾಣದಲ್ಲಿ ಅಕ್ಟೋಬರ್ 5 ರಂದು 90 ಸದಸ್ಯರ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. 2019ರಲ್ಲಿ ಬಿಜೆಪಿ 40 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 30 ಸ್ಥಾನಗಳನ್ನು ಗೆದ್ದಿತ್ತು.