Friday, 22nd November 2024

Rahul Gandhi : ಅಯೋಧ್ಯೆ ಪ್ರಾಣಪ್ರತಿಷ್ಠಾಪನೆಯಲ್ಲಿ ಹಾಡು, ನೃತ್ಯ ಎಲ್ಲವೂ ಇತ್ತು; ರೈತರಿಗೆ ಆಹ್ವಾನವೇ ಇರಲಿಲ್ಲ; ರಾಹುಲ್

Rahul Gandhi

ನವದೆಹಲಿ: 2023ರ ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಪ್ರಾಣಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿರುವ ಹೇಳಿಕೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಕಾರ್ಯಕ್ರಮಕ್ಕೆ ರೈತರನ್ನು ಆಹ್ವಾನಿಸಲೇ ಇಲ್ಲ. ಮುಖ್ಯವಾಗಿ ಉದ್ಯಮಿಗಳು ಮತ್ತು ನಟರನ್ನೇ ಕರೆಯಲಾಗಿದೆ ಎಂದು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಟೀಕಿಸಿದ್ದಾರೆ. ಇದಕ್ಕೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.

ಹರಿಯಾಣದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಹಿಸಾರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಎಲ್ಲವೂ ಇತ್ತು. ಆದರೆ, ರೈತರಿಗೆ ಪ್ರವೇಶ ಅಥವಾ ಆಹ್ವಾನ ನೀಡಲಿಲ್ಲ ಎಂದು ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿಬಿಜೆಪಿ ಅಯೋಧ್ಯೆಯಲ್ಲಿ ಸೋಲಲು ಇದು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿಯವರು ಅಯೋಧ್ಯೆಯಲ್ಲಿ ಯಾವ ಕೆಲಸಗಾರನನ್ನು ಅಥವಾ ರೈತನನ್ನು ಕರೆದಿದ್ದಾರೆ. ಹಾಡು ಮತ್ತು ನೃತ್ಯವಿತ್ತು. ಇದು ವಾಸ್ತವ” ಎಂದು ರಾಹುಲ್ ಹೇಳಿದ್ದಾರೆ.

ಬಿಜೆಪಿ ತಿರುಗೇಟು

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ ” ರಾಹುಲ್ ಗಾಂಧಿ ರಾಮ ಮಂದಿರ ಧಾರ್ಮಿಕ ಪ್ರಾಣ ಪ್ರತಿಷ್ಠಾನವನ್ನು ‘ನೃತ್ಯ’, ‘ನಾಚ್ ಗಾನಾ’ ಕಾರ್ಯಕ್ರಮ ಎಂದು ಹೇಳುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಬೇರೆ ಯಾವುದೇ ಜನರ ನಂಬಿಕೆ ಮತ್ತು ಅವರ ಪವಿತ್ರ ಸಂದರ್ಭಗಳ ಬಗ್ಗೆ ಇದನ್ನು ಹೇಳಬಹುದೇ? ರಾಹುಲ್ ಅವರ ಕುಟುಂಬವು ರಾಮನ ಅಸ್ತಿತ್ವ, ರಾಮ ಮಂದಿರವನ್ನು ವಿರೋಧಿಸಿದೆ. ಅವರ ಸರ್ಕಾರವು ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಿದೆ. ಅವರು ದ್ವಾರಕಾ ಪೂಜೆಯನ್ನು ನಾಟಕ ಎಂದು ಕರೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Narendra Modi : ಸರ್ಜಿಕಲ್ ಸ್ಟ್ರೈಕ್‌ನಿಂದ ಉಗ್ರ ಪೋಷಕರಿಗೆ ಆಘಾತವಾಗಿದೆ; ಮೋದಿ ಲೇವಡಿ

ಪ್ರಾಣ ಪ್ರತಿಷ್ಠಾ ಸಮಾರಂಭದ ಬಗ್ಗೆ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ಛತ್ತೀಸ್‌ಗಢದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಜನವರಿ 22 ರಂದು ನಡೆದ ರಾಮ ಮಂದಿರ ಸಮಾರಂಭದಲ್ಲಿ ಯಾವುದೇ ಬಡವರನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ್ದರು.

ರಾಮ ಮಂದಿರ ಸಮಾರಂಭದಂತಹ ಕಾರ್ಯಕ್ರಮಗಳಲ್ಲಿ ಹಾಜರಿದ್ದ ಗಣ್ಯ ವ್ಯಕ್ತಿಗಳ ನಡುವಿನ ಅಸಮಾನತೆ ಮತ್ತು ಸಾಮಾನ್ಯ ಜನರು ಎದುರಿಸುತ್ತಿರುವ ದೈನಂದಿನ ಹೋರಾಟಗಳ ನಡುವೆ ಅಸಮಾನತೆ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.