Monday, 25th November 2024

G Janardhan Reddy: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್‌; ಬಳ್ಳಾರಿ ಪ್ರವೇಶಕ್ಕಿದ್ದ ನಿರ್ಬಂಧ ತೆರವು

G Janardhan Reddy‌

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಆರೋಪಿ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿಗೆ (G Janardhan Reddy) ಬಿಗ್ ರಿಲೀಫ್ ಸಿಕ್ಕಿದೆ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ವೇಳೆ ಅವರಿಗೆ ಬಳ್ಳಾರಿ ಜಿಲ್ಲಾ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್‌ ತೆರವು ಮಾಡಿದೆ. ಇದರಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಅವರು ಬಳ್ಳಾರಿ ಜಿಲ್ಲೆ ಪ್ರವೇಶಿಸಬಹುದಾಗಿದೆ.

ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಎಂಎಂ ಸುಂದರೇಶ್ ನೇತೃತ್ವದ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ. ಪ್ರಕರಣದ ತನಿಖೆ ಮುಕ್ತಾಯಗೊಂಡು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಹಂತದಲ್ಲಿ ಸಾಕ್ಷ್ಯ ನಾಶ ಸಾಧ್ಯವಿಲ್ಲ ಎನ್ನುವ ವಾದ ಪುರಸ್ಕರಿಸಿದ ಕೋರ್ಟ್ ಜಾಮೀನಿನಲ್ಲಿದ್ದ ಷರತ್ತನ್ನು ರದ್ದು ಮಾಡಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜನಾರ್ದನರೆಡ್ಡಿ ಬಿಡುಗಡೆಯಾದ ಬಳಿಕ ಅವರಿಗೆ ಬಳ್ಳಾರಿ, ಕರ್ನೂಲು ಹಾಗೂ ಅನಂತಪುರ ಜಿಲ್ಲೆ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ. ಇದೀಗ

ನಿಷೇಧ ವಿಧಿಸಿದ್ದು ಯಾಕೆ?

ಆಂಧ್ರ ಪ್ರದೇಶದ ಅನಂತಪುರ, ಕರ್ನೂಲು ಹಾಗೂ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2011ರ ಸೆಪ್ಟೆಂಬರ್ 5ರಂದು ಜನಾರ್ದನ ರೆಡ್ಡಿಯ ಬಂಧನವಾಗಿತ್ತು. ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಜನಾರ್ದನ ರೆಡ್ಡಿ ಪ್ರಭಾವಿಯಾಗಿದ್ದು ಸಾಕ್ಷ್ಯಗಳ ನಾಶ ಮಾಡುವ ಆತಂಕವಿದೆ. ಈ ಕಾರಣಕ್ಕೆ ಬಳ್ಳಾರಿ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳ ಪ್ರವೇಶಕ್ಕೆ ನಿಷೇಧ ಹೇರಬೇಕು ಎಂದು ಸಿಬಿಐ ಮನವಿ ಮಾಡಿತ್ತು. ಆ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್‌ ಮೂರು ಜಿಲ್ಲೆಗಳ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.

ಈ ಸುದ್ದಿಯನ್ನೂ ಓದಿ | KS Bhagawan: : ಹಿಂದೂ ಧರ್ಮಕ್ಕೆ ಎಕ್ಕಡದಲ್ಲಿ ಹೊಡೆಯಬೇಕು: ಪ್ರೊ.ಕೆ.ಎಸ್ ಭಗವಾನ್

ಈ ಮಧ್ಯೆ ಮಗಳ ಮದುವೆ, ಮೊಮ್ಮೊಗಳ ನಾಮಕರಣ ಸೇರಿ ಇತರೆ ಕಾರ್ಯಕ್ರಮಗಳಿಗೆ ಮಾತ್ರ ಕೋರ್ಟ್ ಅನುಮತಿ ನೀಡಿತ್ತು. 2021ರ ನವೆಂಬರ್ ನಲ್ಲಿ ಕೊನೆಯದಾಗಿ ಬಳ್ಳಾರಿಗೆ ಜನಾರ್ದನ ರೆಡ್ಡಿ ಬಳ್ಳಾರಿಗೆ ಆಗಮಿಸಿದ್ದರು. 2011ರ ಸೆ.5ರಂದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು. ಮೂರು ವರ್ಷ ನಾಲ್ಕು ತಿಂಗಳು ಜೈಲಿನಲ್ಲಿದ್ದರು. ಜೈಲುವಾಸದ ಬಳಿಕ 2015 ರಲ್ಲಿ ಬಿಡುಗಡೆಯಾಗಿದ್ದರು. ಬಳ್ಳಾರಿ ಜಿಲ್ಲೆಯಿಂದ ದೂರವೇ ಇದ್ದ ಜನಾರ್ದನ ರೆಡ್ಡಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಬಳಿಕ ಕೆಕೆಆರ್‌ಪಿ ಪಕ್ಷವನ್ನು ಬಿಜೆಪಿಯೊಳಗೆ ವಿಲೀನ ಮಾಡಿದ್ದರು.