ವಾದಿರಾಜ್ ಬಿ.
ಆರ್‌ಟಿಐ ಅಡಿ ಇಬ್ಬರು ವ್ಯಕ್ತಿಗಳಿಂದ ಒಂದೇ ಮಾಹಿತಿ ಕೇಳಿ ಅರ್ಜಿ
ರಾಜ್ಯಪಾಲ ಗೆಹ್ಲೋಟ್ ಅವರಿಂದ ಇಬ್ಬಗೆಯ ನೀತಿ
ಬೆಂಗಳೂರು: ರಾಜ್ಯ ಸರಕಾರ ಹಾಗೂ ರಾಜಭವನದ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ ಇದೀಗ, ರಾಜಭವನದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃ ತ್ವದ ಸಚಿವರ ನಿಯೋಗ ರಾಜಭವನಕ್ಕೆ ತೆರಳಿ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಬಾಕಿಯಿರುವ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿತ್ತು. ಇದೇ ವಿಷಯ ವಾಗಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವವರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.
ಈ ಎರಡೂ ಮನವಿಗೆ ಪ್ರತಿಕ್ರಿಯಿಸಿದ್ದ ರಾಜಭವನ, ತಮ್ಮ ಮುಂದೆ ಯಾವುದೇ ಪ್ರಕರಣ ಬಾಕಿಯಿಲ್ಲ ಎನ್ನುವ ಉತ್ತರ ನೀಡಿತ್ತು. ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿರುವ ಟಿ.ಜೆಅಬ್ರಾಹಂ ಮಾಹಿತಿ ಒದಗಿಸಿರುವುದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ರೀತಿ ರಾಜ್ಯಪಾಲರ ಕಚೇರಿ ಒಬ್ಬರಿಗೆ ಮಾಹಿತಿ ನೀಡಿ, ಇನ್ನೊಬ್ಬರಿಗೆ ಮಾಹಿತಿ ನೀಡಲು ನಿರಾಕರಿಸಿದ್ದೇಕೆ ಎನ್ನುವ ಪ್ರಶ್ನೆಗಳು ಶುರುವಾಗಿವೆ.
ಯಾವ ಮಾಹಿತಿ ಕೇಳಿದ್ದರು?
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೆ ಎಚ್.ಡಿ. ಕುಮಾರ ಸ್ವಾಮಿ, ಶಶಿಕಲಾ ಜೊಲ್ಲೆ, ಬಿ.ಎಸ್.ಯಡಿಯೂರಪ್ಪ, ಮುರುಗೇಶ್ ನಿರಾಣಿ, ಶಾಸಕ ಜನಾರ್ದನ ರೆಡ್ಡಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಷಯದಲ್ಲಿ ರಾಜ್ಯಪಾಲರ ಮುಂದೆ ವಿಚಾರಣೆಗೆ ಅನುಮತಿ ಕೋರಿ ರಾಜ್ಯದ ಸಕ್ಷಮ ಪ್ರಾಧಿಕಾರ, ದೂರುದಾರರು, ನಾಗರೀಕರು, ಲೋಕಾಯು ಕ್ತರು, ಸಿಐಡಿ, ಸಿಬಿಐ ಮತ್ತು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸಲ್ಲಿಸಿದ ಅರ್ಜಿಯ ಪ್ರತಿಗಳನ್ನು ನೀಡುವುದು ಮತ್ತು ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಪತ್ರದ ಪ್ರತಿಯನ್ನು ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಕೋರಿದ್ದರು.
ಆದರೆ ರಾಜ್ಯಪಾಲರ ಕಚೇರಿಯು 8(1) (ಎಚ್) ಅನ್ವಯ ಈ ಅರ್ಜಿಯನ್ನು ನಿರಾಕರಿಸಿದ್ದರು. ಆದರೆ ಇದೇ ಮಾಹಿತಿ ಯನ್ನು ಅಬ್ರಾಹಂ ಅವರಿಗೆ 10 ದಿನಗಳ ಹಿಂದೆ ನೀಡಿದ್ದಾರೆ. ಸಾಂವಿಧಾನಿಕ ಮುಖ್ಯಸ್ಥ ಸ್ಥಾನದಲ್ಲಿರುವ
ರಾಜ್ಯಪಾಲರೇ ಈ ರೀತಿ ಏಕಪಕ್ಷವಾಗಿ ನಡೆದುಕೊಂಡರೆ ರಾಜ್ಯದಲ್ಲಿ ಕಾರ್ಯಾಂಗ ವ್ಯವಸ್ಥೆ ಮೇಲೆ ಭಾರಿ ಪ್ರಭಾವ
ಬೀರುತ್ತದೆ ಎನ್ನುವ ಆರೋಪ ಕೇಳಿಬಂದಿದೆ.
ಒಂದೇ ಮಾಹಿತಿಗೆ ಎರಡೆರಡು ಉತ್ತರ
ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 8(1)(ಎಚ್) ಅನ್ವಯ ತನಿಖಾ ಕ್ರಮಕ್ಕೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವ ಯಾವುದೇ ಮಾಹಿತಿ ನೀಡುವುದಕ್ಕೆ ವಿನಾಯಿತಿ ಇರುತ್ತದೆ. ಆದ್ದರಿಂದ ತಾವು ಕೋರಿರುವ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ ೨(ಎಫ್) ಅನ್ವಯ ಮಾಹಿತಿ ಪರಿಭಾಷೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ನಿಮ್ಮ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಎಚ್.ಎಂ. ವೆಂಕಟೇಶ್ ಸಲ್ಲಿಸಿದ್ದ ಆರ್‌ಟಿಐ ಅರ್ಜಿಯನ್ನು ರಾಜಭವನ ತಿರಸ್ಕರಿಸಿದೆ. ಆದರೆ ಅಬ್ರಾಹಂ ಕೂಡ ಇದೇ ಮಾಹಿತಿ ಕೇಳಿದ್ದರೂ ರಾಜ್ಯಪಾಲರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಒಂಬತ್ತು ದಿನಗಳ ಒಳಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ಆದರೆ ವೆಂಕಟೇಶ್ ಅವರ ಅರ್ಜಿಗೆ ತನಿಖೆ ನಡೆಸಲು ಅಥವಾ ಅಪರಾಧಿಗಳ ದಸ್ತಗಿರಿಗೆ ಅಥವಾ ವಿಚಾರಣೆ ಕಾರ್ಯಕ್ಕೆ ಅಡಚಣೆ ಉಂಟಾಗುತ್ತದೆ. ಮಾಹಿತಿಗಳನ್ನು ಒದಗಿಸಲು ಸಾಧ್ಯವಿಲ್ಲ ಎಂಬ ನೆಪ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೇಲ್ಮನವಿ ಸಲ್ಲಿಕೆಗೆ ಸಿದ್ಧತೆ
ಇಬ್ಬರೂ ಒಂದೇ ಮಾಹಿತಿ ಕೇಳಿದ್ದರೂ ಅಬ್ರಾಹಂಗೆ ಮಾತ್ರ ಮಾಹಿತಿ ನೀಡಿರುವುದರಿಂದ ಪುನಃ ಮಾಹಿತಿ ಒದಗಿಸು ವಂತೆ ರಾಜ್ಯಪಾಲರ ಕಚೇರಿಯಲ್ಲಿಯೇ ಮೇಲ್ಮನವಿ ವೆಂಕಟೇಶ್ ನಿರ್ಧರಿಸಿದ್ದಾರೆ. ಒಂದು ವೇಳೆ ಆಗಲೂ ಮಾಹಿತಿ ನೀಡದಿದ್ದರೆ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳುವ ಪ್ರಯತ್ನ ಮಾಡುವು ದಾಗಿ ನಿರ್ಧರಿಸಿದ್ದಾರೆ.
*
ವಿವಿಧ ಪಕ್ಷಗಳ ನಾಯಕರ ಹಗರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯಪಾಲರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ನ್ಯಾಯ ಸಮ್ಮತವಾಗಿ ನನಗೆ ಕೊಡಬೇಕಾಗಿತ್ತು. ಅವರು ಏಕಪಕ್ಷಿಯವಾಗಿ, ತಾರತಮ್ಯ ಧೋರಣೆಯಿಂದ ವರ್ತಿಸುತ್ತಿದ್ದಾರೆ. ರಾಜ್ಯಪಾಲರ ಕಚೇರಿಯು ರಾಜಕೀಯ ಪಕ್ಷದ ಕಚೇರಿಯಾಗಿದೆಯೇ ಎಂಬ ಅನುಮಾನ ಮೂಡಿದೆ.
- ಎಚ್.ಎಂ.ವೆಂಕಟೇಶ್ ಸಾಮಾಜಿಕ ಹೋರಾಟಗಾರ
ಇದನ್ನೂ ಓದಿ: Invest Karnataka: 4,071 ಕೋಟಿ ರೂಪಾಯಿಯ 88 ಯೋಜನೆಗಳಿಗೆ ಅನುಮೋದನೆ, 10,585 ಉದ್ಯೋಗಾವಕಾಶ ಸೃಷ್ಟಿ