Sunday, 29th September 2024

Health Tips: ವಯಸ್ಕರು ಜೊಲ್ಲು ಸುರಿಸುವುದೇಕೆ?

Health tips

ಪುಟ್ಟ ಮಕ್ಕಳು ಜೊಲ್ಲು ಸುರಿಸುತ್ತಿದ್ದರೆ ನಾವು ಅಷ್ಟೊಂದು ಲಕ್ಷ್ಯ ಕೊಡುವುದಿಲ್ಲ(Health Tips). ನುಂಗುವ ಸಾಮರ್ಥ್ಯ ಕಡಿಮೆ ಇರುವ ಕಂದಮ್ಮಗಳಲ್ಲಿ ಇದು ಮಾಮೂಲಿ. ಅವರು ಬೆಳೆಯುತ್ತಿದ್ದಂತೆ ಉಗುಳು ನುಂಗುವ ಅವರ ಸಾಮರ್ಥ್ಯವೂ ವಿಕಾಸಗೊಂಡು, ಜೊಲ್ಲು ಸೋರುವುದು ನಿಲ್ಲುತ್ತದೆ. ಇದನ್ನು ನಾವು ಬಹಳ ಹಿಂದಿನಿಂದಲೂ ಗಮನಿಸಿರುತ್ತೇವೆ. ವೈದ್ಯ ವಿಜ್ಞಾನವೂ ಇದನ್ನೇ ಪುಷ್ಟೀಕರಿಸುತ್ತದೆ. ಆದರೆ ದೊಡ್ಡವರೂ ಜೊಲ್ಲು ಸುರಿಸುತ್ತಾರಲ್ಲಾ… ಏಕೆ? ಇದೀಗ ʻಜೊಲ್ಲು ಸುರಿಸುʼ ಎನ್ನುವ, ಲಾಲಸೆಯನ್ನು ಬಿಂಬಿಸುವ ನುಡಿಗಟ್ಟಿನ ಬಗ್ಗೆ ಹೇಳುತ್ತಿರುವುದಲ್ಲ, ಅಕ್ಷರಾರ್ಥದಲ್ಲಿ ಜೊಲ್ಲು ಸುರಿಸುವವರ ಬಗ್ಗೆ ಹೇಳುತ್ತಿರುವುದು. ರಾತ್ರಿ ಮಲಗಿ ಏಳುವಷ್ಟರಲ್ಲಿ ದಿಂಬೆಲ್ಲ ಗಲೀಜಾಗುವಷ್ಟು ಜೊಲ್ಲು ಸುರಿಸುವವರೂ ಇದ್ದಾರೆ. ಹೀಗೇಕಾಗುತ್ತದೆ? ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ?

ಜೊಲ್ಲು ಅಥವಾ ಲಾಲಾ ರಸ ನಮ್ಮ ಶರೀರಕ್ಕೆ ಬೇಕಾದಂಥ ದ್ರವ. ಬಾಯಿಯ ಆರೋಗ್ಯವನ್ನು ಕಾಪಾಡುವುದರಿಂದ ಹಿಡಿದು ಜೀರ್ಣ ಕ್ರಿಯೆಯನ್ನು ಸರಿಯಾಗಿ ಇರಿಸುವವರೆಗೆ ಹಲವು ರೀತಿಯ ಕೆಲಸಗಳು ಈ ಲಾಲಾ ರಸಕ್ಕಿದೆ. ಹಗಲಿನಲ್ಲಿ ಇದು ಬಾಯಲ್ಲಿ ಬರುವುದು, ಹೋಗುವುದು ವಯಸ್ಕರಿಗೆ ಗಮನಕ್ಕೆ ಬರುವುದಿಲ್ಲ. ಬಾಯಿ ಮತ್ತು ಗಂಟಲಿನ ಸ್ನಾಯುಗಳು ಇದನ್ನು ಸೂಕ್ತವಾಗಿ ನಿರ್ವಹಿಸಿಬಿಡುತ್ತವೆ. ಆದರೆ ರಾತ್ರಿ ನಿದ್ದೆಯ ವೇಳೆ ಉತ್ಪನ್ನವಾಗುವ ಲಾಲಾ ರಸವನ್ನು ಹಿಡಿದಿಡಲು ಬಾಯಿ, ಗಂಟಲಿನ ಸ್ನಾಯುಗಳಿಗೆ ಸಾಧ್ಯವಾಗದೇ ಇದ್ದಾಗ ಬರುವಂಥ ಸಮಸ್ಯೆಯಿದು. ಮಕ್ಕಳಲ್ಲಿ ದಿನದ ಯಾವುದೇ ಹೊತ್ತಿನಲ್ಲಿ ಜೊಲ್ಲು ಸುರಿಯುವುದು ಸಮಸ್ಯೆ ಅಲ್ಲ. ಅದರಲ್ಲೂ ಹಲ್ಲು ಬರುವ ಮಕ್ಕಳಲ್ಲಿ ಇವೆಲ್ಲ ಇದ್ದಿದ್ದೇ. ಆದರೆ ವಯಸ್ಕರಲ್ಲಿ ಇದು ಸಮಸ್ಯೆ ಎನಿಸಬಹುದು. ಹೀಗಾಗುವುದಕ್ಕೆ ಕಾರಣಗಳು ಇವೆ.

ಏಕೆ ಹೀಗಾಗುತ್ತದೆ?:
ವಯಸ್ಕರು ರಾತ್ರಿ ನಿದ್ದೆಯಲ್ಲಿ ಜೊಲ್ಲು ಸುರಿಸುವುದಕ್ಕೆ ಹಲವು ಕಾರಣಗಳು ಇರಬಹುದು. ಸಿಕ್ಕಾಪಟ್ಟೆ ಆಯಾಸ, ನಿದ್ದೆ ಮಾಡುವ ಭಂಗಿ ಸರಿಯಿಲ್ಲದಿರುವಂಥ ಸರಳ ಕಾರಣಗಳಿಂದ ಹಿಡಿದು ಜಿಇಆರ್‌ಡಿ, ನರಗಳ ತೊಂದರೆಯೂ ಕಾರಣವಾಗಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿದ್ದು ಮಲಗುವ ಭಂಗಿ. ಒಂದೇ ಮಗ್ಗುಲಲ್ಲಿ ಅಥವಾ ಹೊಟ್ಟೆ ಅಡಿ ಮಾಡಿ ಮಲಗಿದಾಗ ಹೀಗಾಗುವುದು ಹಲವರಲ್ಲಿ ಕಾಣಬಹುದು. ಮಲಗುವ ಭಂಗಿಯನ್ನು ಬದಲಿಸಿ ನೋಡಿದಾಗ ಪರಿಣಾಮವೂ ಬದಲಾಗುವ ಸಾಧ್ಯತೆಯಿದೆ, ಪ್ರಯತ್ನಿಸಬಹುದು.

ಬಾಯಲ್ಲಿ ಉಸಿರಾಟ:
ನೆಗಡಿ, ಅಲರ್ಜಿ, ಸೈನಸ್‌ ಅಥವಾ ಇನ್ನಾವುದೇ ಕಾರಣಕ್ಕೆ ಮೂಗಿನಲ್ಲಿ ಉಸಿರಾಡುವುದು ಕಷ್ಟವಾಗಿ, ಬಾಯಲ್ಲಿ ಉಸಿರಾಡುವುದು ಅನಿವಾರ್ಯ ಆದಾಗಲೂ ಈ ತೊಂದರೆ ಕಾಣುತ್ತದೆ. ಹೆಚ್ಚು ಸಮಯ ಬಾಯಲ್ಲಿ ಉಸಿರಾಡುವುದರಿಂದ ಬಾಯಿ ಒಣಗುತ್ತದೆ. ಲಾಲಾ ರಸ ಹರಿಯುವುದು ಹೆಚ್ಚಬಹುದು.

ಜಿಇಆರ್‌ಡಿ:
ಈ ಸಮಸ್ಯೆಯನ್ನು ಸಾಮಾನ್ಯವಾಗಿ ಆಸಿಡ್‌ ರಿಫ್ಲೆಕ್ಸ್‌ (Gastroesophageal Reflux Disease) ಎಂದೇ ಹೇಳಲಾಗುತ್ತದೆ. ಅನ್ನನಾಳದ ಆಮ್ಲೀಯ ಅಂಶವು ಮೇಲ್ಮುಖವಾಗಿ ಚಲಿಸಿದಾಗ ಆಗುವಂಥ ಸಮಸ್ಯೆಯಿದು. ಇಂಥ ಮೇಲ್ಮುಖ ಹರಿವಿನಿಂದ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಅತಿಯಾಗಿ ಲಾಲಾ ರಸ ಹರಿಯುವುದೂ ಸೇರುತ್ತದೆ. ಆಮ್ಲೀಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶರೀರ ತೋರುವ ಸಹಜ ಪ್ರತಿಕ್ರಿಯೆಯಿದು. ಅದರಲ್ಲೂ ರಾತ್ರಿಯ ಸಮಯದಲ್ಲಿ ಒಟ್ಟಾಗುವ ಹೆಚ್ಚುವರಿ ಜೊಲ್ಲುರಸ ಬಾಯಿಂದ ಹರಿಯುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಆಸಿಡ್‌ ರಿಫ್ಲೆಕ್ಸ್‌ ಇದ್ದರೆ ಚಿಕಿತ್ಸೆ ತೆಗೆದುಕೊಳ್ಳುವುದು ಅಗತ್ಯ.

ಅಡೆ-ತಡೆ:
ಕೆಲವೊಮ್ಮೆ ಟಾನ್ಸಿಲ್‌ ಅಥವಾ ಅಡೆನಾಯ್ಡ್‌ ಅಗಲವಾದರೆ ಸಹಜ ಉಸಿರಾಟ ಕಷ್ಟವಾಗುತ್ತದೆ. ಆಗ ಮೂಗಿನಿಂದ ಉಸಿರಾಡುವುದಕ್ಕೆ ತೊಂದರೆಯಾಗಿ, ಬಾಯಲ್ಲೇ ಉಸಿರಾಡುವುದು ಅನಿವಾರ್ಯವಾಗುತ್ತದೆ. ಇದರಿಂದಲೂ ನಿದ್ದೆಯಲ್ಲಿ ಜೊಲ್ಲು ಸುರಿಯುವುದು ಸಾಮಾನ್ಯವಾಗಬಹುದು. ಇದಲ್ಲದೆ, ಸ್ಲೀಪ್‌ ಅಪ್ನಿಯ ತೊಂದರೆ ಕೊಡುವಾಗಲೂ ಮೂಗಿನ ಉಸಿರಾಟ ಸರಾಗವಾಗದೆ, ಬಾಯಿಯ ಮೂಲಕ ಉಸಿರಾಡುವುದು ಅನಿವಾರ್ಯವಾಗುತ್ತದೆ.

ಔಷಧಿಗಳು:
ನರಮಂಡಲದ ಮೇಲೆ ಪರಿಣಾಮ ಬೀರುವಂಥ ಹಲವು ಔಷಧಿಗಳಿಂದ ಈ ಪರಿಣಾಮ ಕಾಣಬಹುದು. ನಿದ್ದೆ ಬರುವಂಥವು, ಆತಂಕ, ಒತ್ತಡಗಳನ್ನು ಕಡಿಮೆ ಮಾಡುವಂಥ ಹಲವು ಔಷಧಿಗಳು ಸ್ನಾಯುಗಳ ಮೇಲಿನ ನರಗಳ ನಿಯಂತ್ರಣವನ್ನು ಸಡಿಲಗೊಳಿಸುತ್ತವೆ. ಆಗಲೂ ಇಂಥ ಸಮಸ್ಯೆ ಕಾಣಬಹುದು.

ಈ ಸುದ್ದಿಯನ್ನೂ ಓದಿ: Biotin Deficiency: ಈ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ನಿಮಗೆ ಬಯೋಟಿನ್‌ ಕೊರತೆಯಿದೆ ಎಂದರ್ಥ; ಅದಕ್ಕೆ ಪರಿಹಾರವೇನು?