ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ (Naxal Attack) ಅಧಿಕಾರಿ ಸೇರಿದಂತೆ ಐವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಎಫ್) 153 ಬೆಟಾಲಿಯನ್ ತಂಡವು ಬೆಳಿಗ್ಗೆ 7 ಗಂಟೆ ಸುಮಾರಿಗೆ ತಾರೆಮ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಬಾಂಬ್ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ತಂಡವು ಈ ಪ್ರದೇಶದ ಚಿನ್ನಗೆಲೂರು ಸಿರ್‌ಪಿಎಫ್ ಶಿಬಿರಕ್ಕೆ ಸೇರಿದೆ.
ಐಇಡಿಗಳನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ವಿಲೇವಾರಿ ಮಾಡಲು ನಡೆಸಿದ ಡಿಮೈನಿಂಗ್ ಕ್ರಮದ ಸಮಯದಲ್ಲಿ, ಭದ್ರತಾ ಸಿಬ್ಬಂದಿ ಐಇಡಿಗೆ ಸಂಪರ್ಕಿಸಿದ್ದ ತಂತಿ ಗುರುತಿಸಿದ್ದರು. ಈ ವೇಳೆ ತಂತಿಗೆ ಜೋಡಿಸಲಾದ ಬಾಂಬ್‌ಗಾಗಿ ಹುಡುಕುತ್ತಿದ್ದಾಗ, ಅದು ಸ್ಫೋಟಗೊಂಡು ಐದು ಸಿಬ್ಬಂದಿಗೆ ಗಾಯಗಳಾಗಿವೆ.
ಸೈನಿಕರ ಮುಖ, ಕಣ್ಣುಗಳು ಮತ್ತು ಹೊಟ್ಟೆಯ ಮೇಲ್ಭಾಗಕ್ಕೆ ಗಾಯಗಳಾಗಿವೆ ಎಂದು ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಗಾಯಗೊಂಡ ಯೋಧರನ್ನು ಇಲ್ಲಿಂದ ಉತ್ತರಕ್ಕೆ 430 ಕಿ.ಮೀ ದೂರದಲ್ಲಿರುವ ರಾಜ್ಯ ರಾಜಧಾನಿ ರಾಯ್ಪುರಕ್ಕೆ ಸ್ಥಳಾಂತರಿಸಲಾಗಿದೆ.
ಗಾಯಗೊಂಡವರಲ್ಲಿ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ವೈದ್ಯ ಸಂಕೇತ್ ದೇವಿದಾಸ್, ಇನ್ಸ್ಪೆಕ್ಟರ್ ಸಂಜಯ್ ಕುಮಾರ್ ಮತ್ತು ಕಾನ್ಸ್ಟೇಬಲ್ಗಳಾದ ಬಿ ಪವನ್ ಕಲ್ಯಾಣ್, ಲೋಚನ್ ಮಹತೋ ಮತ್ತು ಧೋಲೆ ರಾಜೇಂದ್ರ ಅಶ್ರುಬಾ ಸೇರಿದ್ದಾರೆ.
ಮಾವೋವಾದಿ ವಿರೋಧಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಛತ್ತೀಸ್ಗಢದಲ್ಲಿ ಈ ಪಡೆಯನ್ನು ನಿಯೋಜಿಸಲಾಗಿದೆ. ಸುಕ್ಮಾ ಜಿಲ್ಲೆಯ ಕರ್ಕಂಗುಡದ ಕಾಡುಗಳಲ್ಲಿ ಸೆಪ್ಟೆಂಬರ್ 24 ರಂದು ಭದ್ರತಾ ಪಡೆಗಳು ಮತ್ತು ನಕ್ಸಲ್ ಕಾರ್ಯಕರ್ತರ ನಡುವೆ ನಡೆದ ಎನ್‌ಕೌಂಟರ್ ಆದ ಬಳಿಕ ಈ ದಾಳಿ ನಡೆದಿದೆ.
ಹಿಂದಿನ ದಿನ ನಾರಾಯಣಪುರದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ ಮೂವರು ನಕ್ಸಲರು ಸಾವನ್ನಪ್ಪಿದ್ದರು. ಛತ್ತೀಸ್‌ಗಢದ -ಮಹಾರಾಷ್ಟ್ರ ಅಂತರ ಗಡಿಯಲ್ಲಿರುವ ಅಭುಜ್ಮಾದ್ ಅರಣ್ಯದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ.
ಇದನ್ನೂ ಓದಿ: Arvind Kejriwal : ತಿಹಾರಿ ಜೈಲಲ್ಲಿ ಟಾರ್ಚರ್ ಕೊಟ್ರು, ಹರಿಯಾಣ ರ್ಯಾಲಿಯಲ್ಲಿ ಕೇಜ್ರಿವಾಲ್ ಹೇಳಿಕೆ
ಇದಕ್ಕೂ ಮುನ್ನ ಸೆಪ್ಟೆಂಬರ್ನಲ್ಲಿ ಸುಕ್ಮಾ ಜಿಲ್ಲೆಯ ಪ್ರತ್ಯೇಕ ಸ್ಥಳಗಳಿಂದ ಭದ್ರತಾ ಸಿಬ್ಬಂದಿ ಮೂರು ಐಇಡಿಗಳನ್ನು ವಶಪಡಿಸಿಕೊಂಡಿದ್ದರು. ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಸಲಾಟೊಂಗ್ ಭದ್ರತಾ ಶಿಬಿರದ ಕಡೆಗೆ ಎರಡು ವಿಭಿನ್ನ ದಿಕ್ಕುಗಳಿಂದ ರಸ್ತೆ ಭದ್ರತಾ ಕಾರ್ಯಾಚರಣೆಯ ಸಮಯದಲ್ಲಿ, ಸಿಆರ್ಪಿಎಫ್ನ 217 ನೇ ಬೆಟಾಲಿಯನ್ ಮತ್ತು ಅದರ ಗಣ್ಯ ಘಟಕ ಸಿ -208 ಕೋಬ್ರಾ ಬೆಟಾಲಿಯನ್ ತಂಡವು ತಲಾ 5 ಮತ್ತು 3 ಕೆಜಿ ತೂಕದ ಎರಡು ಟಿಫಿನ್ ಐಇಡಿಗಳನ್ನು ವಶಪಡಿಸಿಕೊಂಡಿದೆ.