Saturday, 23rd November 2024

IPL 2025: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಕಾರಣವೇನು?

IPL 2025

ಮುಂಬೈ: ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್‌(IPL 2025) ಟೂರ್ನಿಗೆ ಬಿಸಿಸಿಐ ಈಗಾಗಲೇ ಹಲವು ನಿಯಮವನ್ನು ಪ್ರಕಟಿಸಿದೆ. ಇದರಲ್ಲಿ ಆಟಗಾರರ ಹರಾಜು, ರಿಟೈನ್‌, ವೇತನ ಸೇರಿ ಹಲವು ವಿಚಾರಗಳು ಸೇರಿವೆ. ವಿಶೇಷವಾಗಿ ವಿದೇಶಿ ಆಟಗಾರರಿಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮ ಜಾರಿಗೆ ತರಲಾಗಿದೆ. ಈ ನಿಯಮದಿಂದ ವಿದೇಶಿ ಆಟಗಾರರಿಗೆ ಹರಾಜಿನಲ್ಲಿ ದುಬಾರಿ ಮೊತ್ತ ಪಡೆಯಲು ಸಾಧ್ಯವಿಲ್ಲ. 17ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರನ್ನು ಕೆಕೆಆರ್‌ ತಂಡ 24.75 ಕೋಟಿ ರೂ. ಗೆ ಖರೀದಿಸಿತ್ತು. ಇದು ಐಪಿಎಲ್‌ ಇತಿಹಾಸದಲ್ಲೇ ಆಟಗಾರನೊಬ್ಬ ಪಡೆದ ಗರಿಷ್ಠ ಮೊತ್ತವಾಗಿತ್ತು. ಆದರೆ ಈ ಬಾರಿ ಇದು ಸಾಧ್ಯವಾಗದು.

ಪ್ರತಿ ತಂಡಗಳ ಬಜೆಟ್​ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್​ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್​ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್​ ಮಾಡಿದರೆ, ಹರಾಜಿನಲ್ಲಿ 3 ಆರ್​ಟಿಎಂ ಬಳಸಬಹುದಾಗಿದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದೆ. ಹೀಗಾಗಿ ತಂಡವೊಂದು ದುಬಾರಿ ಮೊತ್ತಕ್ಕೆ ವಿದೇಶಿ ಆಟಗಾರರನ್ನು ಖರೀದಿಸಲು ಮುಂದಾಗದು.

ಇದನ್ನೂ ಓದಿ IPL 2025: ಧೋನಿ ಅಭಿಮಾನಿಗಳಿಗೆ ಬೇಸರ ತರಿಸಿದ ಅನ್‌ಕ್ಯಾಪ್ಡ್ ನಿಯಮ

ಐಪಿಎಲ್‌ನಲ್ಲಿ ಆಡಬಯಸುವ ವಿದೇಶಿ ಆಟಗಾರರು ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ಸೇರಿಸಬೇಕು. ಇಲ್ಲವಾದರೆ ಪ್ರಸಕ್ತ ಐಪಿಎಲ್‌ ಮುಗಿದ ಬಳಿಕ ನಡೆಯುವ ಕಿರು ಹರಾಜಿನಲ್ಲಿ ಅವರು ಪಾಲ್ಗೊಳ್ಳುವಂತಿಲ್ಲ. ಅಲ್ಲದೆ ಹರಾಜಿನಲ್ಲಿ ಪಾಲ್ಗೊಂಡು ಅವರನ್ನು ತಂಡವೊಂದು ಖರೀದಿಸಿದ ಬಳಿಕ ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದರೆ ಅಂತಹ ಆಟಗಾರರರಿಗೆ 2 ವರ್ಷ ನಿಷೇಧ ಹೇರಲಾಗುತ್ತದೆ.

ಈ ಬಾರಿಯ ಐಪಿಎಲ್‌ ಆಡುವ ಹೆಚ್ಚುವರಿ ವೇತನ ಸಿಗಲಿದೆ. ತಾವು ಆಡುವ ಪ್ರತಿ ಪಂದ್ಯಕ್ಕೆ 7.5 ಲಕ್ಷ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಘೋಷಿಸಿದ್ದಾರೆ. ಆಟಗಾರರು ಹರಾಜಾಗುವ ಮೊತ್ತವನ್ನು ಹೊರತುಪಡಿಸಿ ಈ ಹೆಚ್ಚಿವರಿ ಹಣ ಸಿಗಲಿದೆ. ಒಬ್ಬ ಆಟಗಾರ ಆವೃತ್ತಿಯ ಎಲ್ಲ 14 ಲೀಗ್‌ ಪಂದ್ಯಗಳನ್ನು ಆಡಿದರೆ ಆತನಿಗೆ ಒಟ್ಟು 1.05 ಕೋಟಿ ಹೆಚ್ಚುವರಿ ವೇತನ ಸಿಗಲಿದೆ. ಕಡಿಮೆ ಮೊತ್ತಕ್ಕೆ ಹರಾಜಾಗಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಈ ನಿಯಮದಿಂದ ಹೆಚ್ಚಿನ ಅನುಕೂಲ ಸಿಗಲಿದೆ.