Sunday, 29th September 2024

Pralhad Joshi: ಎಚ್‌ಡಿಕೆ ಬಗ್ಗೆ ಹಂದಿ ಪದ ಬಳಸಿದ ಐಪಿಎಸ್‌ ಅಧಿಕಾರಿ ವಿರುದ್ಧ ಪ್ರಲ್ಹಾದ ಜೋಶಿ ಗರಂ; ಕ್ಷಮಾಪಣೆ ಕೇಳಲು ಸೂಚನೆ

Pralhad Joshi

ಹುಬ್ಬಳ್ಳಿ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ʼಹಂದಿʼ ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಎಚ್ಚರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಈ ಲೋಕಾಯುಕ್ತ ಎಡಿಜಿಪಿಗೆ ಏನಾದರೂ ಸರ್ವೀಸ್ ಕಂಡಕ್ಟ್ ರೂಲ್ ಬಗ್ಗೆ ಜ್ಞಾನವಿದ್ದರೆ ತಕ್ಷಣ ಕ್ಷಮಾಪಣೆ ಕೇಳಲಿ ಎಂದು ಸೂಚಿಸಿದ್ದಾರೆ.

ʼʼಒಬ್ಬ ಜನಪ್ರತಿನಿಧಿ, ಅದರಲ್ಲೂ ಕೇಂದ್ರ ಸಚಿವರ ಬಗ್ಗೆ ಹೀಗೆ ಅಸಭ್ಯ ಭಾಷೆಯಲ್ಲಿ, ಕೆಟ್ಟ ಪದ ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೇಡರ್ ಕಂಟ್ರೋಲ್ ಇದನ್ನು ಗಂಭೀರವಾಗಿ ಪರಿಗಣಿಸಲಿದೆʼʼ ಎಂದು ತಿಳಿಸಿದರು. ʼʼಕುಮಾರಸ್ವಾಮಿ ಅವರು ಯಾವತ್ತೂ ಯಾರ ಬಗ್ಗೆಯೂ ಹೀಗೆ ಅಸಭ್ಯ ಭಾಷೆ ಬಳಸಿದವರಲ್ಲ. ಈ ಅಧಿಕಾರಿ ಬಗ್ಗೆಯೂ ಹಾಗೆಲ್ಲ ಏಕವಚನದಲ್ಲಿ ಮಾತನಾಡಿಲ್ಲʼʼ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.

ಎಡಿಜಿಪಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ

ʼʼಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪದದಲ್ಲಿ ಸಂಬೋಧನೆ ಮಾಡಿರುವುದು ಅಧಿಕಾರಿಯ ಅಹಂಕಾರದ ಪರಮಾವಧಿಯಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಸರ್ಕಾರದ ಆದೇಶವಿದ್ದರೆ ತನಿಖೆ ನಡೆಸಲಿ. ಎಚ್‌ಡಿಕೆ ಆರೋಪ ಮಾಡಿದ್ದರೆ ಗೌರವಯುತ ಭಾಷೆಯಲ್ಲಿ, ಸಭ್ಯ ಪದಗಳಲ್ಲಿ ಸ್ಪಷ್ಟನೆ ಕೊಡಲಿ. ಅದು ಬಿಟ್ಟು ಈ ರೀತಿ ಕೆಟ್ಟದಾಗಿ ಸಂಬೋಧಿಸುವುದು ಯಾವುದೇ ಅಧಿಕಾರಿಗಳಿಗೂ ಶೋಭೆ ತರುವುದಿಲ್ಲʼʼ ಎಂದು ಸಚಿವ ಜೋಶಿ ಹೇಳಿದ್ದಾರೆ.

ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ

ʼʼಒಬ್ಬ ಜನಪ್ರತಿನಿಧಿ ಬಗ್ಗೆ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದು ಕಾಂಗ್ರೆಸ್‌ಗೆ ಮುಳುವಾಗಲಿದೆ. ಕಾಂಗ್ರೆಸ್ ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆಯಲ್ಲ!ʼʼ ಎಂದು ಕಿಡಿ ಕಾರಿದ್ದಾರೆ.

ಈ ಸರ್ಕಾರವೇ ಶಾಶ್ವತವಲ್ಲ; ಎಚ್ಚರ

ʼʼರಾಜ್ಯದಲ್ಲಿ ಈ ಸರ್ಕಾರವೇ ಶಾಶ್ವತವಾಗಿ ಇರೋದಿಲ್ಲ. ಸ್ವಲ್ಪ ಎಚ್ಚರ ವಹಿಸಿ ಮಾತನಾಡಿ, ಕೆಲಸ ಮಾಡಿʼʼ ಎಂದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ಗೆ ಕೇಂದ್ರ ಸಚಿವ ಜೋಶಿ ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: Pralhad Joshi: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ; ಪ್ರಲ್ಹಾದ್‌ ಜೋಶಿ ಆಗ್ರಹ

ಐಪಿಎಸ್‌ ಅಧಿಕಾರಿ ಹೇಳಿದ್ದೇನು?

ಗಂಗೇನಹಳ್ಳಿಯಲ್ಲಿ 1.11 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ ಪ್ರಕರಣದಲ್ಲಿ ತಮ್ಮನ್ನು ವಿಚಾರಣೆ ಮಾಡಿದ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಹಲವಾರು ಆರೋಪಗಳನ್ನು ಮಾಡಿದ್ದರು. ಚಂದ್ರಶೇಖರ್ ಮಾನ್ಯತಾ ಟೆಕ್‌ಪಾರ್ಕ್ ಬಳಿಕ 38 ಅಂತಸ್ತಿನ ಮನೆಕಟ್ಟುತ್ತಿದ್ದಾರೆ, ಅವರ ಮೇಲೆಯೇ ಹಿಂದೆ ಕೇಸ್ ಆಗಿತ್ತು ಎಂದೆಲ್ಲ ಆರೋಪಿಸಿದ್ದರು. ಇದರಿಂದ ಸಿಟ್ಟಿಗೆದ್ದ ಐಪಿಎಸ್‌ ಅಧಿಕಾರಿ ಚಂದ್ರಶೇಖರ್ ಶನಿವಾರ, ತಾವು ವಹಿಸಿರುವ ಎಸ್‌ಐಟಿ ತನಿಖಾ ತಂಡದ ಸಹೋದ್ಯೋಗಿಗಳನ್ನು ಉದ್ದೇಶಿಸಿ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಅವರು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಆರೋಪಿ ಎಂದು ಉಲ್ಲೇಖಿಸಿರುವ ಜತೆಗೆ ‘ಹಂದಿಯೊಂದಿಗೆ ಗುದ್ದಾಡಬಾರದು ‘ ಎಂಬ ಜಾರ್ಜ್‌ ಬರ್ನಾರ್ಡ್ ಷಾ ಅವರ ಮಾತನ್ನು ಉಲ್ಲೇಖಿಸಿದ್ದಾರೆ. ಅಧಿಕಾರದಲ್ಲಿರುವ ಕೇಂದ್ರ ಸಚಿವರೊಬ್ಬರನ್ನು ಈ ರೀತಿ ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ.