Saturday, 23rd November 2024

Tata Motors: ತಮಿಳುನಾಡಿನಲ್ಲಿ ಟಾಟಾ ಮೋಟಾರ್ಸ್ ನ ಹೊಸ ವಾಹನ ತಯಾರಿಕಾ ಘಟಕಕ್ಕೆ ಶಿಲಾನ್ಯಾಸ

• ಈ ಅತ್ಯಾಧುನಿಕ ಗ್ರೀನ್‌ಫೀಲ್ಡ್ ಸ್ಥಾವರದಲ್ಲಿ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ನೆಕ್ಷ್ಟ್ ಜೆನ್ ವಾಹನ ತಯಾರಿಸಲು ಶೇ.100ರಷ್ಟು ನವೀಕರಿಸಬಹುದಾದ ಇಂಧನ ಬಳಕೆ
• ಪ್ರಾದೇಶಿಕ ಜನ ಸಮುದಾಯಗಳ ತರುಣರಲ್ಲಿ ಕೌಶಲ್ಯ ಅಭಿವೃದ್ದಿ ಮಾಡುವ ಮೂಲಕ 5,000 ಮಂದಿಗೆ ಉದ್ಯೋಗಾವಕಾಶ ಸೃಷ್ಟಿ

ಬೆಂಗಳೂರು: ಭಾರತದ ಪ್ರಮುಖ ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳ ತಯಾರಕರಾದ ಟಾಟಾ ಮೋಟಾರ್ಸ್ ಗ್ರೂಪ್ ಜಾಗತಿಕ ಮಟ್ಟಕ್ಕೆ ಮತ್ತು ದೇಶಕ್ಕೆ ಬೇಕಾದ ವಾಹನ ತಯಾರಿಕೆಗಳನ್ನು ಭಾರತ ದೇಶದಲ್ಲಿಯೇ ಮಾಡುವ ಉದ್ದೇಶದಿಂದ ತಮಿಳುನಾಡಿನಲ್ಲಿ ಹೊಸ ವಾಹನ ತಯಾರಿಕಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದೆ.

ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಪನಪಕ್ಕಂನಲ್ಲಿ ಕಾರುಗಳು ಮತ್ತು ಎಸ್ ಯುವಿ ವಾಹನಗಳನ್ನು ತಯಾರಿ ಸುವ ಟಾಟಾ ಉತ್ಪಾದನಾ ಘಟಕ ಆರಂಭ ಆಗಲಿದೆ. ವಿಶ್ವದರ್ಜೆಯ ಉತ್ಪಾದನಾ ಸೌಲಭ್ಯಗಳನ್ನ ಅಳವಡಿಸುವ ಉದ್ದೇಶದಿಂದ ಈ ಘಟಕ ಪ್ರಾರಂಭ ಆಗುತ್ತಿದ್ದು, ಈ ಉತ್ಪಾದನಾ ಘಟಕದಲ್ಲಿ ಟಾಟಾ ಮೋಟಾರ್ಸ್ ಮತ್ತು ಜೆ ಎಲ್ ಆರ್ ವಾಹನಗಳನ್ನು ಮುಂದಿನ ಜನವರಿಯಿಂದ ತಯಾರಿಸಲಿದೆ. ಆ ಮೂಲಕ ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ಅಗತ್ಯತೆಗಳನ್ನು ಪೂರೈಸಲಿದೆ.

ಘಟಕದ ಶಿಲಾನ್ಯಾಸ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್‌ ನ ಅಧ್ಯಕ್ಷ ಎನ್. ಚಂದ್ರಶೇಖರನ್, ಸಚಿವರು, ಸಾರ್ವಜನಿಕ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಟಾಟಾ ಗ್ರೂಪ್‌ ನ ಹಿರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಂತ್ರಿ ಎಂ.ಕೆ. ಸ್ಟಾಲಿನ್ ಅವರು, ‘ಟಾಟಾ ಗ್ರೂಪ್ ರಾಷ್ಟ್ರ ನಿರ್ಮಾಣಕ್ಕೆ ತನ್ನ ಕೊಡುಗೆಗಾಗಿ ಹೆಸರುವಾಸಿಯಾಗಿದೆ. ತಮಿಳುನಾಡಿನೊಂದಿಗೆ ಆಳವಾದ, ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಈಗಾಗಲೇ ಹಲವು ಉತ್ಪಾದನಾ ಘಟಕಗಳು ಕಳೆದ ಹಲವಾರು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಜಾಗತಿಕ ಮಟ್ಟದ ಆಟೋ ತಯಾರಕರಾದ ಟಾಟಾ ಮೋಟಾರ್ಸ್, ರಾಣಿಪೇಟ್‌ನ ಪನಪಕ್ಕಂನಲ್ಲಿ ತನ್ನ ಹೊಸ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಿ ರುವುದನ್ನು ನಾವು ಸ್ವಾಗತಿಸುತ್ತೇವೆ’ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಸನ್ಸ್‌ ನ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು, “ಪನಪಕ್ಕಂ ಅನ್ನು ಎಲೆಕ್ಟ್ರಿಕ್ ಮತ್ತು ಐಷಾರಾಮಿ ವಾಹನಗಳು ಸೇರಿದಂತೆ ನಮ್ಮ ಮುಂದಿನ ಪೀಳಿಗೆಯ ಕಾರುಗಳು ಮತ್ತು ಎಸ್‌ಯುವಿಗಳ ತವರಾಗಿಸಲು ನಾವು ಸಂತೋಷಪಡುತ್ತೇವೆ. ತಮಿಳುನಾಡು ಪ್ರಗತಿಪರ ನೀತಿಗಳೊಂದಿಗೆ ಪ್ರಮುಖ ಕೈಗಾರಿಕಾ ರಾಜ್ಯವಾಗಿದೆ ಮತ್ತು ಪ್ರತಿಭಾವಂತ ಉದ್ಯೋಗಿಗಳಿಂದಾಗಿ ಆಟೋಮೋಟಿವ್ ಹಬ್ ಆಗಿದೆ. ಹಲವಾರು ಟಾಟಾ ಗ್ರೂಪ್ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾವು ಈಗ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನ ಹೊಂದಿರುವ ನಮ್ಮ ಸುಧಾರಿತ ವಾಹನ ಉತ್ಪಾದನಾ ಘಟಕವನ್ನು ನಿರ್ಮಿಸಲು ಉದ್ದೇಶಿಸಿದ್ದೇವೆ. ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಮಹಿಳಾ ಉದ್ಯೋಗಿಗಳ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸುತ್ತೇವೆ ‘ ಎಂದರು.

ಈ ಸುಧಾರಿತ, ಅತ್ಯಾಧುನಿಕ ಉತ್ಪಾದನಾ ಘಟಕವು 5,000 ಉದ್ಯೋಗಾವಕಾಶಗಳನ್ನು (ನೇರ ಮತ್ತು ಪರೋಕ್ಷ) ಸೃಷ್ಟಿಸಬಹುದು ಎನ್ನುವ ನಿರೀಕ್ಷೆಯನ್ನು ಹೊಂದಲಾಗಿದೆ. ಸ್ಥಾವರದ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳ ಯುವ ಜನತೆಗೆ ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಟಾಟಾ ಮೋಟಾರ್ಸ್ ನೆರವಾಗಲಿದೆ. ಈ ಘಟಕವು ತನ್ನ ಕಾರ್ಯಾಚರಣೆಗಳಲ್ಲಿ ಶೇ. 100ರಷ್ಟು ನವೀಕರಿಸಬಹುದಾದ ಶಕ್ತಿಯನ್ನು ಬಳಸುತ್ತದೆ.

ಟಾಟಾ ಮೋಟಾರ್ಸ್ ಗ್ರೂಪ್ ಈ ಗ್ರೀನ್‌ಫೀಲ್ಡ್ ಉತ್ಪಾದನಾ ಸೌಲಭ್ಯದಲ್ಲಿ 9,000 ಕೋಟಿಗಳನ್ನು ಹೂಡಿಕೆ ಮಾಡಲು ಉದ್ದೇಶಿಸಿದೆ, ಇದನ್ನು ವಾರ್ಷಿಕ 2,50,000 ವಾಹನಗಳ ಉತ್ಪಾದನಾ ಸಾಮರ್ಥ್ಯಕ್ಕಾಗಿ ವಿನ್ಯಾಸ ಗೊಳಿಸಲಾಗಿದೆ. ಉತ್ಪಾದನೆಯು ಹಂತ ಹಂತವಾಗಿ ಪ್ರಾರಂಭವಾಗುತ್ತದೆ ಮತ್ತು ಮುಂದಿನ 5-7 ವರ್ಷಗಳಲ್ಲಿ ಪೂರ್ಣ ಗುರಿ ಸಾಧನೆಯ ಯೋಜನೆ ಹಾಕಿಕೊಂಡಿದೆ.