ಮೂರನೇ ಹಂತದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ (bollywood actress) ಹಿನಾ ಖಾನ್ (hina khan) ಅವರನ್ನು ಮಹಿಮಾ ಚೌಧರಿ (Mahima Chaudhry) ಭೇಟಿಯಾಗಿದ್ದಾರೆ. ಇದು ಆಶ್ಚರ್ಯಕರ ಭೇಟಿಯಾಗಿತ್ತು ಎಂದು ಹಿನಾ ಖಾನ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ (Instagram) ಹೇಳಿಕೊಂಡಿದ್ದಾರೆ.
ಕ್ಯಾನ್ಸರ್ ಜೊತೆಗಿನ ಹೋರಾಟ ಪ್ರಾರಂಭದ ಬಳಿಕ ಇನ್‌ಸ್ಟಾ ಗ್ರಾಮ್‌ನಲ್ಲಿ ಅವರು ತಮ್ಮ ವಿಡಿಯೋ, ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಕ್ಯಾನ್ಸರ್ ಹೋರಾಟದ ಕುರಿತು ಅವರು ಮಾತನಾಡುವಾಗ ಸದಾ ಮಹಿಮಾ ಚೌಧರಿಯನ್ನು ನೆನಪಿಸಿಕೊಳ್ಳುತ್ತಾರೆ. ಇದೀಗ ಮಹಿಮಾ ಖುದ್ಧಾಗಿ ಹಿನಾ ಅವರನ್ನು ಭೇಟಿಯಾಗಿ ಅವರಲ್ಲಿ ಆತ್ಮವಿಶ್ವಾಸ ತುಂಬಿದರು.
ಹಿನಾ ಖಾನ್ ತಮ್ಮ ಕ್ಯಾನ್ಸರ್ ಜತೆಗಿನ ಹೋರಾಟದ ವೇಳೆ ದೊರೆತ ನೆರವಿಗಾಗಿ ಮಹಿಮಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಯಾಕೆಂದರೆ ಮಹಿಮಾ ಸ್ವತಃ ಕ್ಯಾನ್ಸರ್ ವಿರುದ್ಧ ಹೋರಾಡಿ ಬಂದವರು. ಹೀನಾ ಅವರಿಗೆ ಸ್ತನ ಕ್ಯಾನ್ಸರ್ ರೋಗ ನಿರ್ಣಯದ ಅನಂತರ ಅವರ ಬೆಂಬಲಕ್ಕೆ ಬಂದ ಮೊದಲಿಗರು ಮಹಿಮಾ ಎಂದು ಹಿನಾ ಹೇಳಿದ್ದಾರೆ. ಮೊದಲ ಕೀಮೋಥೆರಪಿಯ ಸಮಯದಲ್ಲಿ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ತಮ್ಮಿಬ್ಬರ ಅವರ ಬಾಂಧವ್ಯದ ಕುರಿತೂ ಅವರು ಮಾತನಾಡಿದ್ದಾರೆ. ಅವರು ತಮಗೆ ಭಾರತದಲ್ಲಿ ಚಿಕಿತ್ಸೆಯನ್ನು ಪಡೆಯಲು ಸಲಹೆ ನೀಡಿದರು ಎಂಬುದನ್ನು ತಿಳಿಸಿದರು.
ಸಂದರ್ಶನವೊಂದರಲ್ಲಿ ಮಹಿಮಾ ಅವರು ಕೂಡ ಹಿನಾ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡಿದ್ದರು.
ನಾನು ಹಿನಾ ಅವರನ್ನು ಪಾರ್ಟಿಯಲ್ಲಿ ಆಕಸ್ಮಿಕವಾಗಿ ಭೇಟಿಯಾದೆ. ಬಳಿಕ ನಾವು ಸಂಪರ್ಕದಲ್ಲಿದ್ದೆವು ಎಂದು ಹೇಳಿದ್ದರು. ಅವರಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದ ತಕ್ಷಣ ಅವರು ಮೊದಲಿಗೆ ನನಗೆ ಕರೆ ಮಾಡಿದ್ದರು. ನಾನು ಅವಳೊಂದಿಗೆ ನನ್ನ ಅನುಭವವನ್ನು ಹೇಳಿಕೊಂಡೆ. ಅವಳಿಗೆ ಬಾಂಬೆಯಲ್ಲೇ ಚಿಕಿತ್ಸೆ ಮುಂದುವರಿಸಲು ಹೇಳಿದೆ ಎಂದರು.
ಔಷಧಿ ಒಂದೇ ಆಗಿರುವುದರಿಂದ ಅದನ್ನು ಅಮೆರಿಕದಲ್ಲಿ ನುಂಗಿದರೂ ಒಂದೇ, ಇಲ್ಲೇ ನುಂಗಿದರೂ ಒಂದೇ ಎಂದೇ. ಅಮೆರಿಕದಲ್ಲಿ ಇರುವ ವೈದ್ಯರೂ ಭಾರತೀಯರೇ ಆಗಿರುತ್ತಾರೆ. ಕೆಲವು ಅಮೆರಿಕನ್ ವೈದ್ಯರು ನಿಮಗೆ ಚಿಕಿತ್ಸೆ ನೀಡುವುದನ್ನು ನೋಡಿದರೆ ನಿಮಗನಿಸುತ್ತದೆ, ನನಗೆ ಭಾರತೀಯ ವೈದ್ಯರು ಚಿಕಿತ್ಸೆ ನೀಡಲು ಏಕೆ ಸಾಧ್ಯವಿಲ್ಲವೇ ಎಂದು ಮಹಿಮಾ ಪ್ರಶ್ನಿಸಿದ್ದಾರೆ.
ಕೋವಿಡ್ ಸಮಯದಲ್ಲಿ, ಜನರು ಪ್ಯಾರೆಸಿಟಮಾಲ್ ಅನ್ನು ಅಮೆರಿಕದಲ್ಲಿ ಸೇವಿಸುತ್ತಿದ್ದರು. ನಾವು ಅದನ್ನು ಇಲ್ಲಿಯೂ ಸೇವಿಸುತ್ತಿದ್ದೆವು. ಪ್ರಪಂಚದಾದ್ಯಂತ ಚಿಕಿತ್ಸೆಯು ಒಂದೇ ಆಗಿರುವಾಗ ಅದನ್ನು ನಮ್ಮ ತಾಯ್ನಾಡಿನಲ್ಲಿ ಏಕೆ ಮಾಡಬಾರದು ಎಂದು ಮಹಿಮಾ ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟ ಅನುಪಮ್ ಖೇರ್ ಕೂಡ ಕಿರಣ್ ಖೇರ್ ಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಅವರಿಗೆ ಬಾಂಬೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮತ್ತೊಂದೆಡೆ ರಿಷಿ ಕಪೂರ್ ಸುಮಾರು ಒಂದು ವರ್ಷ ಅಮೆರಿಕದಲ್ಲಿದ್ದರು. ಅಲ್ಲಿ ನಿಮಗೆ ನಿಮ್ಮ ಸ್ವಂತ ಮನೆ ಇಲ್ಲ, ನಿಮ್ಮ ಜನರಿಲ್ಲ. ಕನಿಷ್ಠ ಇಲ್ಲಿನ ವಾತಾವರಣವು ಮನೆಯ ವಾತಾವರಣದಂತೆ ಅನುಭವಾಗುತ್ತದೆ. ಅನಿಲ್ ಅಂಬಾನಿ, ಕಿರಣ್ ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ಕರೆತರಲು ತಮ್ಮ ವಿಮಾನವನ್ನು ಕಳುಹಿಸಿದರು ಎಂದು ಅವರು ನೆನಪಿಸಿಕೊಂಡಿದ್ದರು.
ಮಹಿಮಾ ಅವರಿಗೆ ಧನ್ಯವಾದ ಅರ್ಪಿಸಿರುವ ಹಿನಾ ಖಾನ್, ಮಹಿಮಾ ನನ್ನೊಂದಿಗೆ ಇದ್ದರು. ನನಗೆ ಮಾರ್ಗದರ್ಶನ ನೀಡಿದರು. ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ಅವರು ಹೀರೋ. ಸೂಪರ್ ಹ್ಯೂಮನ್ ಬೀಯಿಂಗ್ ಎಂದಿದ್ದಾರೆ.