Sunday, 24th November 2024

Laptop theft case: ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‌ಟಾಪ್‌ ಕಳ್ಳತನ; ಸಿಬ್ಬಂದಿ ಸೇರಿ 26 ಜನರ ಬಂಧನ

Laptop theft case

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕಾರ್ಮಿಕ ಇಲಾಖೆಯಲ್ಲಿ ನಡೆದಿದ್ದ ಬರೋಬ್ಬರಿ
50 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣದಲ್ಲಿ (Laptop theft cas) ಒಟ್ಟು 26 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ, ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸರಿಂದ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಕ್ಕಳಿಗಾಗಿ ಕೊಡಬೇಕಾಗಿದ್ದ 101 ಲ್ಯಾಪ್‌ಟಾಪ್ ಕಳುವಾಗಿದ್ದವು. ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಸೆಪ್ಟೆಂಬರ್‌ನಲ್ಲಿ ಬೆಳಗಾವಿಯಿಂದ ತಂದು ಕಾರ್ಮಿಕ ಇಲಾಖೆಯಲ್ಲಿ ಇಡಲಾಗಿತ್ತು. ಆಗಸ್ಟ್‌ನಲ್ಲಿ ಪರಿಶೀಲನೆ ಮಾಡಿದಾಗ ಕಳುವಾಗಿದ್ದು ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ನೀಡಬೇಕಿದ್ದ ಲ್ಯಾಪ್ ಟಾಪ್‌ಗಳು ಇವಾಗಿವೆ ಎಂದು ತಿಳಿಸಿದ್ದಾರೆ.

ಸುಮಾರು 55 ಲಕ್ಷ ಮೌಲ್ಯದ ಎಚ್.ಪಿ ಕಂಪನಿಯ ಲ್ಯಾಪ್ ಟಾಪ್‌ಗಳು ಕಳುವಾಗಿದ್ದವು. ತನಿಖೆ ಕೈಗೊಂಡು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದ್ದು, ಕಾರ್ಮಿಕ ಇಲಾಖೆಯ ದೀಪಕ್ ಮತ್ತು ಕೃಷ್ಣ ಕಳ್ಳತನ ಮಾಡಿದ್ದು ಗೊತ್ತಾಗಿದೆ.

ಎಸ್‌ಡಿಎ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 4 ಸಿಬ್ಬಂದಿ ಕಳ್ಳತನದಲ್ಲಿ ಭಾಗಿಯಾಗಿದ್ದು, 6 ತಿಂಗಳು ಅವಧಿಯಲ್ಲಿ 101 ಲ್ಯಾಪ್ ಟಾಪ್‌ಗಳನ್ನು ಕದ್ದಿದ್ದಾರೆ. ಕಚೇರಿಯಲ್ಲಿಟ್ಟಿದ್ದ ಲ್ಯಾಪ್‌ಟಾಪ್‌ಗಳನ್ನು ಕಿಟಕಿಯಿಂದ ಇಳಿದು ಕಳವು ಮಾಡಿ, ಹಂತ ಹಂತವಾಗಿ ಮಾರಾಟ ಮಾಡಿದ್ದಾರೆ. ಕದ್ದ ಲ್ಯಾಪ್ ಟಾಪ್ ಖರೀದಿಸಿದ್ದ 20 ಜನರ ಬಂಧನವಾಗಿದೆ. ಕಾರ್ಮಿಕ ಇಲಾಖೆಯ ಆರು ಜನ ಸೇರಿ, ಒಟ್ಟು 26 ಜನರನ್ನ ಬಂಧಿಸಲಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | HD Kumaraswamy: ಗ್ಯಾಂಗ್‌ ಕಟ್ಟಿಕೊಂಡು ಜನರಿಂದ ಸುಲಿಗೆ; ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಎಚ್‌ಡಿಕೆ ಆರೋಪ

83 ಲ್ಯಾಪ್ ಟಾಪ್, ಎರಡು ಆಟೋ, ಎರಡು ಬೈಕ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆದಿದ್ದೇವೆ. ಹಿರಿಯ ಅಧಿಕಾರಿಗಳ ಕೈವಾಡ ಈ ಕೃತ್ಯದಲ್ಲಿ ಕಂಡು ಬಂದಿಲ್ಲ. ಉಳಿದ ಲ್ಯಾಪ್ ಟಾಪ್‌ಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.