Sunday, 29th September 2024

Siddaramaiah: ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ: ಸಿದ್ದರಾಮಯ್ಯ

Siddaramaiah

ಮೈಸೂರು: ಮುಡಾ ಹಗರಣ(MUDA scam)ದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ನಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು. ಮುಡಾ ಪ್ರಕರಣ ಸಂಬಂಧ ತಮ್ಮ ವಿರುದ್ಧ ಇಡಿಯಲ್ಲಿ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇಡಿಯಲ್ಲಿ ದೂರು ದಾಖಲಾಗಿದ್ದರೆ, ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಅಧಿಕಾರಿಗಳ ವಿರುದ್ಧ ಟೀಕೆ ಸರಿಯಲ್ಲ

ಕುಮಾರಸ್ವಾಮಿ ಅವರು ಲೋಕಾಯುಕ್ತ ಎಡಿಜಿಪಿ ವಿರುದ್ಧ ಮಾಡುತ್ತಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ತಪ್ಪೆಸಗಿಸಿದ್ದು, ಅಧಿಕಾರಗಳ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳ ಮೇಲೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ರೇವ್ ಪಾರ್ಟಿ ವಿರುದ್ಧ ಪೊಲೀಸರ ಕ್ರಮ

ಮೈಸೂರಿನಲ್ಲಿ ರೇವ್ ಪಾರ್ಟಿ ನಡೆದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರೇವ್ ಪಾರ್ಟಿ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು,ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಅಕ್ಟೋಬರ್ 2ರಂದು ದಸರಾ ಸಿದ್ಧತೆಗಳ ವೀಕ್ಷಣೆ

ದಸರಾ ಉತ್ಸವದ ಸಿದ್ಧತೆಗಳ ಬಗ್ಗೆ ಪರ್ತಕರ್ತರಿಗೆ ಮಾಹಿತಿ ನೀಡುತ್ತಾ, ದಸರಾ ಉತ್ಸವಗಳ ಸಿದ್ದತೆಗಳಿಗೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಇದನ್ನು ವೀಕ್ಷಿಸಲು ಅಕ್ಟೋಬರ್ 2ರಂದು ಮೈಸೂರಿಗೆ ಆಗಮಿಸಲಿದ್ದೇನೆ ಎಂದರು.

ಜಾತಿಗಣತಿ ವರದಿ ಜಾರಿ ಮಾಡುತ್ತೇನೆ: ಸಿದ್ದರಾಮಯ್ಯ

ಮೈಸೂರಿನಲ್ಲಿ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಅವರು, ʼʼಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಪರಿಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕ್ಯಾಬಿನೆಟ್ ಮುಂದೆ ಇಟ್ಟು ಇಟ್ಟು ಜಾರಿಗೆ ತರುತ್ತೇನೆ. ಜಾತಿ ಗಣತಿ ಜಾರಿ ನಮ್ಮ ಪಕ್ಷದ ಅಜೆಂಡಾ. ಹೀಗಾಗಿ ಜಾರಿ ಮಾಡೇ ಮಾಡುತ್ತೇವೆʼʼ ಎಂದರು.

ಮೈಸೂರಿನಲ್ಲಿ ರೇವ್‌ ಪಾರ್ಟಿ

ಮೈಸೂರಿನ ಕೆಆರ್​ಎಸ್ ಬ್ಯಾಕ್ ವಾಟರ್​ನಲ್ಲಿ ತಡರಾತ್ರಿವರೆಗೂ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಕೂಡಲೆ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಕೆಲವರು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಾರ್ಟಿಯಲ್ಲಿದ್ದ 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿದೆ. ಪಾರ್ಟಿಯಲ್ಲಿ 150ಕ್ಕೂ ಹೆಚ್ಚು ಯುವಕ, ಯುವತಿಯರು ಭಾಗಿಯಾಗಿದ್ದರು ಎನ್ನಲಾಗಿದೆ. ಪ್ರಕರಣ ಬಗ್ಗೆ ಎಸ್​ಪಿ ವಿಷ್ಣುವರ್ಧನ್ ಮಾತನಾಡಿ, ʼʼಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಮದ್ಯ ಮತ್ತು ಸಿಗರೇಟ್ ಸ್ಥಳದಲ್ಲಿ ಇತ್ತು. ಅಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತೇವೆ. ಎಫ್ಎಸ್​ಎಲ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆʼʼ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pralhad Joshi: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ; ಪ್ರಲ್ಹಾದ್‌ ಜೋಶಿ ಆಗ್ರಹ