Saturday, 28th September 2024

J&K news : ಹೆಜ್ಬುಲ್ಲಾದ ಹಸನ್ ನಸ್ರಲ್ಲಾ ಹತ್ಯೆ ವಿರೋಧಿಸಿ ಕಾಶ್ಮೀರದ ಶ್ರೀನಗರದಲ್ಲಿ ಪ್ರತಿಭಟನೆ

J&K news

ಬೆಂಗಳೂರು: ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (Hassan Nasrallah) ಹತ್ಯೆಯಾಗಿರುವುದನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಬುಡ್ಗಾಮ್ ಪ್ರದೇಶಗಳಲ್ಲಿ (J&K news) ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಹಿಜ್ಬುಲ್ಲಾ ಗ್ರೂಪ್ ತನ್ನ ಸ್ಥಾಪಕರಲ್ಲಿ ಒಬ್ಬರಾದ ನಸ್ರಲ್ಲಾ ಅವರ ಸಾವನ್ನು ದೃಢಪಡಿಸಿದ ಬಳಿಕ ಕೆಲವು ಸಂಘಟನೆಗಳು ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿವೆ.

ಎಎನ್ಐ ಹಂಚಿಕೊಂಡ ವೀಡಿಯೊದಲ್ಲಿ, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ಹಿಜ್ಬುಲ್ಲಾ ಮತ್ತು ಪ್ಯಾಲೆಸ್ತೀನ್‌ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಶ್ರೀನಗರದಲ್ಲಿ, ಹಸನಾಬಾದ್, ರೈನಾವರಿ, ಸೈದಕಡಲ್, ಮೀರ್ ಬೆಹ್ರಿ ಮತ್ತು ಅಶೈಬಾಗ್ ಪ್ರದೇಶಗಳಲ್ಲಿ ಜನರು ರಸ್ತೆಗಳಲ್ಲಿ ಜಮಾಯಿಸಿ ಕಪ್ಪು ಬಾವುಟಗಳನ್ನು ಹಿಡಿದು ಇಸ್ರೇಲ್ ಮತ್ತು ಯುಎಸ್ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ಅಂಜುಮನ್-ಎ-ಶರೀ ಅಧ್ಯಕ್ಷ ಶಿಯಾನ್ ಅಗಾ ಸೈಯದ್ ಹಸನ್ ಮೊಸವಿ ಅಲ್ ಸಫಾವ್ ಮಾತನಾಡಿ, ಹಸನ್ ನಸ್ರಲ್ಲಾ ಸಾವಿಗೆ ಅವರು ಎಷ್ಟು ಶೋಕಿಸಿದರೂ ಕಡಿಮೆ ಎಂದು ಹೇಳಿದ್ದಾರೆ.

“ಶಾಂತಿ ತರುವುದು ಅವರ ಧ್ಯೇಯವಾಗಿತ್ತು. ಅವರು ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದರು. ಅದನ್ನುಅರಿಯದೇ ಅವರು ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ಯಾಲೆಸ್ತೀನ್‌ ಜನರಿಗೆ ಅವರ ಜಾಗ ಮುಕ್ತವಾಗಬೇಕೆಂದು ಅವರು ಬಯಸಿದ್ದರು” ಎಂದು ಮೊಸಾವಿ ಅಲ್ ಸಫಾವ್ ಹೇಳಿದ್ದಾರೆ.

ಇದನ್ನೂ ಓದಿ: Hassan Nasrallah: ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಹೊಡೆದುರುಳಿಸಿದ ಇಸ್ರೇಲ್‌ ಸೇನೆ

ಅವರ ಸಾವಿನ ನಷ್ಟ ಅಳೆಯಲು ಸಾಧ್ಯವಿಲ್ಲ ಆದರೆ ಸಾವಿರಾರು ನಸ್ರಲ್ಲಾಗಳು ಜನಿಸುತ್ತಾರೆ ಮತ್ತು ಅವರು ಕೈಗೊಂಡ ಕಾರ್ಯವನ್ನು ಮುಂದೆ ತೆಗೆದುಕೊಂಡು ಹೋಗುತ್ತಾರೆ ಮತ್ತು ಯಶಸ್ಸನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.

ಮೆಹಬೂಬಾ ಶೋಕಾಚರಣೆ

ಲೆಬನಾನ್ ಮತ್ತು ಗಾಜಾದ ಹುತಾತ್ಮರಿಗೆ, ವಿಶೇಷವಾಗಿ ಹಸನ್ ನಸರುಲ್ಲಾ ಅವರಿಗೆ ಬೆಂಬಲವಾಗಿ ಭಾನುವಾರ ತಮ್ಮ (ಚುನಾವಣಾ) ಪ್ರಚಾರ ರದ್ದುಗೊಳಿಸುತ್ತಿರುವುದಾಗಿ ಪಿಡಿಎಫ್ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಪಾರ ದುಃಖ ಮತ್ತು ಅನುಕರಣೀಯ ಪ್ರತಿರೋಧದ ಈ ಸಮಯದಲ್ಲಿ ನಾವು ಪ್ಯಾಲೆಸ್ತೀನ್‌ ಲೆಬನಾನ್ ಜನರೊಂದಿಗೆ ನಿಲ್ಲುತ್ತೇವೆ ಎಂದು ಮುಫ್ತಿ ಹೇಳಿದ್ದಾರೆ.