Friday, 22nd November 2024

Electoral bonds: ನಿರ್ಮಲಾ ಸೀತಾರಾಮನ್‌, ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌

Electoral bonds

ಬೆಂಗಳೂರು: ಚುನಾವಣಾ ಬಾಂಡ್‌ಗಳ (Electoral Bonds) ಮೂಲಕ‌ ಹಣ ಸುಲಿಗೆ ಆರೋಪದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ತಿಲಕ್‌ ನಗರದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆದರ್ಶ್ ಅಯ್ಯರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಐಪಿಸಿ ಸೆಕ್ಷನ್‌ ಐಪಿಸಿ ಸೆಕ್ಷನ್‌ 34 ಅಡಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ ಎ1 ಆಗಿ ನಿರ್ಮಲಾ ಸೀತಾರಾಮನ್‌, ಎ2 ಇಡಿ ಅಧಿಕಾರಿಗಳು, ಎ 3 ಜೆ.ಪಿ. ನಡ್ಡಾ, ಎ4 ನಳಿನ್‌ ಕುಮಾರ್‌ ಕಟೀಲ್‌, ಎ5 ಬಿ.ವೈ. ವಿಜಯೇಂದ್ರ, ಎ6 ಆಗಿ ಬಿಜೆಪಿ ಕಚೇರಿ ಕಾರ್ಯನಿರ್ವಾಹಕರ ಹೆಸರನ್ನು ಉಲ್ಲೇಖಿಸಲಾಗಿದೆ.

ಚುನಾವಣಾ ಬಾಂಡ್‌ಗಳ ಮೂಲಕ‌ ಹಣ ಸುಲಿಗೆ ಆರೋಪಿಸಿ ಆದರ್ಶ್ ಅಯ್ಯರ್ ಎಂಬವರು ದೂರು ದಾಖಲಿಸಲು ಅನುಮತಿ ಕೋರಿ ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ಪಿಸಿಆರ್ ದಾಖಲಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ಬಳಿಕ ಕೇಸ್ ದಾಖಲಿಸಲು ಕೋರ್ಟ್ (Bengaluru Court) ಸೂಚನೆ ನೀಡಿ, ಮುಂದಿನ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್​ 10ಕ್ಕೆ ಮುಂದೂಡಿತ್ತು.

ಐಪಿಸಿ ಸೆಕ್ಷನ್‌ 156(3), 383, 120(ಬಿ) ಅಡಿ ಎಫ್​​ಐಆರ್ ದಾಖಲು ಮಾಡಲು ಬೆಂಗಳೂರಿನ ತಿಲಕ್‌ನಗರ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿತ್ತು. ಆದರ್ಶ್ ಅಯ್ಯರ್ ಅವರು ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಸಹ ಅಧ್ಯಕ್ಷರಾಗಿದ್ದು, ಎಲೆಕ್ಟೋರಲ್ ಬಾಂಡ್ ಮೂಲಕ ಬೆದರಿಸಿ ಸುಲಿಗೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

ಈ ಸುದ್ದಿಯನ್ನೂ ಓದಿ | DK Shivakumar: ಹಳ್ಳಿ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು: ಡಿ.ಕೆ. ಶಿವಕುಮಾರ್

ಕಳೆದ ಏಪ್ರಿಲ್​​ನಲ್ಲಿ ಆದರ್ಶ್ ಅವರು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೇಂದ್ರ ಸಚಿವೆ ವಿರುದ್ಧ ಮಾತ್ರವಲ್ಲದೇ ಇ.ಡಿ ಅಧಿಕಾರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ನಾಯಕರ ಹೆಸರು ಉಲ್ಲೇಖ ಮಾಡಿದ್ದರು. ಇದೀಗ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಚಿವ ಜಮೀರ್‌ ಅಹ್ಮದ್‌ಗೂ ಸಂಕಷ್ಟ; ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ

ಬೆಂಗಳೂರು: ಮುಡಾ ಹಗರಣದಲ್ಲಿ (Muda Case) ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಸಚಿವ ಜಮೀರ್‌ ಅಹ್ಮದ್‌ ಅವರಿಗೂ ಸಂಕಷ್ಟ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ್ದ ಜಮೀರ್ ಅಹ್ಮದ್ (Zameer Ahmed) ಅವರು, ಇದು ರಾಜಕೀಯ ಪ್ರೇರಿತ ತೀರ್ಪು ಎಂದು ಹೇಳಿದ್ದರು. ಹೀಗಾಗಿ ಅವರ ವಿರುದ್ಧ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ.

ಸಿಎಂ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ ನ್ಯಾಯಾಲಯದ ಆದೇಶದ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಜಮೀರ್ ಅಹ್ಮದ್ ಅವರ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ, ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Congress guarantees: 5 ಗ್ಯಾರಂಟಿಗಳು ರಾಜ್ಯ ಸ್ಮಶಾನ ಆಗದಂತೆ ತಡೆದಿವೆ: ಪುರುಷೋತ್ತಮ ಬಿಳಿಮಲೆ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಜಮೀರ್ ಅಹ್ಮದ್ ಅವರು, ಇದು ರಾಜಕೀಯ ಪ್ರೇರಿತ ಕೋರ್ಟ್ ತೀರ್ಪು, ರಾಜಕೀಯ ಆದೇಶ ಎಂದು ಲಘುವಾಗಿ ಮಾತನಾಡಿದ್ದರು. ಹೀಗಾಗಿ ಅವರಿಗೆ ಸಂಕಷ್ಟ ಎದುರಾಗಿದೆ.