Friday, 22nd November 2024

Lebanon-Israel war: ಇಸ್ರೇಲ್‌ ರಣಭೀಕರ ದಾಳಿಗೆ ಲೆಬನಾನ್‌ ತತ್ತರ; ವಿಶ್ವಸಂಸ್ಥೆ ಕದ ತಟ್ಟಿದ ಇರಾನ್‌

Lebanon-Israel war

ಬೈರುತ್‌: ಇಸ್ರೇಲ್‌ ಸೇನೆ ವೈಮಾನಿಕ ದಾಳಿ ನಡೆಸಿ ಹೆಜ್ಬುಲ್ಲಾ(Hezbollah) ನಾಯಕ ಹಸನ್ ನಸ್ರಲ್ಲಾ (Hassan Nasrallah)ನನ್ನು ಹೊಡೆದುರುಳಿಸಿದ ಬೆನ್ನಲ್ಲೇ ಲೆಬನಾನ್ ಮೇಲೆ ಇಸ್ರೇಲ್‌ ನಡೆಸುತ್ತಿರುವ ರಣಭೀಕರ ದಾಳಿ(Lebanon-Israel war) ಬಗ್ಗೆ ತುರ್ತು ಸಭೆ ನಡೆಸುವಂತೆ ಇರಾನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (UNSC) ಇರಾನ್‌ ಆಗ್ರಹಿಸಿದೆ.

ಇರಾನ್‌ನ ಯುಎನ್ ರಾಯಭಾರಿ ಅಮೀರ್ ಸಯೀದ್ ಇರಾವನಿ ಅವರು 15 ಸದಸ್ಯರಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಸ್ರೇಲ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಔಪಚಾರಿಕ ಪತ್ರವನ್ನು ಕಳುಹಿಸಿದ್ದಾರೆ. ರಾಜತಾಂತ್ರಿಕ ನೀತಿಯನ್ನು ಉಲ್ಲಂಘಿಸಿ ನಡೆಯುವ ಯಾವುದೇ ದಾಳಿಯನ್ನೂ ಇರಾನ್‌ ಇನ್ನು ಮುಂದೆ ಸಹಿಸಲ್ಲ. ಇರಾನ್ ತನ್ನ ಪ್ರಮುಖ ರಾಷ್ಟ್ರೀಯ ಮತ್ತು ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತನ್ನ ಹಕ್ಕುಗಳನ್ನು ಚಲಾಯಿಸಲು ಹಿಂಜರಿಯುವುದಿಲ್ಲ ಎಂದು ಇರಾವಾಣಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶನಿವಾರ ಇಸ್ರೇಲಿ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 33 ಜನರು ಸಾವನ್ನಪ್ಪಿದ್ದಾರೆ ಮತ್ತು 195 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಮತ್ತೊಂದೆಡೆ ಯುದ್ಧ ಪೀಡಿತ ಲೆಬನಾನ್‌ಗೆ ಪ್ರಯಾಣಿದಂತೆ ಭಾರತೀಯ ಪ್ರಜೆಗಳಿಗೆ ಅಲ್ಲಿ ಭಾರತೀಯ ರಾಜಭಾರಿ ಕಚೇರಿ ಸಂದೇಶ ರವಾನಿಸಿದೆ.

ಲೆಬನಾನ್‌ನ ದಕ್ಷಿಣ ಬೈರುತ್‌ನಲ್ಲಿರುವ ಹೆಜ್ಬುಲ್ಲಾ(Hezbollah)ದ ಮುಖ್ಯಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (Hassan Nasrallah) ಸಾವನ್ನಪ್ಪಿದ್ದಾನೆ. ಈ ಬಗ್ಗೆ ನಿನ್ನೆ ಇಸ್ರೇಲ್‌ ಸೇನೆ ಅಧಿಕೃತವಾಗಿ ಮಾಹಿತಿ ಹೊರಹಾಕಿತ್ತು.

ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್‌ ಸೇನೆಯ ವಕ್ತಾರರಾದ ಲೆಫ್ಟಿನೆಂಟ್ ಕರ್ನಲ್ ನಾಡವ್ ಶೋಶಾನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಘೋಷಿಸಿದ್ದಾರೆ. ಜತೆಗೆ ಕ್ಯಾಪ್ಟನ್ ಡೇವಿಡ್ ಅವ್ರಹಾಮ್ ಕೂಡ ಇದನ್ನು ದೃಢಪಡಿಸಿದ್ದಾರೆ. ಶುಕ್ರವಾರ ಲೆಬನಾನ್‌ ರಾಜಧಾನಿ ಬೈರುತ್‌ನಲ್ಲಿ ನಡೆದ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ಹತನಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಇಸ್ರೇಲ್ ಡಿಫೆನ್ಸ್ ಫೋರ್ಸ್ (Israel Defense Forces-IDF) ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ” ಎಂದು ಪೋಸ್ಟ್ ಮಾಡಿದೆ.

ಯಾರು ಈ ಹಸನ್ ನಸ್ರಲ್ಲಾ?

ಹಸನ್ ನಸ್ರಲ್ಲಾ ಫೆಬ್ರವರಿ 1992ರಿಂದ ಹೆಜ್ಬುಲ್ಲಾದ ಮಿಲಿಟರಿ ಗುಂಪನ್ನು ಮುನ್ನಡೆಸುತ್ತಿದ್ದಾನೆ. ಈತ ಗುಂಪಿನ ಮೂರನೇ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇಸ್ರೇಲ್‌ ಸೈನಿಕರಿಂದ ಕೊಲ್ಲಲ್ಪಟ್ಟ ಅಬ್ಬಾಸ್ ಅಲ್-ಮುಸಾವಿಯ ಉತ್ತರಾಧಿಕಾರಿಯಾಗಿದ್ದಾನೆ. 64 ವರ್ಷದ ಈತ ಬಡ ದಿನಸಿ ವ್ಯಾಪಾರಿಯೊಬ್ಬನ ಮಗ. ನಸ್ರಲ್ಲಾ 1960ರ ಆಗಸ್ಟ್ 31ರಂದು ಬೈರುತ್‌ನ ಉತ್ತರ ಬುರ್ಜ್ ಹಮ್ಮದ್ ಉಪನಗರದಲ್ಲಿ ಜನಿಸಿದ್ದ. ಆತನಿಗೆ 8 ಮಂದಿ ಒಡಹುಟ್ಟಿದವರು ಮತ್ತು 4 ಮಂದಿ ಮಕ್ಕಳಿದ್ದಾರೆ. ಮಧ್ಯಪ್ರಾಚ್ಯದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬನಾದ ಹಸನ್ ನಸ್ರಲ್ಲಾ 2006ರಲ್ಲಿ ಇಸ್ರೇಲ್ ಜತೆಗಿನ ಯುದ್ಧದ ನಂತರ ತಲೆಮರೆಸಿಕೊಂಡಿದ್ದ. 1992ರಲ್ಲಿ ಹೆಜ್ಬುಲ್ಲಾದ ಕಮಾಂಡ್ ಆದಾಗಿನಿಂದ ನಸ್ರಲ್ಲಾ ಸಂಘಟನೆಯನ್ನು ಶಕ್ತಗೊಳಿಸಿದ್ದ.

ಈ ಸುದ್ದಿಯನ್ನೂ ಓದಿ: Zainab Nasrallah: ಇಸ್ರೇಲ್‌ ದಾಳಿಗೆ ಹೆಜ್ಬುಲ್ಲಾ ತತ್ತರ; ಪ್ರಮುಖ ನಾಯಕ ಹಸನ್ ನಸ್ರಲ್ಲಾ ಪುತ್ರಿ ಝೈನಬ್ ನಸ್ರಲ್ಲಾ ಸಾವು?